ಒಂದು ಊರಿನಲ್ಲಿ ಕಾಸಿಂ ಮತ್ತು ಫಾಹಿನ್ ಎಂಬ ಹೆಸರಿನ ಇಬ್ಬರು ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ಕಾಸಿಂ ಭಾರೀ ಶ್ರೀಮಂತ. ಆದರೆ, ಫಾಹಿನ್‌ಗೆ ಮೂರು ಹೊತ್ತಿನ ಊಟಕ್ಕೂ ಪರದಾಟ. ಕಾಸಿಂನ ಶ್ರೀಮಂತಿಕೆ ನೋಡಿ ಫಾಹಿನ್ ಒಳಗೊಳಗೇ ಹೊಟ್ಟೆಕಿಚ್ಚು ಪಡುತ್ತಿದ್ದ. ದಿನ ಕಳೆದಂತೆ ಈ ಅಸೂಯೆ ಜಾಸ್ತಿಯಾಗಿ, ಒಂದು ದಿನ ಕಾಸಿಂನನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂದು ಫಾಹಿನ್ ಯೋಚಿಸಿದ. ಕಾಸಿಂ ಬುದ್ಧಿವಂತ. ಫಾಹಿನ್ ತನಗೆ ಏನೋ ಹಾನಿ ಉಂಟುಮಾಡುತ್ತಾನೆ ಎಂಬುದು ಅವನಿಗೆ ಗೊತ್ತಾಯಿತು.
ನನ್ನಲ್ಲಿರುವ ಸಂಪತ್ತಿನಿಂದ ಇನ್ನೊಬ್ಬರಿಗೆ ತೊಂದರೆಯಾಗುವುದು ಬೇಡ ಎಂದು ಯೋಚಿಸಿ, ಕಾಸಿಂ ಆ ಮನೆಯನ್ನು ಬಿಟ್ಟು, ದೂರದ ಪ್ರದೇಶಕ್ಕೆ ಹೋಗಿ ಅಲ್ಲೇ ನೆಲೆಸಲಾರಂಭಿಸಿದ. ಅಲ್ಲಿ ಒಬ್ಬ ಒಳ್ಳೆಯ ಶಿಕ್ಷಕನಾಗಿ ಎಲ್ಲರಿಗೂ ಒಳ್ಳೆಯದನ್ನು ಬೋಧನೆ ಮಾಡುತ್ತಿದ್ದ ಕಾಸಿಂ. ಅವನ ಉಪನ್ಯಾಸ ಕೇಳಲು ಅಕ್ಕಪಕ್ಕದ ಊರುಗಳಿಂದ ಜನರ ಹಿಂಡೇ ಬರುತ್ತಿತ್ತು. ದಿನ ಕಳೆದಂತೆ ಕಾಸಿಂ ಪ್ರಖ್ಯಾತನಾದ. ಅವನೊಬ್ಬ ಪುಣ್ಯಪುರುಷ ಎಂದು ಎಲ್ಲರೂ ಹೊಗಳತೊಡಗಿದರು. ಈ ವಿಷಯ ಸುತ್ತಲಿನ ಎಲ್ಲ ಊರುಗಳಿಗೂ ವ್ಯಾಪಿಸಿತು.
ಕಾಸಿಂ ಪುಣ್ಯಪುರುಷನಾದ ವಿಚಾರ ಫಾಹಿನ್ ಕಿವಿಗೂ ಬಿತ್ತು. ಅವನ ಅಸೂಯೆ ಇನ್ನಷ್ಟು ಹೆಚ್ಚಾಯಿತು. ಯಾವುದಕ್ಕೂ ಕಾಸಿಂನನ್ನು ಒಮ್ಮೆ ಕಣ್ಣಾರೆ ನೋಡಿ ಬರೋಣ ಎಂದುಕೊಂಡು ಫಾಹಿನ್ ಹೊರಟ. ಅವನನ್ನು ನೋಡುತ್ತಲೇ ಕಾಸಿಂ ಹಿಂದಿನದೆಲ್ಲವನ್ನೂ ಮರೆತು, ಪ್ರೀತಿಯಿಂದ ಸ್ವಾಗತಿಸಿದ. ಫಾಹಿನ್ ಕೂಡ ತನ್ನ ನೈಜ ಮುಖವನ್ನು ಮುಚ್ಚಿಟ್ಟು, ಒಳ್ಳೆಯವನಂತೆ ನಟಿಸಿದ. ಆದರೆ, ಮನಸ್ಸಲ್ಲಿ ಕೆಟ್ಟ ಆಲೋಚನೆಯೇ ತುಂಬಿತ್ತು.
ಇಬ್ಬರೂ ಊಟ ಮಾಡಿ, ಸುತ್ತಾಡಲು ಹೊರಟರು. ಹೀಗೇ ನಡೆದುಕೊಂಡು ಹೋಗುತ್ತಿದ್ದಾಗ, ಫಾಹಿನ್‌ಗೆ ಅಲ್ಲೊಂದು ಬಾವಿ ಕಂಡಿತು. ಇದು ಸೇಡು ತೀರಿಸಿಕೊಳ್ಳಲು ಸರಿಯಾದ ಸಮಯ ಎಂದು ಅಂದುಕೊಂಡ ಫಾಹಿನ್, ಒಮ್ಮೆಲೇ ಕಾಸಿಂನನ್ನು ಬಾವಿಯೊಳಕ್ಕೆ ದಬ್ಬಿದ. ಕಾಸಿಂಗೆ ಈಜು ಕೂಡ ಬರುತ್ತಿರಲಿಲ್ಲವಾದ್ದರಿಂದ ಆತ ಬಾವಿಯಲ್ಲಿ ಮುಳುಗಿದ. ಆದರೆ, ಅವನ ಅದೃಷ್ಟ ಚೆನ್ನಾಗಿತ್ತು. ಅವನಿಗೆ ಬಾವಿಯಾಳದಲ್ಲಿ ಹೊಸ ಸಾಮ್ರಾಜ್ಯವೊಂದು ಕಾಣಿಸಿತು. ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ನಿಧಾನವಾಗಿ ಆ ಸಾಮ್ರಾಜ್ಯವನ್ನು ಪ್ರವೇಶಿಸಿದ. ಕಾಸಿಂನನ್ನು ನೋಡುತ್ತಿದ್ದಂತೆ, ಸೈನಿಕರು ಅವನನ್ನು ಹಿಡಿದು, ರಾಜನ ಬಳಿ ಕರೆದೊಯ್ದರು. ರಾಜನ ಆಸ್ಥಾನದಲ್ಲಿದ್ದ ಒಬ್ಬ ಮಂತ್ರಿಯು ಕಾಸಿಂನನ್ನು ಗುರುತು ಹಿಡಿದು, “ಇವನೊಬ್ಬ ಪುಣ್ಯಪುರುಷ’ ಎಂದು ರಾಜನಿಗೆ ಪರಿಚಯ ಮಾಡಿಕೊಟ್ಟ.
