ಬೆಂಗಳೂರು: “ಪ್ಲೇ ಸ್ಟೋರ್’ ನಿಯಮಗಳ ತನಿಖೆ ವಿಚಾರವಾಗಿ ಗೂಗಲ್ ಸಂಸ್ಥೆ ವಿರುದ್ಧ ಜ. 5ರ ವರೆಗೆ ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಹೈಕೋರ್ಟ್‌ಗೆ ಹೇಳಿದೆ.
ನವೋದ್ಯಮ ಸಂಸ್ಥೆಯ ದೂರಿನ ಹಿನ್ನೆಲೆಯಲ್ಲಿ ಪ್ಲೇಸ್ಟೋರ್ ನಿಯಮಗಳ ಬಗ್ಗೆ ತನಿಖೆಗೆ ಆದೇಶಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಗೂಗಲ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ| ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಗೂಗಲ್ ಇಂಡಿಯಾ ಹಾಗೂ ಭಾರತೀಯ ಸ್ಪರ್ಧಾ ಆಯೋಗದ ಪರ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಮುಂದಿನ ವಿಚಾರಣೆವರೆಗೆ ಗೂಗಲ್ ಸಂಸ್ಥೆ ವಿರುದ್ಧ ಆತುರದ ಕ್ರಮ ಜರಗಿಸುವುದಿಲ್ಲ ಎಂದು ಸಿಸಿಐ ಪರ ವಕೀಲರು ಮುಚ್ಚಳಿಕೆ ನೀಡಿದ್ದಾರೆ ಎಂದು ಹೇಳಿ, ಅದನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಮುಂದಿನ ಜ. 5ಕ್ಕೆ ಮುಂದೂಡಿತು.
ಇದನ್ನೂ ಓದಿ:ದಲಿತರ ರಕ್ಷಣೆಗೆ ಸರಕಾರ ಬದ್ಧ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಷನ್ ಎಂಬ ನವೋದ್ಯಮ ಸಂಸ್ಥೆ, ನ್ಯೂ ಪ್ಲೇಸ್ಟೋರ್ ನೀತಿಯನ್ನು ಪ್ರಶ್ನಿಸಿ ಸಿಸಿಐ ಮೊರೆ ಹೋಗಿತ್ತು. ಅದನ್ನು ಆಲಿಸಿದ ಸಿಸಿಐ ಪ್ಲೇ ಸ್ಟೋರ್ ನಿಯಮಗಳ ಬಗ್ಗೆ ತನಿಖೆಗೆ ಆದೇಶಿಸಿತ್ತು, ಅಲ್ಲದೆ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಡಿ. 31ರ ಗಡುವು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದ ಗೂಗಲ್ ಸಂಸ್ಥೆ ಉತ್ತರಿಸಲು ಎಂಟು ವಾರ ಕಾಲಾವಕಾಶ ಕೋರಿತ್ತು.