ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇಗುಲದಲ್ಲಿ ಸಕಲ ರೋಗನಿವಾರಣಾರ್ಥ ಜೂ. 22ರಂದು ಶ್ರೀ ಧನ್ವಂತರಿ ಸುಳಾದಿ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಶೆಕೋಡಿ ಸೂರ್ಯನಾರಾಯಣ ಭಟ್ ನೆರವೇರಿಸಿ, ಮನುಷ್ಯನು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸನ್ಮಾರ್ಗದಲ್ಲಿ ನಡೆಯಬಹುದು. ಉದಾತ್ತ ವಿಚಾರಗಳನ್ನು ಅಳವಡಿಸಿ ಮಕ್ಕಳಿಗೂ ಉತ್ತಮ ಸಂಸ್ಕಾರಗಳನ್ನು ನೀಡಿದರೆ ವಿದ್ಯೆ, ವಿನಯ, ವಿಧೇಯತೆ ಇರುತ್ತದೆ. ಪ್ರತಿಯೊಂದು ಆಚರಣೆಗಳು ವ್ಯಕ್ತಿ ಮತ್ತು ಪ್ರಕೃತಿಯ ಶುದ್ಧೀಕರಣ ನಡೆಸುವ ಕ್ರಿಯೆ. ಮನುಷ್ಯ ಮನುಷ್ಯನ ನಡುವೆ ಉತ್ತಮ ಸಂಬಂಧ ಬೆಳೆಸುವಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಹತ್ತರ ಪಾತ್ರ ವಹಿಸುತ್ತವೆೆ. ದೇವನೊಬ್ಬ ನಾಮ ಹಲವು ಎಂಬಂತೆ ಮೂರ್ತಿ ದೇವರ ಪ್ರತೀಕ. ದೇವರು ಪಂಚಭೂತ ಗಳಲ್ಲಿಯೂ ಇರುತ್ತಾನೆ.ಆದ್ದರಿಂದಲೇ ಪ್ರಕೃತಿಯ ಎಲ್ಲವನ್ನೂ ಆರಾಧನೆಯಿಂದ ನೋಡಲಾಗುತ್ತದೆ ಎಂದು ಹೇಳಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್ ಅಧ್ಯಕ್ಷತೆ ವಹಿಸಿದರು. ಕ್ಷೇತ್ರ ತಂತ್ರಿ ವೇ| ಮೂ| ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅಧ್ಯಾತ್ಮದ ಬಗ್ಗೆ ಮಾಹಿತಿ ನೀಡುತ್ತ, ಜ್ಞಾನ ಚತುರ್ವೇದಗಳು ಘನ ಪಾಠ್ಯಗಳು. ಪುರಂದರದಾಸರು ವೇದವನ್ನು ಭಜನೆ ಸಂಕೀರ್ತನೆಗಳಲ್ಲಿ ಹಾಡಿದರು ಎಂದರು.
ಧಾರ್ಮಿಕ ಮುಂದಾಳು ವಸಂತ ಪೈ, ಶ್ರೀ ಕ್ಷೇತ್ರ ಧರ್ಮಸ್ಥಳ ನಿರ್ದೇಶಕ ಹಾಗೂ ಭಜನ ಪರಿಷತ್ತು ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ ಶಿಶಿಲ, ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚೇತನ, ಹವ್ಯಕ ಮಹಿಳಾ ಮಂಡಳಿ ಅಧ್ಯಕ್ಷೆ ಈಶ್ವರಿ ಎಸ್. ಭಟ್ ಬೇರ್ಕಡವು, ಶಂನಾಡಿಗ ಕುಂಬಳೆ, ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್. ಶಿವರಾಮ ಭಟ್ ಕಾರಿಂಜ-ಹಳೆಮನೆ, ಅನಂತರಾಮ ಭಟ್ ಮುಜೂರು, ಭಜನ ಚಾರಿಟೆಬಲ್ ಟ್ರಸ್ಟ್ ನಿರ್ದೇಶಕ ಕಿರಣ್ ಕುಮಾರ್ ರೈ ಬಲ್ನಾಡ್, ಕಣಿಪುರ ಯಕ್ಷಗಾನ ಮಾಸ ಪತ್ರಿಕೆಯ ಎಂ.ನಾ. ಚಂಬಲ್ತಿಮಾರ್ ಶುಭಾಶಂಸನೆಗೈದರು. ಮಿತ್ತೂರು ಪುರುಷೋತ್ತಮ ಭಟ್, ಪ್ರೇಮಲತಾ ರಾವ್ ಉಪಸ್ಥಿತರಿದ್ದರು.
ರಾಮಕೃಷ್ಣ ಕಾಟುಕುಕ್ಕೆ ಸ್ವಾಗತಿಸಿ, ರಾಮಚಂದ್ರ ಮಣಿಯಾಣಿ ವಂದಿಸಿದರು. ಸತ್ಯ ನಾರಾಯಣ ಪುಣಿಂಚತ್ತಾಯ ನಿರೂಪಿಸಿದರು. ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾ ಸಂಕಲ್ಪ, ಶ್ರೀ ಧನ್ವಂತರಿ ಪೂಜೆ ನೆರವೇರಿತು. ಸಾಂಸ್ಕೃತಿಕ ಕಾರ್ಯ ಕ್ರಮದ ಅಂಗವಾಗಿ ‘ಶ್ರೀರಾಮ ಪರಂಧಾಮ’ ಯಕ್ಷಗಾನ ತಾಳಮದ್ದಳೆ ಜರಗಿತು.