ಗುಂಡ್ಲುಪೇಟೆ(ಚಾಮರಾಜನಗರ): ಗೂಡ್ಸ್ ಟ್ರಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ರಾಘವಾಪುರ ಗ್ರಾಮದ ಹತ್ತಿರ ಬುಧವಾರ ನಡೆದಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಜೇವರ್ಗಿ ಗ್ರಾಮದ ದೊರೆಯಪ್ಪ, ಶಶಿ ಬಡಿಗೇರ, ಪ್ರಭು ಬಡಿಗೇರ ಹಾಗು ಬೈಕ್ ನಲ್ಲಿ ಬರುತ್ತಿದ್ದ ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದ ಬಸಪ್ಪ ಅವರ ತಲೆ, ಕೈ, ಕಾಲಿಗೆ ತೀವ್ರ ತರ ಪೆಟ್ಟು ಬಿದ್ದಿವೆ. ಕಾರಿನಲ್ಲಿದ್ದ ವಿಜಯಪುರ ಮೂಲದ ಆರು ಮಂದಿ ಕೇರಳದ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದ್ದು, ಆರು ಮಂದಿಯಲ್ಲಿ ಮೂರು ಮಂದಿ ತೀವ್ರತರದಲ್ಲಿ ಗಾಯಗೊಂಡಿದ್ದಾರೆ.
ಕಾರು ಹಾಗು ಗೂಡ್ಸ್ ಟ್ರಕ್ ರಾಘವಾಪುರ ಗ್ರಾಮದ ಗ್ರಾಪಂ ಕಚೇರಿ ಮುಂದೆ ಎದುರು ಬದುರಾದಾಗ ಅಪಘಾತ ನಡೆದಿದ್ದು, ಬೈಕ್ ಸವಾರ ಬಸಪ್ಪ ಮಧ್ಯ ಸಿಲುಕಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಸುದ್ದಿ ಅರಿತ ಬೇಗೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಬೇಗೂರಿನ ಸರ್ಕಾರಿ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕಳುಹಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ವೇಗದಿಂದ ಬರುತ್ತಿದ್ದ ಕಾರು ಹಾಗು ಗೂಡ್ಸ್ ಟ್ರಕ್ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂದಿನ ಚಕ್ರಗಳು ಕಿತ್ತು ನೂರು ಮೀಟರ್ ನಷ್ಟು ದೂರ ಹೋಗಿ ಬಿದ್ದಿದೆ. ಗೂಡ್ಸ್ ಟ್ರಕ್ ರಸ್ತೆಯಲ್ಲೆ ಪಲ್ಟಿಯಾಗಿದ್ದು, ಕಾರು ಕೂಡ ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದಿಂದ ಕೆಲ ಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ರಸ್ತೆ ಮೇಲೆ ಬಿದ್ದಿದ್ದ ಗೂಡ್ಸ್ ಟ್ರಕನ್ನು ಬೇಗೂರು ಪೊಲೀಸರು ಕ್ರೇನ್ ಮೂಲಕ ಮೇಲೆತ್ತಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಘಟನೆ ಸಂಬಂಧ ಎರಡು ವಾಹನಗಳನ್ನು ವಶಕ್ಕೆ ಪಡೆದು, ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.