Advertisement
ಫೆಬ್ರವರಿ 22 ಸ್ಟೀವ್ ಇರ್ವಿನ್ ಅವರ ಜನ್ಮದಿನ. ಈ ಸಂದರ್ಭಕ್ಕಾಗಿ ಗೂಗಲ್ ಇರ್ವಿನ್ ಅವರಿಗೆ ‘ಡೂಡಲ್’ ಗೌರವವನ್ನು ಸಲ್ಲಿಸಿದೆ. ಡೂಡಲ್ ನಲ್ಲಿ ಇರ್ವಿನ್ ಅವರು ತನ್ನ ತೋಳಿನಲ್ಲಿ ಮೊಸಳೆಯೊಂದನ್ನು ಹಿಡಿದುಕೊಂಡು ನಗುತ್ತಿದ್ದರೆ, ಆ ಮೊಸಳೆ ‘ಎಲ್’ ಅಕ್ಷರವನ್ನು ತನ್ನ ಬಾಯಲ್ಲಿ ಕಚ್ಚಿಕೊಂಡಿರುವಂತೆ ಕ್ರಿಯೇಟಿವ್ ಆಗಿ ಈ ಡೂಡಲ್ ಅನ್ನು ಗೂಗಲ್ ರಚಿಸಿದೆ.
1996 ರಿಂದ 2007ರವರೆಗೆ ಇರ್ವಿನ್ ಅವರ ‘ದಿ ಕ್ರೊಕಡೈಲ್ ಹಂಟರ್’ ಡಾಕ್ಯುಮಂಟರಿ ಸರಣಿಯು ವಿಶ್ವಾದ್ಯಂತ ಅಪಾರ ಜನಮನ್ನಣೆ ಪಡೆದುಕೊಂಡಿತ್ತು. ಇಷ್ಟು ಮಾತ್ರವಲ್ಲದೆ ಇರ್ವಿನ್ ಅವರು ತನ್ನ ಪತ್ನಿ ಟೆರ್ರಿ ಇರ್ವಿನ್ ಮತ್ತು ಇಬ್ಬರು ಮಕ್ಕಳೊಂದಿಗೆ ಹಲವಾರು ಟಿ.ವಿ. ಶೋಗಳನ್ನು ನಡೆಸಿಕೊಡುತ್ತಿದ್ದರು. ಇವುಗಳಲ್ಲಿ ಕ್ರೊಕ್ ಫೈಲ್ಸ್ (1999-2001), ದಿ ಕ್ರೊಕಡೈಲ್ ಹಂಟರ್ ಡೈರೀಸ್ (2002-2006) ಮತ್ತು ನ್ಯೂ ಬ್ರೀಡ್ ವೆಟ್ಸ್ (2005) ಸರಣಿಗಳು ಇರ್ವಿನ್ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿದ್ದವು. ಇಂತಹ ಪ್ರಾಣಿಪ್ರಿಯ ಸ್ಟೀವ್ ಇರ್ವಿನ್ ಇಂದು ಬದುಕಿದ್ದರೆ ಅವರಿಗೆ 57 ವರ್ಷಗಳಾಗಿರುತ್ತಿತ್ತು.
ತಮ್ಮ ಹೆತ್ತವರಿಂದ ಪ್ರಾರಂಭಿಸಲ್ಪಟ್ಟಿದ್ದ ಆಸ್ಟ್ರೇಲಿಯನ್ ಮೃಗಾಲಯದ ಒಡೆತನವನ್ನು ಇರ್ವಿನ್ ಅವರು ಹೊಂದಿದ್ದರು. ಈ ಮೃಗಾಲಯದಲ್ಲೇ ಇರ್ವಿನ್ ಅವರು ತಮ್ಮ ಪತ್ನಿಯನ್ನು ಪ್ರಥಮಬಾರಿ ಭೇಟಿಯಾಗಿದ್ದರು. ಇರ್ವಿನ್ ಕುಟುಂಬವೇ ವನ್ಯಜೀವಿಗಳು ಮತ್ತು ವನ್ಯಸ್ಥಳಗಳ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.