Advertisement

ಕೃಷಿಯಲ್ಲಿ ತಂತ್ರಜ್ಞಾನದಿಂದ ಉತ್ತಮ ಇಳುವರಿ

12:52 PM Jun 15, 2019 | Suhan S |

ದೇವನಹಳ್ಳಿ: ಕೃಷಿ, ತೋಟಗಾರಿಕೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಉತ್ತಮ ಇಳುವರಿ ಸಾಧ್ಯವಾಗುತ್ತದೆ. ರೈತರು ಇಲಾಖೆಗಳಿಂದ ಯೋಜನೆಯ ಮಾಹಿತಿ ಪಡೆದು ಅನುಷ್ಠಾನ ಮಾಡಬೇಕಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಹೇಳಿದರು.

Advertisement

ತಾಲೂಕಿನ ಚನ್ನರಾಯಪಟ್ಟಣ ಗ್ರಾಮ ಪಂಚಾಯ್ತಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ಸಮಗ್ರ ಕೃಷಿ ಅಭಿಯಾನ- 2019ರ ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ, ಮುಂಗಾರು ಹಂಗಾಮು ಶುರುವಾಗಿರುವಾಗಲೇ ಉತ್ತಮ ಗುಣ ಮಟ್ಟದ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗ ಬೇಕು, ಇದಕ್ಕಾಗಿ ಕೃಷಿ ಇಲಾಖೆಯು ಸಮಗ್ರ ಕೃಷಿ ಅಭಿಯಾನದ ಮೂಲಕ ರೈತರಲ್ಲ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.

ಕಡಿಮೆ ಮಂದಿ ಇದ್ದರೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ರೈತರು ಕೇವಲ ಖುಷ್ಕಿ ಬೆಳೆಗಳು ಮಾತ್ರವಲ್ಲದೇ ಎಣ್ಣೆಕಾಳು ಬೆಳೆಯುವ ಕಡೆಗೂ ಗಮನಹರಿಸಬೇಕು ಎಂದರು.

ಸಹಾಯಧನಕ್ಕಾಗಿ ಪರದಾಟ: ಮುಖಂಡ ಮುನಿರಾಜು ಮಾತನಾಡಿ, ವಿಮೆ ಮಾಡಿಸುವುದಿಲ್ಲ. ಇದರಿಂದ ಬೆಳೆಗಳು ನಷ್ಟವಾದಾಗ ಸಿಗಬೇಕಾಗಿರುವ ಸಹಾಯಧನ ಸಿಗದೇ ಪರದಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಪಶು ವೈದ್ಯರಿಗೆ ಕುರಿ ತಳಿಗಳ ಕುರಿತು ಮಾಹಿತಿಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಯಾವ ರೀತಿ ಮಾಹಿತಿ ನೀಡಲಿಕ್ಕೆ ಸಾಧ್ಯ, ರೈತರು ತೋಟಗಳಿಗೆ ರಾಸಾನಿಕ ಔಷಧಿಗಳನ್ನು ಸಿಂಪಡಣೆ ಮಾಡಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ ಎಂದು ಹೇಳಿದರು.

ಹನಿ ನೀರಾವರಿಗೆ ಸಹಾಯಧನ: ಸಾವಯವ ಕೃಷಿ ತಜ್ಞ ಅನಂತಶಯನ ಮಾತನಾಡಿ, ನರೇಗಾ ಯೋಜನೆ ಅಡಿ ಬೆಳೆಯುವ ಬಹುವಾರ್ಷಿಕ ಬೆಳೆಗಳಿಗೆ ಸಹಾಯಧನ ನೀಡಲಾಗುತ್ತದೆ. ಫಲಾನುಭವಿಗಳು ಉದ್ಯೋಗ ಕಾರ್ಡ್‌, ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಾಗಿರಬೇಕು. ಸಣ್ಣ ರೈತರಾಗಿರಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಶೇ.90ರಷ್ಟು ಸಹಾಯಧನ ದೊರೆಯಲಿದೆ. ಖರೀದಿ ಮಾಡುವ ಎಲ್ಲ ವಸ್ತುಗಳು ಐಎಸ್‌ಐ ಮಾರ್ಕ್‌ ಹೊಂದಿರಬೇಕು ಎಂದರು.

Advertisement

ವಿಜ್ಞಾನಿ ಡಾ.ಕೆಂಪೇಗೌಡ, ಬೆಳೆಗಳಿಗೆ ಬೀಳುವ ರೋಗಗಳ ಹತೋಟಿ ಹಾಗೂ ಮಣ್ಣು ಹಾಗೂನೀರಿನ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು. ವಿವಿಧ ತಳಿಗಳ ಬಿತ್ತನೆ ಬೀಜಗಳು, ಕೃಷಿ ಉಪಕರಣಗಳ ಪ್ರದರ್ಶನ ನಡೆಯಿತು. ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ, ಕೃಷಿ ಯಂತ್ರೋ ಪಕರಣಗಳ ಕುರಿತು ಸ್ಟಾಲ್ಗಳನ್ನು ಹಾಕಿ, ರೈತರಿಗೆ ಜಾಗೃತಿ ಮೂಡಿಸಿದರು.

ಈ ವೇಳೆ ಬೂದಿಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ, ತಾಲೂಕು ಪಂಚಾಯ್ತಿ ಸದಸ್ಯ ದಿನ್ನೂರು ವೆಂಕಟೇಶ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ, ಕೃಷಿ ಅಧಿಕಾರಿ ಮಣಿಲಾ, ಸಿ.ಕೆ.ರಾಮಚಂದ್ರಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next