Advertisement
ಕಳೆದ ಶತಮಾನದ ಎಪ್ಪತ್ತನೇ ದಶಕದ ಕೊನೆಯಲ್ಲಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಣ ಶೀತಲ ಸಮರ ಅನೇಕ ಬಾಹ್ಯಾಕಾಶ ಯೋಜನೆಗಳ ಜನನಕ್ಕೆ ಕಾರಣವಾಯಿತು. ಬಾಹ್ಯಾಕಾಶದಲ್ಲಿ ಹಿರಿಮೆ ಪಡೆದಿದ್ದ ಸೋವಿಯತ್ ಒಕ್ಕೂಟ, ತನ್ನ ಮೇಲೆ ಅಲ್ಲಿಂದಲೇ ಯುದ್ಧ ಸಾರಬಹುದೆಂಬ ಭೀತಿ ಅಮೆರಿಕಕ್ಕಿತ್ತು. ಅಂಥ ಸಂದರ್ಭಗಳಲ್ಲಿ ಕಂಪ್ಯೂಟರುಗಳಲ್ಲಿದ್ದ ತನ್ನ ಅಗಾಧ ಮಾಹಿತಿ ಭಂಡಾರವನ್ನು ಸಂರಕ್ಷಿಸಿಕೊಳ್ಳಲು ಪಶ್ಚಿಮ ಮತ್ತು ಪೂರ್ವ ತೀರಗಳ ನಡುವೆ ಆರಂಭಿಸಿದ್ದು ಅಡ್ವಾನ್ಸ್‌ಡ್ ರೀಸರ್ಚ್ ಪ್ರಾಜೆಕr… ಏಜೆನ್ಸಿ ಎಂಬ ಮಿಲಿಟರಿ ಸಂಸ್ಥೆಯ ಮಾಹಿತಿ ಜಾಲ- ಅರ್ಪಾನೆಟ್. ಮುಂದೆ ಶೀತಲ ಸಮರದ ಕಾರ್ಮೋಡ ಕಳೆದ ನಂತರ ಅಮೆರಿಕದ ವಿಶ್ವವಿದ್ಯಾಲಯಗಳನ್ನು ವ್ಯಾಪಿಸಿಕೊಂಡ ಜಾಲವು, ಯುರೋಪಿನ ಶೈಕ್ಷಣಿಕ ಸಂಸ್ಥೆಗಳಿಗೂ ವಿಸ್ತಾರಗೊಂಡಿತು. ಮುಂದೆ ಇಂಟರ್ನೆಟ್ ಎಂಬ ಜಗದ್‌ವ್ಯಾಪಿ ಜಾಲದ ಜನನಕ್ಕೆ ಕಾರಣವಾಯಿತು.
ಸರ್ವಾಂತರ್ಯಾಮಿ ಪಟ್ಟ ಪಡೆದಿರುವ “ಗೂಗಲ…’, ಮಾಹಿತಿಯನ್ನು ಅರಸಿ ನಿಮಗೆ ಕೊಡುವುದು ಹೇಗೆ? ಎಂಬ ಪ್ರಶ್ನೆ ನಿಮ್ಮೆಲ್ಲರನ್ನೂ ಕಾಡುವುದು ಸಹಜ. ಹುಡುಕಾಟಕ್ಕೆಂದೇ ನಿರ್ಮಿತವಾದ ವಿಶೇಷ “ಆಲ್ಗಾರಿದಮ…’ ಅನ್ನು (ತಾರ್ಕಿಕ ಸೂತ್ರಗುಚ್ಚ) ಅದು ರೂಪಿಸಿಕೊಂಡಿದೆ. ಇದರ ಬಗೆಗಿನ ವಿವರಗಳನ್ನು “ಗೂಗಲ…’ ಬಿಟ್ಟುಕೊಡುವುದಿಲ್ಲ- ಥೇಟ್, ತನ್ನ ಪೇಯದಲ್ಲೇನಿದೆ ಎಂಬುದನ್ನು ಕೋಕಾಕೋಲಾ ಸಂಸ್ಥೆ ಬಿಟ್ಟುಕೊಡದ ಗುಟ್ಟಿನಂತೆ. ಸಾಮಾನ್ಯವಾಗಿ ಇಂಥ ಸರ್ಚ್‌ಎಂಜಿನ್‌ಗಳು ಕೃತಕ ಬುದ್ಧಿಮತ್ತೆಯುಳ್ಳ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಪ್ರೋಗ್ರಾಮ್‌ಗಳನ್ನು ಹೊಂದಿರುತ್ತದೆ. ತನ್ನ ಬಳಕೆದಾರರ ಇಷ್ಟ ಕಷ್ಟಗಳನ್ನು ತಿಳಿದುಕೊಂಡು ಅದಕ್ಕನುಗುಣವಾಗಿ ಉತ್ತಮ ಸೇವೆಯನ್ನು ಇವು ಒದಗಿಸುತ್ತವೆ.
