ಸಾಗರ: ಕೆಎಫ್‌ಡಿ ಸೋಂಕಿತ ಪ್ರದೇಶದವರು ಜ್ವರ ಲಕ್ಷಣ ಕಂಡು ಬಂದಾಗ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಬನ್ನಿ. ಜೀವನದ ಗೋಲ್ಡನ್ ಟೈಮ್‌ನಲ್ಲಿ ಬಂದರೆ ಜೀವ ಉಳಿಸಲು ಸಾಧ್ಯ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೆಎಫ್‌ಡಿ ಮತ್ತು ಕೋವಿಡ್ ಹಿನ್ನೆಲೆಯಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆಎಫ್‌ಡಿ ಸೋಂಕಿಗೆ ಮಣಿಪಾಲದಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ. ಸರ್ಕಾರ ಚಿಕಿತ್ಸಾ ವೆಚ್ಚವನ್ನು ಭರಿಸುತ್ತದೆ. ಸೋಂಕು ಕಂಡು ಬಂದ ಪ್ರದೇಶದಲ್ಲಿ ಸಾರ್ವಜನಿಕರು ಹೆಚ್ಚು ಜಾಗೃತಿಯಿಂದ ಇರಬೇಕು. ಮಕ್ಕಳು ಮತ್ತು ದೊಡ್ಡವರು ಅನಗತ್ಯವಾಗಿ ಕಾಡಿಗೆ ಹೋಗುವುದನ್ನು ನಿಲ್ಲಿಸಬೇಕು. ಕಾಯಿಲೆ ಬಂದರೆ ಅದಕ್ಕೆ ಔಷಧ ಇಲ್ಲ. ಕಾಯಿಲೆ ಬರದಂತೆ ನೋಡಿಕೊಳ್ಳುವುದೇ ಒಂದು ಪರಿಹಾರವಾಗಿದೆ ಎಂದರು.
ಅರಲಗೋಡು ಗ್ರಾಪಂ ಸದಸ್ಯ ರಾಮಸ್ವಾಮಿ ಕರುಮನೆ ಕೆಎಫ್ ಡಿಗೆ ಬಲಿಯಾಗಿರುವುದು ನನಗೆ ಅತೀವ ಬೇಸರ ತಂದಿದೆ. ರಾಮಸ್ವಾಮಿ ಕಾಲೇಜಿನ ನನ್ನ ಕಿರಿಯ ಸಹಪಾಠಿ ಮತ್ತು ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಜ್ವರ ಕಂಡ ಬಂದ ತಕ್ಷಣ ರಾಮಸ್ವಾಮಿ ಅವರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಮನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜ್ವರ ಮತ್ತೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ ಮಾಡಿದಾಗ ಕೆಎಫ್‌ಡಿ ಇರುವುದು ಪತ್ತೆಯಾಗಿದೆ. ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳು ಅವರನ್ನು ಮಣಿಪಾಲ ಆಸ್ಪತ್ರೆಗೆ ಕಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಮಸ್ವಾಮಿ ಮೃತಪಟ್ಟಿದ್ದಾರೆ. ನಿಜಕ್ಕೂ ಇದು ಅತ್ಯಂತ ಬೇಸರದ ಸಂಗತಿ. ರಾಮಸ್ವಾಮಿ ಅವರ ಕುಟುಂಬಕ್ಕೆ ಸಹ ಮುಖ್ಯಮಂತ್ರಿಗಳ ನಿಧಿಯಿಂದ ಪರಿಹಾರ ಕಲ್ಪಿಸಲಾಗುತ್ತದೆ. ಕೆಎಫ್‌ಡಿ ಸೋಂಕು ಹರಡದಂತೆ ಜನರಲ್ಲಿ ಮುಂಜಾಗೃತೆ ಮೂಡಿಸಲು ಟಾಸ್ಕ ಫೋರ್ಸ್ ಗಳನ್ನು ಸಕ್ರಿಯಗೊಳಿಸಲಾಗುತ್ತದೆ. ಕೆಎಫ್‌ಡಿ ಸಂಶೋಧನಾ ಕೇಂದ್ರವನ್ನು ಶಿವಮೊಗ್ಗದಲ್ಲಿಯೇ ಸ್ಥಾಪಿಸಲು ಅಗತ್ಯ ಒತ್ತಡ ತರಲಾಗುತ್ತದೆ ಎಂದು ತಿಳಿಸಿದರು.
ಕೊರೊನಾ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಪಾಲಿಸಲಾಗುತ್ತಿದೆ. ಉಪವಿಭಾಗೀಯ ಆಸ್ಪತ್ರೆಯಲ್ಲಿ ಕೋವಿಡ್ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಕೋವಿಡ್‌ನಿಂದ ಮೃತಪಟ್ಟ 102 ಜನರಿಗೆ ಪರಿಹಾರಧನ ನೀಡಲಾಗಿದೆ. ಉಳಿದ 111 ಜನರಿಗೆ ಪರಿಹಾರ ನೀಡಬೇಕಾಗಿದೆ. ಈ ಪೈಕಿ 48 ದಾಖಲೆಯಲ್ಲಿ ತಾಂತ್ರಿಕ ದೋಷವಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಸಹಾಯಕ ಆಯುಕ್ತ ಡಾ| ನಾಗರಾಜ್ ಎಲ್., ತಹಶೀಲ್ದಾರ್ ಮಲ್ಲೇಶ್ ಪೂಜಾರ್, ಡಿಎಚ್‌ಒ ಡಾ| ರಾಜೇಶ್ ಸುರಗಿಹಳ್ಳಿ, ಟಿಎಚ್‌ಒ ಡಾ| ಮೋಹನ್ ಕೆ.ಎಸ್., ಸಿವಿಲ್ ಸರ್ಜನ್ ಡಾ| ಪರಪ್ಪ ಕೆ., ಇಒ ಪುಷ್ಪಾ ಕಮ್ಮಾರ್, ಬಿಇಒ ಬಿಂಬ ಕೆ.ಆರ್., ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಕಾರ್ಗಲ್ ಪಪಂ ಅಧ್ಯಕ್ಷೆ ವಾಸಂತಿ ರಮೇಶ್ ಇನ್ನಿತರರು ಹಾಜರಿದ್ದರು.