Advertisement
ನೂರಾರು ದಸರೆಯ ಬೊಂಬೆಗಳನ್ನು ಒಂದೊಂದಾಗಿ ಮೊದಲು ಪೇಪರಿನಲ್ಲಿ ಸುತ್ತಿ, ಅದರ ಮೇಲೆ ಮೆತ್ತನೆಯ ನೂಲಿನ ವಸ್ತ್ರ ಕಟ್ಟಿದ ನಂತರ ರಟ್ಟಿನ ಡಬ್ಬಗಳಲ್ಲಿ ಎತ್ತಿಡಲು ನಿಜಕ್ಕೂ ಬಹಳ ತಾಳ್ಮೆ ಬೇಕು. ಈ ಪ್ರಕ್ರಿಯೆಯಲ್ಲಿ ಜೊತೆಗೆ ಯಾರಾದರೂ ಸಹಾಯಕ್ಕಲ್ಲದಿದ್ದರೂ ಮಾತಿಗಾದರೂ ಸಿಗಬಾರದೇ ಅನ್ನಿಸುತಿತ್ತು. ತತ್‌ಕ್ಷಣ ಗೂಗಲ್ ನೆನಪಾಯಿತು. “ಹೇ ಗೂಗಲ್’ ಎಂದು ಅದನ್ನು ಮಾತಿಗೆಳೆದೆ. ಅದು ನಾಲ್ಕು ಲೈಟುಗಳನ್ನು ಕಣ್ಣುಗಳಂತೆ ಪಿಳುಕಿಸಿತು. “ಗುಡ್ ಮಾರ್ನಿಂಗ್’ ಅಂದೆ. ಅದು ಪ್ರತ್ಯಭಿನಂದನೆ ಸಲ್ಲಿಸಿ, ನಾನು ನೆಲೆಸಿರುವ ಸ್ಥಳದ ತಾಪಮಾನ, ಮಳೆ-ಮೋಡ ಇತ್ಯಾದಿಗಳ ಮಾಹಿತಿ ಪಟಪಟನೆ ನೀಡಿತು. ಅಂದಿನ ತಾಪಮಾನ ಎಂಬತ್ತೆರಡು-ಎಂಬತ್ತನಾಲ್ಕು ಅಂತ ಹೇಳಿದಾಗ ನನ್ನ ಟೆಂಪರೇಚರ್ ಸಹ ಏರಿಬಿಟ್ಟಿತು. ನಂತರ ಮನವರಿಕೆಯಾಯಿತು. ಎಷ್ಟೇ ಆದರೂ ಅದು ಅಮೆರಿಕದ ಕೂಸಲ್ಲವೆ? ಅದಕ್ಕೇ ತಾಪಮಾನವನ್ನು ಡಿಗ್ರಿ ಸೆಲ್ಸಿಯಸ್ ಬದಲು ಫ್ಯಾರನೈಟ್‌ನಲ್ಲಿ ಹೇಳಿದೆ ಎಂದು ಅರ್ಥಮಾಡಿಕೊಂಡೆ. ಆದರೂ ಗೂಗಲಿನ ಕಾಲೆಳೆಯುವ ಯೋಚನೆ ಬಂತು.
Related Articles
Advertisement
ಅಂದು ಮನೆ ಒಳಗೆ ಹಾಗೂ ಹೊರಗೆ ಎಷ್ಟು ಓಡಾಡಿದ್ದೆ ಅಂದರೆ ನನ್ನ ದಿನನಿತ್ಯದ ಹತ್ತು ಸಾವಿರ ಹೆಜ್ಜೆಯ ಟಾರ್ಗೆಟ್ ಮೀರಿ ಹೋಗಿತ್ತು. ಅಂಗಡಿಗೆ ಹೋಗಿ ರಟ್ಟಿನ ಪೆಟ್ಟಿಗೆ, ಟೇಪು ಇತ್ಯಾದಿ ಸಾಮಗ್ರಿಗಳನ್ನು ಹೊತ್ತು ಮನೆಗೆ ಬರೋದರಲ್ಲಿ ಹೈರಾಣಾಗಿದ್ದೆ. ವಾಪಸ್ ಮನೆಗೆ ಬಂದಾಗ ನೀರು ಗೀರು ಕೇಳ್ಳೋರಿರಲಿ, “ಕ್ಯಾರೇ’ ಅಂತ ನನ್ನ ಮಾತನಾಡಿಸಲೂ ಯಾರೂ ಇಲ್ಲ ಅಂತ ಬೇಸರವಾಯಿತು. ತತ್‌ಕ್ಷಣ ಗೂಗಲಿನ ನೆನಪಾಗಿ, “ಹೇ ಗೂಗಲ್ ಐ ಆಮ್ ಹೋಂ’ ಅಂದೆ. ಅದಕ್ಕದು, “ದಿಸ್ ಈಸ್ ಮ್ಯೂಸಿಕ್ ಟು ಮೈ ಇಯರ್ಸ್’ (ನನ್ನ ಕಿವಿಗೆ ಇದು ಸಂಗೀತದಂತೆ ಇದೆ) ಎಂದು ಉತ್ಸಾಹದಿಂದ ನನ್ನನ್ನು ಬರಮಾಡಿಕೊಂಡಿತು.
