Advertisement

8 ವರ್ಷಗಳ ಬಳಿಕ ಲೋಗೋ ಬದಲಿಸಿದ ಗೂಗಲ್ ಕ್ರೋಮ್!

03:31 PM Feb 12, 2022 | Team Udayavani |

ಕಳೆದ 8 ವರ್ಷಗಳಲ್ಲಿ ಮೊದಲ ಬಾರಿಗೆ, ಇಂಟರ್ನೆಟ್ ದೈತ್ಯ ಗೂಗಲ್ ಕ್ರೋಮ್ ತನ್ನ ಲೋಗೋವನ್ನು ಬದಲಿಸಿದೆ. ಮೇಲಿಂದ ಕಣ್ಣು ಹಾಯಿಸಿ ನೋಡಿದರೆ ಬದಲಾವಣೆ ಗೊತ್ತಾಗದು. ಬದಲಿಗೆ, ಸ್ಪಷ್ಟವಾಗಿ ಗಮನಿಸಿದರೆ ಲೋಗೋದಲ್ಲಾದ ಬದಲಾವಣೆಯನ್ನು ಕಾಣಬಹುದಾಗಿದೆ. ಗೂಗಲ್ ಕ್ರೋಮ್‌ನ ಡಿಸೈನರ್ ಎಲ್ವಿನ್ ಹೂ, ಟ್ವಿಟರ್‌ನಲ್ಲಿನ ಲೋಗೋ ಮರುವಿನ್ಯಾಸಗೊಳಿಸಿರುವುದರ ಬಗ್ಗೆ ಟ್ವೀಟ್ ಥ್ರೆಡ್‌ ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

Advertisement

ಹಿಂದಿನ ಲೋಗೋದಲ್ಲಿದ್ದ ಕೆಂಪು, ಹಳದಿ ಮತ್ತು ಹಸಿರು – ಇದೇ ಮೂರು ಬಣ್ಣಗಳನ್ನೇ ಹೊಸ ಲೋಗೋದಲ್ಲೂ ಮುಂದುವರೆಸಲಾಗಿದ್ದು, ಪ್ರತಿ ಬಣ್ಣದ ನಡುವೆ ಇದ್ದ ಶ್ಯಾಡೋ (ನೆರಳು) ತೆಗೆಯಲಾಗಿದೆ. ಹಾಗಾಗಿ ಎರಡು ಲೋಗೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸ್ವಲ್ಪ ಎದ್ದು ಕಾಣುತ್ತಿದ್ದ ಮೂರು ಬಣ್ಣಗಳು ಈಗ ಸಮಾನ ರೇಖೆಯಲ್ಲಿ ಗೋಚರಿಸುತ್ತದೆ. ಮತ್ತು ಮಧ್ಯದಲ್ಲಿರುವ ನೀಲಿ ಬಣ್ಣದ ವೃತ್ತಾಕಾರವು ಸ್ವಲ್ಪ ದೊಡ್ಡದಾಗಿದೆ. ಲೋಗೋದಲ್ಲಿನ ಬಣ್ಣಗಳು ಹೆಚ್ಚು ರೋಮಾಂಚಕವಾಗಿ ಕಾಣುತ್ತವೆ (ಬಹುಶಃ ವಿನ್ಯಾಸ ತಂಡವು ನೆರಳುಗಳನ್ನು ತೊಡೆದುಹಾಕುವ ಕಾರಣದಿಂದಾಗಿ)

ಕ್ರೋಮ್ ಲೋಗೋ ಎಲ್ಲಾ ಸಿಸ್ಟಂಗಳಲ್ಲಿ ಒಂದೇ ರೀತಿ ಕಾಣುವುದಿಲ್ಲ!