Related Articles
Advertisement
ಮಾರ್ಗದರ್ಶಕನೂ ಹೌದು…ನಾವು ನೀವು ಪ್ರಯಾಣದ ಸಂದರ್ಭದಲ್ಲಿ ಬಳಸುವ ಗೂಗಲ್ ಮ್ಯಾಪ್ಸ್, ರಸ್ತೆ ಮಾರ್ಗದರ್ಶನ ನೀಡುವ ಅದ್ಭುತ ಸ್ವಯಂಚಾಲಿತ ವ್ಯವಸ್ಥೆ. ಪ್ರಯಾಣಿಸುವ ಸಮಯದಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇದೆಯಾ? ತಾವು ಇರುವಲ್ಲಿಂದ ನಿಗದಿತ ಸ್ಥಳ ತಲುಪಲು ಎಷ್ಟು ಗಂಟೆ ಬೇಕಾಗುತ್ತದೆ ಎಂಬುದರ ಅಂದಾಜು, ರಸ್ತೆಯಲ್ಲಿ ಸಿಗುವ ಹೋಟೆಲ್‌ಗಳು, ಪೆಟ್ರೋಲ್ ಬಂಕ್, ಪೋಲಿಸ್ ಠಾಣೆ, ಎಟಿಎಂ, ಮತ್ತಿತರ ಎಲ್ಲದರ ಮಾಹಿತಿಯನ್ನು ಅದು ನೀಡಬಲ್ಲದು. ಈ ಹಿಂದೆ ಆ ಮಾರ್ಗದಲ್ಲಿ ಗೂಗಲ್ ಮ್ಯಾಪ್ ಸೇವೆಯನ್ನು ಬಳಸಿದವರ ಅನುಭವವನ್ನು ನೆನಪಿಟ್ಟುಕೊಂಡು ಎಲ್ಲಾ ಮಾಹಿತಿಯನ್ನು ಶೇಖರಿಸಿಟ್ಟುಕೊಂಡಿರುತ್ತದೆ. ಅದರ ಆಧಾರದ ಮೇಲೆ ಪ್ರತೀ ಬಾರಿ ಸುಧಾರಿತ ಫಲಿತಾಂಶವನ್ನು ಗೂಗಲ್‌ಗೆ ನೀಡಲು ಸಾಧ್ಯವಾಗುತ್ತದೆ. ಹಣ ಎಲ್ಲಿಂದ ಬರುತ್ತೆ?
