ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಕಟಾವುಗೆ ಬಂದಿದೆ. ಆದರೆ ತೊಗರಿ ರಾಶಿಯಲ್ಲಿ ತೊಡಗಬೇಕಿದ್ದ ಗ್ರಾಮೀಣ ಭಾಗದ ಜನ ಈಗ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮಗ್ನರಾಗಿದ್ದಾರೆ.
ವರ್ಷವಿಡೀ ದುಡಿದಿದ್ದಕ್ಕೆ ಫಲ ನೀಡುವ ಸಮಯವೇ ಇದಾಗಿದೆ. ಆದರೆ ಹಳ್ಳಿಯ ಜನ ಹಳ್ಳಿ ಫೈಟ್ ನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಂಡಿದ್ದು, ಗ್ರಾಮ ಪಂಚಾಯತಿ ಚುನಾವಣೆಗೆ ಎಲ್ಲಿಲ್ಲದ ರಂಗು ಬಂದಂತಾಗಿದೆ.
ಒಂದು ಸ್ಥಾನಕ್ಕೆ ಸಾಮಾನ್ಯವಾಗಿ ಏಳೆಂಟು ಜನ ಸ್ಪರ್ಧಿಸಿದ್ದರಿಂದ, ಪ್ರತಿಯೊಬ್ಬ ಸ್ಪರ್ಧಾ ಅಭ್ಯರ್ಥಿ ಹಿಂದೆ ಹತ್ತರಿಂದ ಹದಿನೈದು ಜನ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಗ್ರಾಮದ ಅರ್ಧ ಜನವೇ ಚುನಾವಣೆಯಲಿ ಹಗಲಿರಳು ತೊಡಗಿಸಿಕೊಂಡಿರುವ ಪರಿಣಾಮ ಎಲ್ಲ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಸಣ್ಣ ಪುಟ್ಟ ಮನೆಯ ಶುಭ ಕಾರ್ಯಗಳನ್ನೇ ಮುಂದೂಡಿಕೆ ಮಾಡಿದ್ದನ್ನು ಅವಲೋಕಿಸಿದರೆ ಚುನಾವಣೆ ಕಾವು ಯಾವ ಮಟ್ಟಿಗೆ ತೀವ್ರಗೊಂಡಿದೆ ಎಂಬುದನ್ನು ನಿರೂಪಿಸುತ್ತದೆ.
ಗ್ರಾಮ ತೊರೆದ ಕೆಲವರು:
ಚುನಾವಣೆಯಲ್ಲಿ ನಿಂತವರು ಎಲ್ಲರಿಗೂ ಗೊತ್ತಿರುವವರೇ ಆಗಿರುತ್ತಾರೆ. ಒಂದು ಕಡೆ ಸಂಬಂಧಿಕರೂ ಆಗಿರುತ್ತಾರೆ. ಹೀಗಾಗಿ ಯಾರ ಪರವೂ ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಬೇಡ. ಒಬ್ಬರ ಹಿಂದೆ ಹೋದರೆ ಮತ್ತೊಬ್ಬರಿಗೆ ಸಿಟ್ಟು. ಹೀಗಾಗಿ ಇದರ ಗೊಡವೆ ಬೇಡ ಎಂದು ಕೆಲವರು ವಾರ ಕಾಲ ಗ್ರಾಮವನ್ನೇ ತೊರೆದಿರುವುದು ಸಹ ವರದಿಯಾಗಿವೆ.
ಇದನ್ನೂ ಓದಿ: ಕೊನೆಗೂ ಈಡೇರದ ಕನಸು…ಹೀರೋಗಳು ನಿರಾಕರಿಸಿದ ಪಾತ್ರದ ಮೂಲಕ ಯಶಸ್ಸು ಗಳಿಸಿದ “ಮೂರ್ತಿ”
ಕೊರೆಯುವ ಚಳಿಯಲ್ಲಿ ಪಾರ್ಟಿ ಗುಂಗು:
ಪ್ರಸ್ತುತವಾಗಿ ಕೊರೆಯುವ ಚಳಿ ಹೆಚ್ಚಾಗಿದೆ. ಚುನಾವಣೆಯಲ್ಲಿ ನಿಂತವರು ಮತದಾರರ ಮನ ಸೆಳೆಯಲು ಪಾರ್ಟಿಗಳನ್ನು ಆಯೋಜಿಸುತ್ತಿರುವುದು ವ್ಯಾಪಕವಾಗಿ ಕಂಡು ಬರುತ್ತಿವೆ. ಈಗಂತೂ ಶಾಲಾ- ಕಾಲೇಜುಗಳಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಯುವಕರೆಲ್ಲ ಪಾರ್ಟಿಗಳಿಗೆ ಸಕ್ರೀಯವಾಗಿ ಪಾಲ್ಗೊಳ್ಳುತ್ತಿರುವುದು ಸಾಮಾಜಿಕವಾಗಿ ಪರಿಣಾಮ ಬೀಳುವುದಂತು ನಿಶ್ಚಿತ. ಹೀಗಾಗಿ ಪ್ರಜ್ಞಾವಂತ ನಾಗರೀಕರು ಈ ನಿಟ್ಟಿನಲ್ಲಿ ವಿಚಾರಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಯೋಚಿಸಿ ದೃಢ ಹೆಜ್ಜೆ ಇಡಲು ಮುಂದಾಗಬೇಕೆಂಬುದೇ ಹಲವರ ಅಭಿಪ್ರಾಯ ವಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆಯಾಗುವ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಪ್ರಕಟಿಸಿದ್ದಾರೆ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 2400 ಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವಿರೋಧವಾಗಿ ಎರಡಂಕಿ ಗ್ರಾಮ ಪಂಚಾಯತಿ ಆಗದಿರುವುದನ್ನು ನೋಡಿದರೆ ಚುನಾವಣೆ ಯಾವ ತಾರಕಕ್ಕೇರಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.
ಇದನ್ನೂ ಓದಿ: ಉಜಿರೆ ಪ್ರಕರಣ: ಕಿಡ್ನಾಪರ್ಸ್ ಗೆ ಏಳು ಲಕ್ಷ ರೂ. ಗೆ ಸುಪಾರಿ, ಪ್ರಮುಖ ಆರೋಪಿಗಾಗಿ ಶೋಧ