ಮುಂಬಯಿ, ಸೆ. 13: ಚಂದಿರನಂತೆ ಶೋಭಿಸುತ್ತಾ ಸೂರ್ಯನಂತೆ ಪ್ರಜ್ವಲಿಸುತ್ತಿರುವ ಈ ಮಕ್ಕಳು ನಮ್ಮ ಮುಂದಿನ ಭವಿಷ್ಯ. ಈ ಮಕ್ಕಳು ಹಳ್ಳಿಯಿಂದ ದಿಲ್ಲಿಗೆ ಹೋದರೂ ಯಾವ ಕುಂದು ಕೊರೆತೆ ಆಗದು. ಯಾಕೆಂದರೆ ಚಿಣ್ಣರ ಬಿಂಬದಂತಹ ಶಿಖರ ಪ್ರತಿ ವಲಯದಲ್ಲಿನ ಮಕ್ಕಳನ್ನು ಪ್ರೇರೇಪಿಸಿ, ಅವರನ್ನು ಉನ್ನತೀಕರಣಗೊಳಿಸಲು ಪಾಲಕರೊಂದಿಗೆ ಕೈಜೋಡಿಸಿ ಶ್ರಮಿಸುತ್ತಿದೆ. ಪಾಲಕರೂ ತಮ್ಮ ಮಕ್ಕಳಿಗೆ ಧೈರ್ಯವಂತರಾಗಿ ಬೆಳೆಸಲು ಇದೊಂದು ಮಾಧ್ಯಮ. ತಂದೆ – ತಾಯಿಗೆ ತಮ್ಮ ಮಕ್ಕಳಿಗೆ ಮನೆಯಲ್ಲೇ ಸಂಸ್ಕಾರ ಕೊಡಲು ಕಷ್ಟವಾಗುವಾಗ ಚಿಣ್ಣರ ಬಿಂದ ಇಷ್ಟೋಂದು ಮಕ್ಕಳನ್ನು ಒಟ್ಟು ಸೇರಿಸಿ ಅವರರಿಗೆ ಉತ್ತಮ ಸಂಸ್ಕಾರ ಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಎಲ್ಲ ಮಕ್ಕಳಿಗೂ ಒಂದು ಗುರಿ ಇರಬೇಕು ಹಾಗೂ ಅದನ್ನು ಸಾಧಿಸುವ ಛಲ ಮತ್ತು ಪ್ರಯತ್ನ ಎರಡು ಇದ್ದಾಗ ಮಾತ್ರ ಯಶಸ್ಸು ತಾನಾಗಿಯೇ ಲಭಿಸುತ್ತದೆ. ಜೀವನದಲ್ಲಿ ತಂದೆ – ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಆದರ್ಶ ವ್ಯಕ್ತಿಗಳಾಗಬೇಕು ಎಂದು ಶ್ರೀ ಅಯ್ಯಪ್ಪ ಭಕ್ತ ವೃಂದ ನೆರೂಲ್ ಉಪಾಧ್ಯಕ್ಷ ಪ್ರಭಾಕರ್ ಎಸ್. ಹೆಗ್ಡೆ ಅವರು ನುಡಿದಿದ್ದಾರೆ. ಅವರು ಸೆ.8ರಂದು ನೆರೂಲ್ ಚಿಣ್ಣರ ಬಿಂಬ ಶಿಬರದ ಮಕ್ಕಳ ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಹಾಗೂ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಮಕ್ಕಳಿಗೆ ಹಿತವಚನ ನುಡಿಯುತ್ತಿದ್ದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರ ಇದರ ಅಧ್ಯಕ್ಷ ಸಂಜೀವ ಎನ್. ಶೆಟ್ಟಿ ಅವರು ಮಾತನಾಡುತ್ತ, ಪಾಲಕರು ಹಾಗೂ ಪ್ರಕಾಶ್ ಭಂಡಾರಿಯವರ ಶ್ರಮದಿಂದ ಚಿಣ್ಣರ ಬಿಂಬ ಇಂದು ನಂದ ಗೋಕುಲವಾಗಿದೆ. ಓರ್ವ ಶಿಲ್ಪಿಗೆ ಕಲ್ಲಿನಿಂದ ಮೂರ್ತಿಯನ್ನು ಕೆತ್ತಿ ಅದನ್ನು ಪ್ರಾಣ ಪ್ರತಿಷ್ಠೆ ಮಾಡಲು ಎಷ್ಟು ಕಷ್ಟವಾಗುತ್ತದೆಯೋ ಹಾಗೆಯೇ ಈ ಮಕ್ಕಳಿಗೆ ಸಂಸ್ಕಾರ – ಸಂಸ್ಕೃತಿ ಕಲಿಸಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡುವ ಕೆಲಸ ಶ್ಲಾಘನೀಯ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಇನ್ನೊರ್ವ ಅತಿಥಿ ನೆರೂಲ್ ಶನೀಶ್ವರ ಮಂದಿರ ಇದರ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ ಅವರು ಮಾತನಾಡಿ, ಈ ಮಕ್ಕಳು ಕನ್ನಡದಲ್ಲಿ ನಿರರ್ಗಳವಾಗಿ ಮಾತಾಡುವುದು ನೋಡಿದಾಗ ಮನ ತುಂಬಿ ಬರುತ್ತದೆ. ಹಾಗೆಯೇ ಈಗ ಪ್ರಕೃತಿ ವಿಪರಿತ್ಯದಿಂದ ಬರುವ ಧಾರಾಕಾರ ಮಳೆಗೆ ಎಲ್ಲರೂ ಜಾಗೃತರಾಗಬೇಕು. ಮಕ್ಕಳಿಗೆ ಇನ್ನಷ್ಟು ಶ್ರೇಯಸ್ಸಾಗಲಿ ಎಂದು ಹರಸಿ, ಪ್ರಕಾಶ್ ಭಂಡಾರಿಯವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಗೆಯೇ ಕೇಂದ್ರ ಸಲಹಾ ಸಮಿತಿಯ ಗೀತಾ ಹೇರಳ ಅವರು ಪಾಲಕರು ಮಕ್ಕಳನ್ನು ಸಂತೋಷದಿಂದ, ನಿಷ್ಠೆಯಿಂದ ಚಿಣ್ಣರ ಬಿಂಬ ತರಗತಿಗೆ ಕರೆ ತರಬೇಕು. ಮನೆ, ಮನಸ್ಸು ಎರಡನ್ನೂ ಶಾಂತಿಯಿಂದ ನಿಭಾಯಿಸಿ ಆರೋಗ್ಯವಂತರಾಗಿ ಬಾಳಬೇಕು. ಸದಾ ನಮ್ಮ ಸಂಸ್ಥೆಯ ಕಾರ್ಯ ಕ್ರಮಗಳಿಗೆ ಸಹಕರಿಸಬೇಕು. ಹೆಚ್ಚು ಹೆಚ್ಚು ಮಕ್ಕಳು ಪ್ರತಿಭೆಯನ್ನು ತೋರಿಸುವಂತೆ ಅವರಿಗೆ ಮಾರ್ಗದರ್ಶನ ನೀಡಬೇಕೆಂದರು. ಕು| ನಿಧಿ ಸಾಲ್ಯಾನ್, ಕು| ಸಮೀಕ್ಷಾ ಸುವರ್ಣ ಹಾಗೂ ಕು| ಯಶ್ವಿತಾ ಸುವರ್ಣ ಅವರು ಅತಿಥಿಗಣ್ಯರನ್ನು ಪರಿಚಯಿಸಿ ಚಿಣ್ಣರು ಹೂಗುಚ್ಚ ಹಾಗೂ ಶಾಲು ನೀಡಿ ಗೌರವಿಸಿದರು. ತೀರ್ಪುಗಾರರಾಗಿ ಆಗಮಿಸಿದ ಚೆನ್ನಯ ಎ. ಪೂಜಾರಿ ಹಾಗೂ ಜಯರಾಮ್ ಜಿ. ನಾಯಕ್ ಇವರ ಪರಿಚಯ ಮೋಹಿನಿ ಪೂಜಾರಿ, ಶಿಕ್ಷಕಿ ಸುಕುಮಾರಿ ಶೆಟ್ಟಿ ಮಾಡಿದರು. ಚಿಣ್ಣರು ಶಾಲು ಮತ್ತು ಹೂಗುಚ್ಛ ನೀಡಿ ಗೌರವಿಸಿದರು. ಇಬ್ಬರೂ ತೀರ್ಪುಗಾರರ ತಮ್ಮ ಅನಿಸಿಕೆಯಲ್ಲಿ ಮಕ್ಕಳ ಪ್ರತಿಭೆಯನ್ನು ಕೊಂಡಾಡಿದರು. ಇನ್ನೂ ಉತ್ತಮ ರೀತಿಯಲ್ಲಿ ಹೇಗೆ ಭಾಗವಹಿಸಬಹುದೆಂದು ಮಾರ್ಗದರ್ಶನ ನೀಡಿದರು. ಶಿಬಿರದ ಮುಖ್ಯಸ್ಥೆ ಕ್ಷಮಾ ತಮನ್‌ಕರ್ ಶಿಬಿರದ ವಿವರಣೆ ನೀಡಿದರು. ವೇದಿಕೆಯಲ್ಲಿ ಕೇಂದ್ರ ಸಲಹಾ ಸಮಿತಿಯ ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ ವಲಯದ ಮುಖ್ಯಸ್ಥೆ ಸಂಧ್ಯಾ ಮೋಹನ್, ಪ್ರಾದೇಶಿಕ ಮುಖ್ಯಸ್ಥೆ ಆಶಾ ಪೂಜಾರಿ , ರೂಪಾ ಡಿ. ಶೆಟ್ಟಿ, ಸಾಂಸ್ಕೃತಿಕ ಮುಖ್ಯಸ್ಥೆ ಭವ್ಯಾ ಪೂಜಾರಿ ಹಾಗೂ ಶಿಕ್ಷಕಿ ಮೋಹಿನಿ ಪೂಜಾರಿ ಉಪಸ್ಥಿತರಿದ್ದರು.
ಪ್ರತಿಭಾ ಸ್ಪರ್ಧೆಯ ಅಂಗವಾಗಿ ಭಾವಗೀತೆ, ಶ್ಲೋಕ, ಚರ್ಚಾಸ್ಪರ್ಧೆ ಸೀನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ ನಡೆಯಿತು. ಅಂತೆಯೇ ಪಾಲಕರ ಭಾವಗೀತೆ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಕುಮಾರಿ ನಿಧಿ ಶೆಟ್ಟಿ ಕಾರ್ಯಕ್ರಮದ ನಿರೂಪಣೆಯನ್ನು ಅಧ್ಯಪಾಡಿ ಬಾಲಕೃಷ್ಣ ಅವರ ಸಹಕಾರದೊಂದಿಗೆ ನೆರವೇರಿಸಿದರು. ಹೃತಿಕ್ ಶೆಟ್ಟಿ ಹಾಗೂ ನಿಧಿ ಶೆಟ್ಟಿ ವಿವಿಧ ಸ್ಪರ್ಧೆಗಳ ನಿರೂಪಣೆ ಮಾಡಿದರು. ನಿರೀಕ್ಷಕರಾಗಿ ಆಗಮಿಸಿದ ಸುಜಾತಾ ಶೆಟ್ಟಿ ಹಾಗೂ ಲಕ್ಷ್ಮೀ ದೇವಾಡಿಗ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಿದರು. ಭವ್ಯಾ ಪೂಜಾರಿ ವಂದನಾರ್ಪಣೆಗೈದರು. ರಾಜೇಶ್ವರಿ ಶೆಟ್ಟಿ, ಗುಣಾ ಶೆಟ್ಟಿ, ಇಂದಿರಾ ಶೆಟ್ಟಿ ಉಪಸ್ಥಿತರಿದ್ದರು. ಭಾರತಿ ಹೆಗ್ಡೆ, ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಯಶವಂತ್ ಸುವರ್ಣ, ಶ್ರೀಕಾಂತ ಶೆಟ್ಟಿ . ಪಾಲಕರು ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಭಾಗವಹಿಸಿದರು. ಲಘು ಉಪಹಾರ ಹಾಗೂ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.