Advertisement

ಪೊಲೀಸ್‌ ಭವನದೆದುರು ನಳನಳಿಸುತ್ತಿದೆ ಹಸಿರು

01:01 PM Jun 29, 2022 | Team Udayavani |

ಮುಧೋಳ: ಸಮಾಜದಲ್ಲಿ ನಿರಂತರ ಶಾಂತಿ ಸುವ್ಯವಸ್ಥೆ ಕಾಪಾಡಲು ಅವಿರತವಾಗಿ ಶ್ರಮಿಸುವ ಪೊಲೀಸ್‌ ಇಲಾಖೆ ಅಧಿಕಾರಿಗಳು ತಮಗೆ ಮೀಸಲಿರುವ ಕಡಿಮೆ ಅವಧಿಯಲ್ಲಿಯೇ ಗಿಡಮರ ಬೆಳೆಸಿ ಹಸಿರೀಕರಣಕ್ಕೆ ಒತ್ತು ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

5 ಎಕರೆ ಜಾಗದಲ್ಲಿ ವಿಶಾಲ ನಂದನ ವನ: ನಗರದ ವೃತ್ತ ನಿರೀಕ್ಷಕರ ಕಚೇರಿ ಹಿಂದೆ ಇರುವ 5 ಎಕರೆ ವಿಶಾಲ ಪ್ರದೇಶದಲ್ಲಿ ಬೆಳೆಸಿರುವ ಸಸಿಗಳು ಇಂದು ಗಿಡಮರಗಳಾಗಿ ಬೆಳೆದು ಸಾರ್ವಜನಿಕರಿಗೆ ಶುದ್ಧ ಗಾಳಿ ನೀಡುತ್ತಿವೆ. ಹಸಿರಿನಿಂದ ಕಂಗೊಳಿಸುತ್ತಿರುವ ಉದ್ಯಾನವನದಿಂದ ಪೊಲೀಸ್‌ ಸಮುದಾಯ ಭವನಕ್ಕೂ ಹೊಸ ಕಳೆ ಬಂದಿದೆ.

13700 ಸಸಿಗಳು: 2020ರ ನವೆಂಬರ್‌ನಲ್ಲಿ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಪೊಲೀಸ್‌ ಇಲಾಖೆ ಸಿಬ್ಬಂದಿ ಹಾಗೂ ಮೇಲಧಿಕಾರಿಗಳ ಇಚ್ಛಾಶಕ್ತಿಯ ಫಲವಾಗಿ ಉದ್ಯಾನವನ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾದರು. ಅರಣ್ಯ ಇಲಾಖೆಯಿಂದ ಆಲಮಟ್ಟಿ, ಮುಧೋಳ, ಬಾಗಲಕೋಟೆ, ಹುನಗುಂದ ಜಮಖಂಡಿಯಿಂದ 13700 ಸಸಿಗಳನ್ನು ತರಿಸಿ ನೆಡುವುದರೊಂದಿಗೆ ಅವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಾಯಿತು. ಅದರ ಪರಿಣಾಮವಾಗಿ ಮುಧೋಳ ಆರಕ್ಷಕರ ವೃತ್ತ ನಿರೀಕ್ಷಕರ ಕಚೇರಿ ಹಿಂದೆ ಇಂದು ದೊಡ್ಡ ಉದ್ಯಾನವನವೇ ತಲೆ ಎತ್ತಿದೆ.

ಪ್ರತಿಯೊಬ್ಬರದ್ದೂ ಪಾಲು: ಪೊಲೀಸ್‌ ಇಲಾಖೆಯಿಂದ ನಿರ್ಮಾಣಗೊಂಡಿರುವ ಉದ್ಯಾವನವನ್ನು ಇಲಾಖೆಯ ಎಲ್ಲ ಸಿಬ್ಬಂದಿ ಬಿಡುವಿನ ಸಮಯದಲ್ಲಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಾರೆ. ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ್‌ ಜಗಲಾಸರ್‌ ಅವರ ಇಚ್ಛಾಶಕ್ತಿಯಂತೆ ನಿರ್ಮಾಣಗೊಂಡಿರುವ ಸುಂದರ ಉದ್ಯಾನವನ ನಿರ್ಮಾಣ ಸಸಿಗಳಿಗೆ ನೀರು, ಕಾವಲು ಸೇರಿದಂತೆ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವ ಪೊಲೀಸ್‌ ಇಲಾಖೆ ಸಿಬ್ಬಂದಿ ಉದ್ಯಾನವನ ಕಂಗೊಳಿಸುವಂತೆ ಮಾಡಿದ್ದಾರೆ.

ಸಾರ್ವಜನಿಕರ ಕಣ್ಮನ ಸೆಳೆಯುವ ಉದ್ಯಾನವನ: ಮುಧೋಳ-ಬಾಗಲಕೋಟೆ ಮುಖ್ಯ ರಸ್ತೆಯ ಆರಕ್ಷಕರ ವೃತ್ತ ನಿರೀಕ್ಷಕರ ಕಚೇರಿ ಹಿಂದಿರುವ ವಿಶಾಲ ಪ್ರದೇಶದಲ್ಲಿ ಸಾವಿರಾರು ಸಸಿಗಳು ಬೆಳೆದಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಉದ್ಯಾನವನ ಪ್ರತಿಯೊಬ್ಬರ ಮೆಚ್ಚುಗೆಗೂ ಪಾತ್ರವಾವಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ಉದ್ಯಾನವನದಲ್ಲಿ ಹಕ್ಕಿಗಳ ಕಲರವ ಹೆಚ್ಚುತ್ತಿದ್ದು, ಕಾಂಕ್ರಿಟ್‌ ಕಾಡಿನಲ್ಲಿ ನೆಮ್ಮದಿಯನ್ನುಂಟು ಮಾಡುತ್ತಿದೆ.

Advertisement

ಪೊಲೀಸ್‌ ಇಲಾಖೆ ಅಧಿಕಾರಿಗಳ ಪರಿಸರ ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು, ಅಧಿಕಾರಿಗಳ ಕಾಳಜಿಯಿಂದ ಇಂದು ನಿರುಪಯುಕ್ತ ಜಾಗದಲ್ಲಿ ಇಂದು ಹಸಿರು ಕಂಗೊಳಿಸುತ್ತಿದೆ. ಸಸಿಗಳನ್ನು ನೆಟ್ಟು ಅವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿರುವ ಪೊಲೀಸ್‌ ಅಧಿಕಾರಿಗಳ ಕಾರ್ಯ ಶ್ಲಾಘನೀಯ. –ಅಶೋಕ ಕಿರಸೂರ, ಮುಧೋಳ ನಿವಾಸಿ -ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next