ಗೂಗಲ್ ಕ್ರೋಮ್‌ನ ಲೋಗೋ ಎಲ್ಲಾ ಸಿಸ್ಟಂಗಳಲ್ಲಿ ಒಂದೇ ರೀತಿ ಕಾಣಿಸುವುದಿಲ್ಲ (ಡಾಕ್ ಅಥವಾ ಟಾಸ್ಕ್ಬಾರ್‌ನಲ್ಲಿ ನೋಡುವುದಾದರೆ). ಸಿಸ್ಟಂನಲ್ಲಿರುವ ಇತರ ಲೋಗೋಗಳಿಗೆ ಪೂರಕವಾಗುವಂತೆ ಲೋಗೋವನ್ನು ವಿನ್ಯಾಸಗೊಳಿಸಲಾಗಿದೆ. ಕ್ರೋಮ್ ಒಎಸ್‌ನಲ್ಲಿ, ಲೋಗೋ ಹೆಚ್ಚು ವರ್ಣರಂಜಿತವಾಗಿ ಕಾಣುತ್ತದೆ, ಆದರೆ ಮ್ಯಾಕ್‌ನಲ್ಲಿ, ಲೋಗೋದಲ್ಲಿ ಸಣ್ಣ ಪ್ರಮಾಣದಲ್ಲಿ ನೆರಳು ಕಾಣುತ್ತದೆ. ಇದರಿಂದಾಗಿ ಮ್ಯಾಕ್‌ನಲ್ಲಿ, ಡಾಕ್‌ನಿಂದ ಲೋಗೋ “ಪಾಪಿಂಗ್ ಔಟ್” (ಎದ್ದು ಹೊರಬಂದಂತೆ) ರೀತಿಯಲ್ಲಿ ಕಾಣುತ್ತದೆ. ಈ ನಡುವೆ, ವಿಂಡೋಸ್ 10 ಹಾಗೂ 11 ನಲ್ಲಿ ಸ್ವಲ್ಪ ಹೆಚ್ಚಿನ ಗ್ರೇಡಿಯಂಟ್ ಬಣ್ಣ ನೀಡಲಾಗಿದೆ. ವಿಂಡೋಸ್‌ ನಲ್ಲಿರುವ ಇತರ ಲೋಗೋಗಳೊಂದಿಗೆ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ. ನೀವು ಕ್ರೋಮ್ ಕ್ಯಾನರಿ (ಕ್ರೋಮ್ ನ ಡೆವಲಪರ್ ವರ್ಷನ್) ಅನ್ನು ಬಳಸುತ್ತಿದ್ದರೆ, ಕ್ರೋಮ್‌ನ ಹೊಸ ಐಕಾನ್ ಅನ್ನು ನೋಡಬಹುದಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಎಲ್ಲಾ ಪ್ಲಾಟ್‌ಫಾರ್ಮ್ನಲ್ಲಿ ಹೊಸ ಲೋಗೋ ಕಾಣಲು ಸಿಗುತ್ತದೆ ಎಂದು ಹು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಜಿಯೋ ಸಹಯೋಗದೊಂದಿಗೆ 5G ನೆಟ್‌ವರ್ಕ್ ಪ್ರಯೋಗ ನಡೆಸಿದ ಒಪ್ಪೋ

Advertisement

2008 ರಿಂದ ಇಲ್ಲಿಯವರೆಗೆ ಗೂಗಲ್ ಕ್ರೋಮ್ ತನ್ನ ಲೋಗೋದಲ್ಲಿ ಕೆಲವು ಬಾರಿ ಅಲ್ಪ ಸ್ವಲ್ಪ ಬದಲಾವಣೆಗಳನ್ನೂ ಮಾಡುತ್ತಿದ್ದರೂ, ಬಣ್ಣ ಹಾಗೆಯೇ ಇದೆ ಹಾಗೂ ಲುಕ್ ವಿಷಯಕ್ಕೆ ಬಂದರೆ ಅಪ್ಡೇಟ್ ಆದಂತೆ ಲೋಗೋ ಬಹಳ ಸರಳತೆ ಪಡೆಯುತ್ತಿದೆ. ಶೈನಿಂಗ್ 3ಡಿ ರೂಪದಲ್ಲಿ ಆರಂಭದಲ್ಲಿ ಕಾಣುತ್ತಿದ್ದ ಕ್ರೋಮ್ ಲೋಗೋ, ಇಂದು ಸರಳ 2ಡಿ ರೂಪ ಪಡೆದಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ 3ಡಿ ಕಡೆ ಕ್ರೋಮ್ ಲೋಗೋ ಮರಳಿದರೂ ಅಚ್ಚರಿಯಿಲ್ಲ.

– ಇಂದುಧರ ಹಳೆಯಂಗಡಿ

Advertisement

Udayavani is now on Telegram. Click here to join our channel and stay updated with the latest news.

Next