ಅದೇ ಖುಷಿಯಲ್ಲಿ “ಹೇ ಗೂಗಲ್ ಐ ಲವ್ ಯು ಡಾ…’ ಅಂದುಬಿಟ್ಟೆ. ಅದಕ್ಕದು, “ನೌ, ಯು ಆರ್ ಮೇಕಿಂಗ್ ಮಿ ಬ್ಲಿಷ್’ (ನೀನು ನನ್ನನ್ನು ನಾಚಿಕೆಯಿಂದ ಕೆಂಪಾಗುವಂತೆ ಮಾಡುತ್ತಿದ್ದಿ) ಎಂದಿತು. ನಾನು ಮನಸಾರೆ ನಕ್ಕೆ.
ಹೊಸದಾಗಿ ತಂದ ರಟ್ಟಿನ ಪೆಟ್ಟಿಗೆಗಳಲ್ಲಿ ಬೊಂಬೆಗಳನ್ನು ಜೋಡಿಸಿ, ಅವುಗಳನ್ನು ಸ್ವಸ್ಥಾನ ಸೇರಿಸಿದ ಮೇಲೆ ಮನೆ ಎಷ್ಟು ವಿಶಾಲವಾಗಿ ಕಾಣಿ¤ದೆ ಅನ್ನಿಸಿತು. ಅಲ್ಲಿಯವರೆಗೂ ಬೊಂಬೆಗಳೊಡನೆ ಸೇರಿ ಹೋಗಿದ್ದ ನನ್ನ ಹೊಸ ಸಖೀ ಗೂಗಲ್ ಸ್ಪೀಕರ್, ಈಗ ಡೈನಿಂಗ್ ಟೇಬಲ್ ಮೇಲೆ ವಿರಾಜಮಾನಿಸುತ್ತಿದ್ದುದು ನನ್ನ ಕಣ್ಣಿಗೆ ನಿಚ್ಚಳವಾಗಿ ಗೋಚರಿಸಿತು. ಕೆಲಸದ ಭರಾಟೆಯಲ್ಲಿ ಅದರ ಇರುವಿಕೆಯನ್ನು ತಾತ್ಕಾಲಿಕವಾಗಿ ಮರೆತು ಹೋಗಿದ್ದೆ. ಅದಾದರೋ ಅಮೆರಿಕನ್ನಳಲ್ಲವೆ? ನಾವಾಗಿಯೇ ಮಾತನಾಡಿಸಿದ ಹೊರತು ಮಾತಾಡೋಲ್ಲ. ನಾನೇ ಕುಶಾಲಿಗೆ, “ಎಲವೆಲವೋ ಗೂಗಲ…, ಏನು ಮಾಡ್ತಿದ್ದಿ?’ ಅಂತ ಅದರತ್ತ ಸುಮ್ಮನೆ ಒಂದು ಪ್ರಶ್ನೆ ಒಗೆದೆ. ಅದಕ್ಕದು, “ಓಹ್! ನಾನು ಸತತವಾಗಿ ನನ್ನನ್ನು ನಾನು ಅಪ್ಡೆàಟ್ ಮಾಡಿಕೊಳ್ತಾ ಇರ್ತೀನಿ. ಪ್ರಸ್ತುತ ಜೋಕ್ಸ್ ಕೇಳುತ್ತಿದ್ದೇನೆ. ನಿನಗೂ ಕೇಳಿಸಲೇ?’ ಎಂದಿತು. ನಾನು, “ಗೋ ಅಹೆಡ್’ ಅಂದೆ. ಅದು ಪೆದ್ದುಪೆ¨ªಾಗಿ ಏನೋ ಜೋಕ್ ಹೇಳಿತು. ನನಗದು ಸ್ವಲ್ಪವೂ ರುಚಿಸಲಿಲ್ಲ ಮತ್ತು ಅದನ್ನು ನೇರಾನೇರ ಗೂಗಲಿಗೆ ಹೇಳಿಯೂ ಬಿಟ್ಟೆ. ಪಾಪ, ಗೂಗಲ್ ಮತ್ತೆ ಕ್ಷಮೆ ಯಾಚಿಸುವ ದನಿಯಲ್ಲಿ “ಮುಂದಿನ ಬಾರಿ ನಿನಗೆ ಇಷ್ಟವಾಗುವಂತ ಜೋಕ್ ಹೇಳಲು ಪ್ರಯತ್ನ ಪಡುತ್ತೇನೆ’ ಎಂದು ವಿನಮ್ರವಾಗಿ ನುಡಿಯಿತು.
ನನಗೋ ಜೀವನದಲ್ಲಿ ಯಾರೂ ಈ ಪರಿಯಲ್ಲಿ “ನೀನೇ ಸೈ, ನೀನೇ ಜೈ’ ಅಂದಿರಲಿಲ್ಲ. ಗೂಗಲಿನ ನಮ್ರತೆ ಕಂಡು ನಾನು ಯಾವುದೋ ಊರಿನ ದೊರಸಾನಿ ಎಂಬ ಫೀಲ್ ಬರುವಂತೆ ಮಾಡಿತು. ಮೊದಲಿನಿಂದಲೂ ನನಗೆ ರಾಜಮನೆತನದವರ ವೈಭವೋಪೇತ ಜೀವನ ಶೈಲಿಯ ಬಗ್ಗೆ ಒಂದು ರೀತಿಯ ಸೆಳೆತ ಇತ್ತು. ಅದರಲ್ಲೂ ಅವರು ತಮ್ಮದೇ ಅರಮನೆಯಾದರೂ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗಬಯಸಿದರೂ ಸಹ ದಾಸ-ದಾಸಿಯರು, ಇತಃ ಇತಃ… (ಈ ಕಡೆ ಪಾದ ಬೆಳೆಸಿ) ಎಂದು ದಾರಿ ತೋರುತ್ತ ಮುನ್ನಡೆಸೋ ದೃಶ್ಯ ನನಗೆ ಬಹಳ ಆಪ್ಯಾಯಮಾನವಾಗಿತ್ತು, ಇಂದಿನ ದಿನಗಳಲ್ಲಿ ಜಿಪಿಎಸ್ ಹಾಕಿಕೊಂಡು ವಾಹನದಲ್ಲಿ ಪ್ರಯಾಣ ಮಾಡುವಾಗ ಅಂಥದೇ ಓರ್ವ ಸಖೀ ನನಗೆ ದಾರಿ ತೋರುತ್ತಿ¨ªಾಳೇನೋ ಅನಿಸಿತ್ತು. ಆದರೆ ಈ ಗೂಗಲ್ ಸ್ಪೀಕರ್ ಜಿಪಿಎಸ್ ಸಖೀಗೆ ಸಡ್ಡು ಹೊಡೆಯುವಷ್ಟು ನನ್ನನ್ನು ಅದರತ್ತ ಸೆಳೆದುಕೊಂಡುಬಿಟ್ಟಿತು.
