ನವದೆಹಲಿ: ಆರ್ಥಿಕ ಕುಸಿತದ ಬಿಸಿ ಇದೀಗ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಸಂಗ್ರಹದ ಮೇಲೂ ಬಿದ್ದಿದ್ದು ಸೆಪ್ಟಂಬರ್ ತಿಂಗಳಿನಲ್ಲಿ 91,916 ಕೋಟಿ ರೂಪಾಯಿಗಳಷ್ಟು ತೆರಿಗೆ ಸಂಗ್ರಹವಾಗಿದ್ದು ಇದು ಕಳೆದ 19 ತಿಂಗಳಿನಲ್ಲೇ ಕನಿಷ್ಟ ಮಟ್ಟದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರುಕಟ್ಟೆಯಲ್ಲಿ ಗ್ರಾಹಕ ಬೇಡಿಕೆ ಪ್ರಮಾಣ ಗಣನೀಯವಾಗಿ ಕುಸಿತವಾಗಿರುವ ಪರಿಣಾಮ ಇದೀಗ ತೆರಿಗೆ ಸಂಗ್ರಹದ ಮೇಲೂ ಬಿದ್ದಿರುವುದು ಕಳವಳಕಾರಿ ಅಂಶವಾಗಿದೆ.
ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟಂಬರ್ ತಿಂಗಳಲ್ಲಿ ಸಂಗ್ರಹವಾಗಿರುವ 91,916 ಕೋಟಿ ರೂಪಾಯಿ ಜಿ.ಎಸ್.ಟಿ. ಮೊತ್ತ ಕಡಿಮೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ 94,442 ಕೋಟಿ ರೂಪಾಯಿ ಜಿ.ಎಸ್.ಟಿ. ತೆರಿಗೆ ಸಂಗ್ರಹವಾಗಿತ್ತು.
ಆದರೆ ಹಬ್ಬದ ಋತು ಪ್ರಾರಂಭವಾಗಿರುವುದರಿಂದ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಜಿ.ಎಸ್.ಟಿ. ಸಂಗ್ರಹವಾಗಬಹುದೆಂಬ ಆಶಾವಾದವನ್ನು ತೆರಿಗೆ ಪರಿಣಿತರು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಜಿ.ಎಸ್.ಟಿ.ಯಿಂದ 16,330 ಕೋಟಿ ರೂಪಾಯಿಗಳು ಸಂಗ್ರಹವಾಗಿದ್ದರೆ, ಸ್ಟೇಟ್ ಜಿ.ಎಸ್.ಟಿ.ಯಿಂದ 22,598 ಕೋಟಿ ರೂಪಾಯಿಗಳ ಸಂಗ್ರಹವಾಗಿದೆ, ಇನ್ನು 45,069 ಕೋಟಿ ರೂಪಾಯಿಗಳು ಸಮಗ್ರ-ಜಿ.ಎಸ್.ಟಿ. ರೂಪದಲ್ಲಿ ಸಂಗ್ರಹವಾಗಿದ್ದರೆ, 7620 ಕೋಟಿ ರೂಪಾಯಿಗಳು ಐಷಾರಾಮಿ ಮತ್ತು ಕೆಡುಕಿನ ಉತ್ಪನ್ನಗಳ (ಸಿನ್ ಗೂಡ್ಸ್) ಮೆಲಿನ ಸುಂಕದಿಂದ ಸಂಗ್ರಹವಾಗಿದೆ.