ಹೊಸದಿಲ್ಲಿ : ಡಿಜಿಟಲ್ ಪೇಮೆಂಟ್ ಸ್ಪರ್ಧಾ ಕಣಕ್ಕೆ ಹೊಸದಾಗಿ ಸೇರಲು ಉದ್ಯುಕ್ತವಾಗಿರುವ ಗೂಗಲ್ ಮುಂದಿನ ವಾರವೇ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಆಧಾರಿತ “ತೇಜ್’ ಹೆಸರಿನ ಡಿಜಿಟಲ್ ಪೇಮೆಂಟ್ ಸೇವೆಯನ್ನು ಆರಂಭಿಸಲಿದೆ.
ದಿ ಕೆನ್ ಡಾಟ್ ಕಾಮ್ ವರದಿಯ ಪ್ರಕಾರ ಇದೇ ಸೆ.18ರಂದು ಆಲ್ಫಾಬೆಟ್ ಇಂಕ್ ಇದರ ಸಹೋದರ ಸಂಸ್ಥೆಯಾಗಿರುವ ಗೂಗಲ್, ಭಾರತದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಸೂಪರ್ ಸ್ಪರ್ಧಾತ್ಮಕವಾಗಿರುವ ಡಿಜಿಟಲ್ ಪೇಮೆಂಟ್ ಸೇವಾ ಕ್ಷೇತ್ರವನ್ನು ಪ್ರವೇಶಿಸಲಿದೆ.
ಹಿಂದಿಯಲ್ಲಿ ಅತ್ಯಂತ ವೇಗದ ಎನ್ನುವ ಅರ್ಥ ವಿರುವ ತೇಜ್ ಎಂಬ ಹೆಸರನ್ನು ಹೊಂದಿರುವ ಗೂಗಲ್ ಪೇಮೆಂಟ್ ಆ್ಯಪ್ ಬಹುತೇಕ ಎಂಡ್ರಾಯ್ಡ ಪೇ ಮಾದರಿಯಲ್ಲೇ ಇರಲಿದೆ ಎಂದು ಕೆನ್ ಡಾಟ್ ಕಾಮ್ ವರದಿ ತಿಳಿಸಿದೆ.
ಈ ವರದಿಯ ಬಗ್ಗೆ ಗೂಗಲ್ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಾಗಿದೆ.
ಯುಪಿಎ ಎನ್ನುವುದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಆರಂಭಿಸಿರುವ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ಇದು ಮೊಬೈಲ್ ವೇದಿಕೆಯಲ್ಲಿ ಎರಡು ಬ್ಯಾಂಕುಗಳ ನಡುವೆ ಹಣದ ತ್ವರಿತ ವರ್ಗಾವಣೆಯನ್ನು ಅನುಕೂಲಿಸುತ್ತದೆ.
ಭಾರತೀಯ ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಈಗಿರುವ ದೊಡ್ಡ ಹೆಸರೆಂದರೆ ಫೇಸ್ ಬುಕ್ ಒಡೆತನದ ವಾಟ್ಸಾಪ್.