Advertisement

ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ಸಾರಾಭಾಯಿ ಜನ್ಮಶತಮಾನೋತ್ಸವ; ಗೂಗಲ್ ವಿಶೇಷ ಡೂಡಲ್

10:20 AM Aug 13, 2019 | Nagendra Trasi |

ನವದೆಹಲಿ:ಬಾಹ್ಯಾಕಾಶ ಸಂಶೋಧನೆಯ ಜನಕ, ಭಾರತದ ಖ್ಯಾತ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಗೂಗಲ್ ಸೋಮವಾರ ವಿಶಿಷ್ಟ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

Advertisement

ಭಾರತದ ಚಂದ್ರಯಾನ 2 ಮಿಷನ್ ನ ಕಾರ್ಯಪ್ರವೃತ್ತವಾದ ಸಂದರ್ಭದಲ್ಲಿಯೇ ವಿಕ್ರಮ್ ಸಾರಾಭಾಯಿ ಅವರ ಜನ್ಮಶತಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ವರದಿ ತಿಳಿಸಿದೆ.

ಇಸ್ರೋ ಸ್ಥಾಪಕ ವಿಕ್ರಮ್ ಸಾರಾಭಾಯಿ:

1919ರ ಆಗಸ್ಟ್ 12ರಂದು ಗುಜರಾತಿನ ಅಹ್ಮದಾಬಾದ್ ನಲ್ಲಿ ವಿಕ್ರಮ ಸಾರಾಭಾಯಿ ಜನನ. ಭಾರತದಲ್ಲಿ ವಿದ್ಯಾಭ್ಯಾಸ ಪಡೆದಿದ್ದ ವಿಕ್ರಮ್ ಅವರು ತಮ್ಮ 20ನೇ ವಯಸ್ಸಿನಲ್ಲಿಯೇ ಕೇಂಬ್ರಿಡ್ಜ್ ವಿವಿಯಿಂದ ಪ್ರಕೃತಿ ವಿಜ್ಞಾನದಲ್ಲಿ ಟ್ರೈಪಾಸ್ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. 1942ರಲ್ಲಿ ಕೇಂಬ್ರಿಡ್ಜ್ ನಿಂದ ಪಿಎಚ್ ಡಿ ಪದವಿ ಪಡೆದಿದ್ದರು.

1947ರಲ್ಲಿ ಅಹ್ಮದಾಬಾದ್ ನಲ್ಲಿ ಭೌತಿಕ ಸಂಶೋಧನಾ ಪ್ರಯೋಗಾಲಯ(ಪಿಆರ್ ಎಲ್)ವನ್ನು ವಿಕ್ರಮ್ ಸಾರಾಭಾಯಿ ಸ್ಥಾಪಿಸಿದ್ದರು. ರಷ್ಯಾ ಸ್ಪುಟ್ನಿಕ್ ಉಡಾವಣೆ ಬಳಿಕ ನಮ್ಮ ದೇಶಕ್ಕೂ ಬಾಹ್ಯಾಕಾಶ ಸಂಶೋಧನೆಯ ಅಗತ್ಯ ಇದೆ ಎಂಬುದನ್ನು ಭಾರತ ಸರಕಾರಕ್ಕೆ ಮನವರಿಕೆ ಮಾಡಿದ ಮೇಲೆ ತಾವೇ ಬಾಹ್ಯಾಕಾಶ ಸಂಶೋಧನೆ ಆರಂಭಿಸಿದ್ದರು.

Advertisement

1962ರಲ್ಲಿ ಇಂಡಿಯನ್ ನ್ಯಾಶನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ ಅನ್ನು ಹುಟ್ಟುಹಾಕಿದ್ದರು. ಬಳಿಕ ಇದಕ್ಕೆ ಇಸ್ರೋ ಎಂದು ನಾಮಕರಣ ಮಾಡಲಾಯಿತು. ವಿಕ್ರಮ್ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ವಿಜ್ಞಾನಿ ಸಿವಿ ರಾಮನ್ ಜೊತೆ ಸಂಶೋಧನೆಯಲ್ಲಿ ತೊಡಗಿದ್ದರು. ವಿಶ್ವ ಕಿರಣಗಳ ತೀಕ್ಷ್ಣತೆಯಲ್ಲುಂಟಾಗುವ ಬದಲಾವಣೆ ಬಗ್ಗೆ ಸಂಶೋಧನೆ ನಡೆಸಿದ್ದರು.

ಇಸ್ರೋ, ಪಿಆರ್ ಎಲ್ ಸ್ಥಾಪನೆ ನಂತರ ವಿಕ್ರಮ್ ಸಾರಾಭಾಯಿ ಅವರು ಅಹ್ಮದಾಬಾದ್ ನಲ್ಲಿ ಇಂಡಿಯನ್ ಇನ್ಸ್ ಟಿಟ್ಯೂಟ್(ಐಐಎಂ) ಆಪ್ ಮ್ಯಾನೇಜ್ ಮೆಂಟ್, ಕಮ್ಯುನಿಟಿ ಸೈನ್ಸ್ ಸೆಂಟರ್ ಅನ್ನು ಸ್ಥಾಪಿಸಿದ ಹೆಗ್ಗಳಿಕೆ ಅವರದ್ದು.

ಭಾರತದ ಮೊಟ್ಟ ಮೊದಲ ಉಪಗ್ರಹ ಆರ್ಯಭಟ ಸಂಶೋಧನಾ ತಂಡದ ಜತೆಗೂ ಡಾ.ಸಾರಾಭಾಯಿ ಕಾರ್ಯನಿರ್ವಹಿಸಿದ್ದರು. ಆದರೆ 1975ರಲ್ಲಿ ಆರ್ಯಭಟ ಉಡ್ಡಯನ ಆಗುವ ಮುನ್ನವೇ ಸಾರಾಭಾಯಿ ಇಹಲೋಕ(1971ರ ಡಿಸೆಂಬರ್ 31ರಂದು ನಿಧನ) ತ್ಯಜಿಸಿದ್ದರು. ಭಾರತೀಯ ಸಂಶೋಧನಾ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆಗಾಗಿ ಸಾರಾಭಾಯಿ ನಿಧನದ ಬಳಿಕ 1966ರಲ್ಲಿ ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿತ್ತು. 1972ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಕೂಡಾ ಸಾರಾಭಾಯಿ ಮುಡಿಗೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next