ಕನ್ನಡದಲ್ಲಿ “ಕಾಮನಬಿಲ್ಲು’ ಚಿತ್ರವನ್ನು ನೀವೆಲ್ಲ ನೋಡಿರಬಹುದು. ವರನಟ ಡಾ. ರಾಜಕುಮಾರ್, ಅನಂತನಾಗ್, ಸರಿತಾ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಈ ಚಿತ್ರ 80ರ ದಶಕದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿತ್ತು. ಈಗ ಅದೇ “ಕಾಮನಬಿಲ್ಲು’ ಅರ್ಥವನ್ನೇ ನೀಡುವ “ಮಳೆಬಿಲ್ಲು’ ಎನ್ನುವ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರುತ್ತಿದೆ.
ಅಂದಹಾಗೆ ಈಗ ತೆರೆಗೆ ಬರುತ್ತಿರುವ “ಮಳೆಬಿಲ್ಲು’ ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಚಿತ್ರ. ಈ ಚಿತ್ರಕ್ಕೆ ನಾಗರಾಜ್ ಹಿರಿಯೂರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. “ಅನನ್ಯ ಸಿನಿ ಎಂಟರ್‌ಪ್ರೈಸಸ್’ ಬ್ಯಾನರ್‌ನಲ್ಲಿ ನಿಂಗಪ್ಪ. ಎಲ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಹಿಂದೆ “ಕಾ’ ಚಿತ್ರದಲ್ಲಿ ಅಭಿನಯಿಸಿದ್ದ ಶರತ್, ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸಂಜನಾ ಆನಂದ್, ನಯನಾ, ಸೌಮ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಿರ್ಲೋಸ್ಕರ್ ಸತ್ಯನಾರಾಯಣ್, ಶ್ರೀನಿವಾಸ ಪ್ರಭು, ಆಂಜನಪ್ಪ, ಚಂದನ್, ಮೈಕೋ ನಾಗರಾಜ್, ದಮಯಂತಿ, ರವಿತೇಜ್, ಆನಂದ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಮಳೆಬಿಲ್ಲು’ ಚಿತ್ರತಂಡ, ಸದ್ಯ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ, ಕಾರ್ಯದರ್ಶಿ ಭಾ.ಮಾ ಹರೀಶ್, ಖಜಾಂಚಿ ಕೆ.ಎಂ. ವೀರೇಶ್, ಶಿಲ್ಪಾ ಶ್ರೀನಿವಾಸ್ ಮೊದಲಾದವರು ಹಾಜರಿದ್ದು “ಮಳೆಬಿಲ್ಲು’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗರಾಜ್ ಹಿರಿಯೂರು, “ಈ ಚಿತ್ರದಲ್ಲಿ ಕಥೆಯೇ ಹೀರೋ. ನಾನು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿ. ಗೂಗಲ್‌ನಲ್ಲೇ ಚಿತ್ರ ನಿರ್ದೇಶನ ಮಾಡುವುದನ್ನು ಕಲಿತುಕೊಂಡು ನನ್ನ ಮೊದಲ ಚಿತ್ರವನ್ನು ನಿರ್ದೇಶಿಸಿದ್ದೇನೆ. ಹುಡುಗರ ಜೀವನ ಬಿಳಿ ಹಾಳೆ ಇದ್ದಂತೆ. ಅವರ ಲೈಫ್ನಲ್ಲಿ ಹುಡುಗಿಯೊಬ್ಬಳು ಬಂದಾಗ ಅವರ ಜೀವನದಲ್ಲಿ “ಮಳೆಬಿಲ್ಲು’ ಬಂದ ಹಾಗಾಗುತ್ತದೆ. ಆ “ಮಳೆಬಿಲ್ಲು’ ಯಾರು ಅನ್ನೋದೆ ಈ ಚಿತ್ರ. ಇದರಲ್ಲೊಂದು ಪ್ರೇಮಕಥೆ ಇದೆ. “ಮಳೆಬಿಲ್ಲು’ನ್ನು ಒಂದು ಹೆಣ್ಣಿಗೆ ಹೋಲಿಕೆ ಮಾಡಿದ್ದೇವೆ. ಹೈಸ್ಕೂಲ್‌ನಲ್ಲಿ ನಾನು ಕಂಡ ಕೆಲ ಘಟನೆಗಳನ್ನು ಆಧರಿಸಿ ಈ ಚಿತ್ರ ನಿರ್ದೇಶಿಸಿದ್ದೇನೆ’ ಎಂದರು.
ನಿರ್ಮಾಪಕ ನಿಂಗಪ್ಪ ಎಲ್. ಮಾತನಾಡಿ, “ಈ ಚಿತ್ರವನ್ನು ಕಳೆದ ವರ್ಷ ಆರಂಭಿಸಿದ್ದೆವು. ಈಗಿನ
ಯೂಥ್ಸ್ಗೆ ಇಷ್ಟವಾಗುವ ಕಥೆ, ಲವ್ ಸ್ಟೋರಿ ಜೊತೆಗೆ ಒಂದು ಟ್ವಿಸ್ಟ್ ಎಲ್ಲವೂ ಚಿತ್ರದಲ್ಲಿದೆ. ಚಿತ್ರ ಸದ್ಯ ಬಿಡುಗಡೆಗೆ ಸಿದ್ಧವಾಗಿದ್ದು ಸೆನ್ಸಾರ್ ಮುಂದಿದೆ. ಇದೇ ಜುಲೈನಲ್ಲಿ ರಿಲೀಸ್ ಮಾಡುವ ಯೋಜನೆ ಇದೆ’ ಎಂದು ಹೇಳಿಕೊಂಡರು.
ಕಾರ್ಯಕ್ರಮದಲ್ಲಿ ಹಾಜರಿದ್ದ ನಾಯಕ ಶರತ್‌ನಾಯಕ ಶರತ್ ಮಾತನಾಡಿ, “ಹೈಸ್ಕೂಲ್ ಹುಡುಗ ಹಾಗೂ ಕಾಲೇಜ್ ವಿದ್ಯಾರ್ಥಿಯಾಗಿ ಚಿತ್ರದಲ್ಲಿ ಎರಡು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿದರು. ನಾಯಕಿ ಸಂಜನಾ ಆನಂದ್, ಭಾರ್ಗವಿ ಎಂಬ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ವೇದಿಕೆಯಲ್ಲಿ ನಟಿಯರಾದ ನಯನಾ, ಸೌಮ್ಯ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್ ಮಾತನಾಡಿ “ಇದೊಂದು ಮ್ಯೂಸಿಕಲ್ ಲವ್‌ಸ್ಟೋರಿ. ಈ ಚಿತ್ರದಲ್ಲಿ 8 ಹಾಡುಗಳನ್ನು ಬರೆದ ನಂತರ ಟ್ಯೂನ್ ಮಾಡಿಕೊಂಡು 10 ಹಾಡುಗಳು ಈ ಚಿತ್ರದಲ್ಲಿದ್ದು, ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿ ಬಂದಿವೆ’ ಎಂದು ಹೇಳಿದರು. “ಮಳೆಬಿಲ್ಲು’ ಚಿತ್ರಕ್ಕೆ ಸಿ. ನಾರಾಯಣ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿದೆ. ಒಟ್ಟಾರೆ “ಮಳೆಬಿಲ್ಲು’ ಹೇಗಿರಲಿದೆ ಅನ್ನೋದು ಇದೇ ಮಾನ್ಸೂನ್ ವೇಳೆಗೆ ಗೊತ್ತಾಗಲಿದೆ.