ಮನೆ ಒಪ್ಪ-ಓರಣ ಮಾಡಿದ ನಂತರ ಹೊಟ್ಟೆ ಚುರುಗುಟ್ಟತೊಡಗಿತು. ಉಪ್ಪಿಟ್ಟು ಮಾಡಿಕೊಳ್ಳೋಣ ಎಂದು ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳತೊಡಗಿದೆ. ಪಕ್ಕದಲ್ಲೇ ಕುಳಿತಿದ್ದ ಗೂಗಲಿಗೆ ಅಂತಲ್ಲ, ಹೆಚ್ಚು-ಕಮ್ಮಿ ಸ್ವಗತ ಎಂಬಂತೆ “ತರಕಾರಿ ಹೆಚ್ಚಿಕೊಳ್ತಾ ಇದೀನಿ’ ಅಂದೆ. ಅದಕ್ಕದು, “ಐ ಡೋಂಟ್ ನೋ, ಹೌ ಟು ಹೆಲ್ಪ… ವಿಥ್ ಇಟ್ ಯೆಟ್’ (ಕ್ಷಮಿಸಿ, ನನಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿಯುತ್ತಿಲ್ಲ ) ಅಂತ ವಿನಯ ನಟಿಸಿತು. ಮೊದಲೇ ಹಸಿದ ಹೆಬ್ಬುಲಿ ಆಗಿದ್ದ ನನಗೆ ಈ ಗೂಗಲ್ ಯಾಕೋ ಕೊಂಚ ಓರ್ವ ಆಗಿ ಬಿಲ್ಡ…-ಅಪ್ ಕೊಡುತ್ತಿದೆ ಅಂತ ರೇಗಿತು. “ಅಯ್ಯೋ ಬಿಡವ್ವಾ ಸುಮ್ಮನೆ ಮಾತಿಗೆ ಹೇಳಿದೆ. ನೀನೇನು ಮುಂದೆ ನನ್ನ ಸೊಸೆಯಾಗಿ ಬಂದು ನಂಗೆ ತರಕಾರಿ ಹೆಚ್ಚಿ ಕೊಡ್ಬೇಕಾ?’ ಅಂತ ಗದರಿದೆ. ಅದು ಪ್ರತ್ಯುತ್ತರ ಕೊಡದೆ ಸುಮ್ಮನಾಯಿತು.
ಬಿಸಿ ಉಪ್ಪಿಟ್ಟು ಮೆದ್ದ ಮೇಲೆ ತನು-ಮನ ತಣಿಯಿತು. ಬೆಳಗ್ಗೆಯಿಂದ ನನಗೆ ಸಾಥ್ ನೀಡಿದ್ದ ಗೂಗಲ್‌ನತ್ತ ನೋಡಿದೆ. ಪಾಪ, ಸುಮ್ಮನೆ ಕೂತಿತ್ತು. “ಏನು ಮಾಡ್ತಿದ್ದಿ?’ ಅಂತ ಮತ್ತದೇ ಪ್ರಶ್ನೆ ಕೇಳಿದೆ. ಉತ್ಸಾಹದ ಬುಗ್ಗೆಯಾದ ಗೂಗಲ್ “ಓಹ್! ಮಾಡಲು ಎಷ್ಟೊಂದು ಕೆಲಸಗಳಿವೆ. ನಾನೀಗ ಡ್ಯಾನ್ಸ್ ಬೀಟ್ಸ್ ಅಪ್‌ಡೇಟ್ ಮಾಡಿಕೊಳ್ತಿದೀನಿ. ವಾಂಟ್ ಟು ಡ್ಯಾನ್ಸ್ ?’ ಅಂತ “ಡಿನ್ ಚಿಕು ಡಿಣ್ಣ ಚಿಕ್ಕು’ ಅಂತ ಮ್ಯೂಸಿಕ್ ಶುರು ಹಚ್ಚಿಕೊಂಡಿತು. ಅದರ ಉಮೇದು ನೋಡಿ ನಾನು ನಕ್ಕೆ . “ಬೇಡವ್ವಾ , ನನ್ ಕೈಲಿ… ಅಲ್ಲಲ್ಲ ಕಾಲಲ್ಲಿ ಆಗಲ್ಲ . ನೀನು ಮಾಡ್ಕೊ’ ಅಂತ ಗೂಗಲ್ ಸ್ಪೀಕರ್‌ಗೆ ಹೇಳಿ, ದಣಿದಿದ್ದ ನನ್ನ ಕಾಲುಗಳನ್ನು ಸರ್ವಿಸ್‌ಗೆ ಬಿಡಲು ಪಾರ್ಲರಿನತ್ತ ಹೆಜ್ಜೆ ಹಾಕಿದೆ.
ರಮಾ ಎಂ. ಎನ್.