ಹೊಸದಿಲ್ಲಿ : ಮಲ್ಲಿಕಾ ಎ ಗಜಲ್ ಬಿರುದಾಂಕಿತ ಪ್ರಸಿದ್ಧ ಗಜಲ್ ಗಾಯಕಿ ಬೇಗಮ್ ಅಖ್‌ತರ್ ಅವರ 103ನೇ ಜನ್ಮದಿನದ ಅಂಗವಾಗಿ ಗೂಗಲ್ ಅತ್ಯಾಕರ್ಷಕ ಡೂಡಲ್ ರೂಪಿಸಿ ಆಕೆಯ ಸ್ಮರಣಾರ್ಥ ಅರ್ಪಣೆ ಮಾಡಿದೆ.
ಹಿಂದುಸ್ಥಾನೀ ಶಾಸ್ತೀಯ ರಂಗದಲ್ಲಿ ಬೇಗಮ್ ಅಖ್‌ತರ್ ಅವರದ್ದು ಬಹಳ ದೊಡ್ಡ ಹೆಸರು. 1914 ಅಕ್ಟೋಬರ್ 7ರಂದು ಜನಿಸಿದ್ದ ಬೇಗಮ್ ಅಖ್‌ತರ್, ಗಜಲ್, ದಾದ್ರಾ ಮತ್ತು ಠುಮ್ರಿ ಪ್ರಭೇದಗಳಲ್ಲಿ ಪ್ರಖ್ಯಾತ ಮೇರು ಗಾಯಕಿಯಾಗಿ ಮೆರೆದವರು.
ಬೇಗಮ್ ಅಖ್‌ತರ್‌ಗೆ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯಲ್ಲಿ ಪ್ರತಿಷ್ಠೆಯ ಸಂಗೀತ ನಾಟಕ ಪ್ರಶಸ್ತಿ ಲಭಿಸಿದೆ. ಭಾರತದ ಸರಕಾರ ಆಕೆಗೆ ಪದ್ಮಶ್ರೀ ಮತ್ತು ಪದ್ಮ ಭೂಷಣ (ಮರಣೋತ್ತರ) ಪ್ರಶಸ್ತಿ ನೀಡಿ ಗೌರವಿಸಿದೆ.
ಗಜಲ್ ಹಾಡುಗಾರಿಕೆಯಲ್ಲಿ ಯುಗ ಪ್ರವರ್ತಕರಾಗಿ ಮೆರೆದಿದ್ದ ಬೇಗಮ್ ಅಖ್‌ತರ್ ಅವರನ್ನು ಅನುಸರಿಸಿ ಪ್ರಸಿದ್ಧಿಗೆ ಬಂದಿದ್ದ ಕಲಾವಿದರ ಪೈಕಿ ಜಿಗರ್ ಮೊರಾದಾಬಾದಿ, ಕೈಫಿ ಆಜ್ಮಿ ಮತ್ತು ಶಕೀಲ್ ಬದಾಯೂನಿ ಪ್ರಮುಖರು.
ಬೇಗಮ್ ಅಖ್‌ತರ್ ರಂಗಭೂಮಿ ನಟಿಯಾಗಿ 1920ರ ದಶಕರದಲ್ಲಿ ಕೋಲ್ಕತದಲ್ಲಿ ಪ್ರಸಿದ್ಧಿಗೆ ಬಂದು ಅನಂತರದಲ್ಲಿ ಬೆಳ್ಳಿ ಪರದೆಯಲ್ಲೂ ಹಾಡುಗಾತಿ ನಟಿಯಾಗಿ ಚಿರಪರಿಚಿತರಾದರು. ಬ್ಯಾರಿಸ್ಟರ್ ಇಷ್‌ತಿಯಾಕ್ ಅಹ್ಮದ್ ಅಬ್ಟಾಸಿ ಅವರನ್ನು ವಿವಾಹವಾಗಿ ಕೌಟುಂಬಿಕ ಜೀವನದಲ್ಲಿ ತೊಡಗಿಕೊಂಡ ಬೇಗಮ್, ಅನಂತರದಲ್ಲಿ ಮಲ್ಲಿಕಾ ಎ ಗಜಲ್ ಎಂಬ ಬಿರುದು ಪಡೆದು ಜನಜನಿತರಾದರು.