ಅದೆಷ್ಟೋ ಸೇವೆ, ಸೌಲಭ್ಯಗಳನ್ನು ಉಚಿತವಾಗಿ ನೀಡುವ ಗೂಗಲ್ ತನ್ನ ಕಾರ್ಯನಿರ್ವಹಣೆಗೆ ಹಣ ಸಂಗ್ರಹಿಸುವುದು ಎಲ್ಲಿಂದ? ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಉತ್ತರ ಇಲ್ಲಿದೆ. ಅದು ಪ್ರೀಮಿಯಂ ಸೇವೆ ಬೇಕೆಂದವರಿಗೆ ಶುಲ್ಕ ವಿಧಿಸುತ್ತದೆ. ಉದಾ: ಜಿ-ಮೇಲ್ ಅನ್ನು ನಿಮ್ಮ ಕಚೇರಿ ಕೆಲಸಗಳಿಗಾಗಿ ಬಳಸುವ ಇಚ್ಚೆ ಇದ್ದರೆ ಅದಕ್ಕೆ ಪೂರಕವಾಗಿ ಹೆಚ್ಚಿನ ಸುರಕ್ಷೆ, ಕಂಪನಿಯ ಹೆಸರುಳ್ಳ ಕಸ್ಟಮೈಸ್ಡ್ ಇಮೇಲ್ ಐಡಿಗಳು, ಹೆಚ್ಚಿನ ಸಂಗ್ರಾಹಕ (ಸ್ಟೋರೇಜ್) ಮತ್ತಿತರ ಸೌಕರ್ಯಗಳನ್ನು ನೀಡಲು ಸೇವಾ ಶುಲ್ಕವನ್ನು ವಿಧಿಸುತ್ತದೆ. ಅಲ್ಲದೇ, ಸರ್ಚ್ ಮಾಡಿದ ನಂತರ ಫಲಿತಾಂಶಗಳು ತೆರೆದುಕೊಳ್ಳುವ ಪುಟದಲ್ಲಿ ಮೇಲ್ಗಡೆ ಕೆಲ ಜಾಹೀರಾತುಗಳನ್ನು ನೀವು ಗಮನಿಸಿರಬಹುದು. ಯೂಟ್ಯೂಬ್ ವಿಡಿಯೋ ಶುರುವಾಗುವ ಮುನ್ನವೂ ಕೆಲವೊಮ್ಮೆ ಜಾಹೀರಾತುಗಳು ಮೂಡುತ್ತವೆ. ಆ ಸಂಸ್ಥೆಗಳು ಗೂಗಲ್‌ಗೆ ಹಣ ಸಂದಾಯ ಮಾಡುತ್ತವೆ. ಯಾರು ಬೇಕಾದರೂ ಈ ರೀತಿ ಹಣ ಪಾವತಿಸಿ ತಮ್ಮ ಜಾಹೀರಾತನ್ನು ಗೂಗಲ್ ಮೂಲಕ ಬಿತ್ತರಿಸಬಹುದು. ಮಾಹಿತಿಯ ಮುಕ್ತ ಪ್ರಸರಣೆಯ ಯುಗದಲ್ಲಿ ಗೂಗಲ್ ಅನ್ನು ದೂರುವವರ ಪಟ್ಟಿಯೂ ದೊಡ್ಡದಿದೆ. ನಮ್ಮೆಲ್ಲರ ಖಾಸಗಿ ಮಾಹಿತಿಯನ್ನು ಅದು ತನ್ನ ಸ್ವಂತ ಲಾಭಕ್ಕೆ ಬಳಸಬಹುದಾದ ಆತಂಕವಿದೆ. ಹಾಗೆಯೇ ತನ್ನ ಜಾಹೀರಾತು ಆದಾಯ ಹೆಚ್ಚಿಸಿಕೊಳ್ಳಲು ತನ್ನ ಬಳಕೆದಾರರ ಖಾಸಗಿ ಮಾಹಿತಿಯನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆಯೆಂಬ ಕಳಂಕವೂ ತಗಲಿಕೊಂಡಿದೆ. ಇವೆಲ್ಲದರ ನಡುವೆ ತನ್ನ ಇಪ್ಪತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳುವ ಹೊಸ ಯೋಜನೆಗಳತ್ತ ಗೂಗಲ್ ಗಮನ ಹರಿಸುತ್ತಿದೆ. ಗೂಗಲ್ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ನಮಗಾಗದು ಎಂದರೆ ಅತಿಶಯೋಕ್ತಿಯೇನಲ್ಲ. ಗೂಗಲ್ ಹೆಜ್ಜೆಗುರುತು
* ಭಾರತದಲ್ಲಿ 2004ರಿಂದ ಕಾರ್ಯನಿರ್ವಹಿಸುತ್ತಿರುವ ಗೂಗಲ…, ಇತರೆ ದೇಶಗಳೊಂದಿಗೆ ಕಲಿತ ಪಾಠದಿಂದಾಗಿ ಭಾರತ ಸರ್ಕಾರದೊಂದಿಗೆ ಸಮರಕ್ಕೆ ಇಳಿದಿಲ್ಲ. ಭಾರತೀಯರಿಗೆ ಅನುಕೂಲಕರವಾದ ಹಲವಾರು ಸೌಕರ್ಯಗಳನ್ನು ಅದು ಪರಿಚಯಿಸಿದೆ. ಉದಾಹರಣೆಗೆ ಭಾರತೀಯ ಭಾಷೆಗಳಲ್ಲಿಯೇ ಹುಡುಕಾಟ ನಡೆಸುವ ಸೌಲಭ್ಯ, ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳ ನಡುವಣ ಲಿಪ್ಯಂತರ ಮತ್ತು ಭಾಷಾಂತರ ಸೌಕರ್ಯ, ತನ್ನ ನಿತ್ಯ ಚಿತ್ರ- ಶೀರ್ಷಿಕೆಯಡಿಯಲ್ಲಿ ಅನೇಕ ಭಾರತೀಯ ಸಾಧಕರ ಕಿರು ಪರಿಚಯ (ಗೂಗಲ್ ಡೂಡಲ್), ಸ್ಥಳೀಯ ಸಂಸ್ಥೆಗಳೊಂದಿಗಿನ ಸೌಹಾರ್ದ ಇತ್ಯಾದಿ. * ತನ್ನ ಕಾರ್ಯವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಜನಪ್ರಿಯ ವಿಡಿಯೋ ತಾಣವಾದ ಯೂಟ್ಯೂಬ…, ಛಾಯಾಚಿತ್ರಗಳ ಹಂಚಿಕೆ ಸೇವೆಯಾದ “ಪಿಕಾಸಾ’, ಬ್ಲಾಗ್ ಬರಹಗಾರರ ಸೌಕರ್ಯ ನೀಡುವ ಬ್ಲಾಗರ್ ಹಾಗೂ ಎಸ್ಸೆಮ್ಮೆಸ್ ಮತು ಕಿರು ಬ್ಲಾಗ್‌ಗಳ ಹಂಚಿಕೆ ತಾಣವಾದ “ಜೈಕು’ಗಳನ್ನು ಗೂಗಲ್ ಖರೀದಿಸಿದೆ. * ಇಷ್ಟೆಲ್ಲಾ ಸೇವೆ ನೀಡುವ ಗೂಗಲ್ ಸತತವಾಗಿ, ಅಡತೆಡೆಯಿಲ್ಲದೆ ಕಾರ್ಯಾಚರಿಸಲು ಎಷ್ಟು ಕಂಪ್ಯೂಟರ್‌ಗಳನ್ನು, ಸರ್ವರ್‌ಗಳನ್ನು ಬಳಸುತ್ತಿದೆಯೆಂಬುದು ಯಕ್ಷ ಪ್ರಶ್ನೆ. ಒಂದು ಅಂದಾಜಿನಂತೆ ಎರಡರಿಂದ ನಾಲ್ಕೂವರೆ ಲಕ್ಷ ಸರ್ವರ್‌ಗಳನ್ನು (ನಿರ್ದಿಷ್ಟ ಕಾರ್ಯಕ್ಕೆ ನೂರಾರು ಕಂಪ್ಯೂಟರ್‌ಗಳನ್ನು ಒಳಗೊಂಡ ಶಕ್ತಿಶಾಲಿ ಸಂಪರ್ಕ ಜಾಲ) ಅದು ಬಳಸುತ್ತಿದೆ. * ಇಪ್ಪತ್ತು ವರ್ಷಗಳ ಹಿಂದೆ ಅಮೆರಿಕದ ಕ್ಯಾಲಿಫೋರ್ನಿಯದ ಸಣ್ಣ ಗರಾಜಿನಲ್ಲಿ ಬೆರಳೆಣಿಕೆಯ ಉದ್ಯೋಗಿಗಳೊಂದಿಗೆ ಆರಂಭವಾದ ಗೂಗಲ್ ಇಂದು ತನ್ನ ವ್ಯಾಪ್ತಿಯನ್ನು ಐವತ್ತು ದೇಶಗಳಿಗೆ ಹಿಗ್ಗಿಸಿಕೊಂಡಿದೆ. ಅರವತ್ತು ಸಹಸ್ರಕ್ಕೂ ಹೆಚ್ಚಿನ ಸಂಖ್ಯೆಯ ನೇರ ಉದ್ಯೋಗಿಗಳು ಈ ಕಂಪನಿಯಲ್ಲಿಂದು ಕೆಲಸ ಮಾಡುತ್ತಿದ್ದಾರೆ. ಉಪಯೋಗವೂ ಇದೆ ತೊಂದರೆಯೂ ಇದೆ
ಜನಸಾಮಾನ್ಯರು “ಗೂಗಲ್ಲೇ ಗುರು’ ಎಂದು ಒಪ್ಪಿಕೊಂಡಿರುವುದರಲ್ಲಿ ಎರಡು ಮಾತಿಲ್ಲ. ಗೂಗಲ್‌ನಿಂದ ಎಷ್ಟು ಉಪಯೋಗಗಳಿವೆಯೋ ಅಷ್ಟೇ ತೊಂದರೆಗಳೂ ಇವೆ. ಗೂಗಲ್‌ನಿಂದ ಜನರಲ್ಲಿ ನೆನಪಿನ ಶಕ್ತಿ ಕುಂದತೊಡಗಿದೆ ಎಂದು ಸಂಶೋಧನೆಯೊಂದು ವರದಿ ಮಾಡಿತ್ತು. ಎಲ್ಲಾ ಮಾಹಿತಿ, ವಿವರಗಳು ಗೂಗಲ್‌ನಲ್ಲೇ ಇರುವುದರಿಂದ, ಬೇಕೆಂದಾಗ ಬೆರಳ ತುದಿಯಲ್ಲೇ ಸಿಗುವುದರಿಂದ ಆ ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ಪರಿಪಾಠ ಕಡಿಮೆಯಾಗುತ್ತಿದೆ. ಇನ್ನು ಸೆಕ್ಯುರಿಟಿ ವಿಚಾರಕ್ಕೆ ಬಂದರೆ ದಶಕಗಳ ಹಿಂದೆ ಪ್ರಖ್ಯಾತ ಅಮೆರಿಕದ ಆನ್‌ಲೈನ್ ಸಂಸ್ಥೆ ಎಓಎಲ್‌ನ ಬಳಕೆದಾರರ ಎಲ್ಲಾ ಖಾಸಗಿ ಮಾಹಿತಿಗಳು ಲೀಕ್ ಆಗಿ ಇಂಟರ್‌ನೆಟ್‌ನಲ್ಲಿ ಹರಿದಾಡಿದ್ದವು. ಗೂಗಲ್‌ನಿಂದ ಆ ತೆರನಾದ ಗಂಭೀರ ಅಪಾಯಕ್ಕೆ ಇಲ್ಲಿಯವರೆಗೂ ಯಾರೂ ಸಿಲುಕಿಲ್ಲವಾದರೂ ಮುಂದಿನ ದಿನಗಳ ಕುರಿತು ಹೇಳಬಲ್ಲವರಾರು. – ಸುಧೀಂದ್ರ ಹಾಲ್ದೊಡ್ಡೇರಿ