ವಿಷಯ ಗೊತ್ತಾಗುತ್ತಿದ್ದಂತೆ ರಾಜನ ಮುಖ ಅರಳಿತು. “ದೀರ್ಘಕಾಲದಿಂದ ನನ್ನ ಮಗಳು ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಹೇಗೋ, ಈತ ಪುಣ್ಯಪುರುಷನಂತೆ. ನನ್ನ ಮಗಳ ಕಾಯಿಲೆಯನ್ನು ಇವನು ಗುಣಪಡಿಸಬಹುದೇ,’ ಎಂದು ಮನಸ್ಸಿನಲ್ಲೇ ಲೆಕ್ಕ ಹಾಕಿದ. ನಂತರ, ಕಾಸಿಂಗೆ ಈ ಬಗ್ಗೆ ಕೇಳಿಯೇಬಿಟ್ಟ. ಅಷ್ಟೇ ಅಲ್ಲ, “ನನ್ನ ಮಗಳನ್ನು ಗುಣಪಡಿಸಿದರೆ, ನಿನಗೆ ಒಳ್ಳೆಯ ಬಹುಮಾನವನ್ನೂ ಕೊಡುತ್ತೇನೆ’ ಎಂದು ಭರವಸೆ ನೀಡಿದ. ಸ್ವಲ್ಪ ಹೊತ್ತು ಯೋಚಿಸಿದ ಕಾಸಿಂ, ಕೊನೆಗೆ ತನ್ನಲ್ಲಿದ್ದ ವಿಶೇಷ ಶಕ್ತಿಯನ್ನು ಬಳಸಿ ರಾಜಕುಮಾರಿಯ ರೋಗವನ್ನು ಗುಣಪಡಿಸಿದ. ಇದನ್ನು ಕಂಡು ಸಂತೋಷಗೊಂಡ ರಾಜ, “ಕಾಸಿಂ, ನೀನೇ ನನ್ನ ಪ್ರಧಾನಮಂತ್ರಿ’ ಎಂದು ಘೋಷಿಸಿಬಿಟ್ಟ. ನಂತರ, ಕಾಸಿಂ ಆ ಅರಮನೆಯಲ್ಲಿ ಖುಷಿ ಖುಷಿಯಾಗಿ ಬದುಕತೊಡಗಿದೆ.
ಒಂದು ದಿನ ಕಾಸಿಂಗೆ ತನ್ನ ಹಳೇ ಊರಿಗೆ ಹೋಗಬೇಕೆಂಬ ಮನಸ್ಸಾಯಿತು. ಅಂತೆಯೇ, ಊರಿಗೆ ಮರಳಿದ. ಅಲ್ಲಿ ಮರವೊಂದರ ಬುಡದಲ್ಲಿ ಒಬ್ಬ ಭಿಕ್ಷುಕ ಹಸಿವಿನಿಂದ ಬಳಲಿ, ಮಲಗಿದ್ದಾನೆ. ಯಾರಿರಬಹುದು ಎಂದು ಹತ್ತಿರ ಬಂದು ಗಮನಿಸಿದಾಗ ಗೊತ್ತಾಯಿತು. ಅದು ಬೇರ್ಯಾರೂ ಅಲ್ಲ, ತನ್ನನ್ನು ಬಾವಿಗೆ ತಳ್ಳಿದ್ದ ಫಾಹಿನ್. “ಫಾಹಿನ್, ನಾನ್ಯಾರೆಂದು ಗೊತ್ತಾಯಿತೇ? ಏನಿದು ನಿನ್ನ ಅವಸ್ಥೆ? ನಿನಗೇನಾಯಿತು? ನಾನು ಕಾಸಿಂ, ಗುರುತು ಸಿಕ್ಕಿತೇ?’ ಎಂದು ಪ್ರಶ್ನಿಸಿದ. ಫಾಹಿನ್ ಮೆಲ್ಲಗೆ ಕಣ್ಣು ತೆರೆದ. “ಏನಾಶ್ಚರ್ಯ, ನೀನು ನೀನು ಕಾಸಿಂ… ನಾನು ನಿನ್ನನ್ನು ಬಾವಿಗೆ ನೂಕಿ ಕೊಂದಿದ್ದೆ. ನೀನು ಹೇಗೆ ಬದುಕಿ ಬಂದೆ’ ಎಂದು ಫಾಹಿನ್ ಮರುಪ್ರಶ್ನೆ ಹಾಕಿದ. ಅವನ ಮಾತುಗಳಲ್ಲಿ ನಡುಕವಿತ್ತು.
ಅದಕ್ಕೆ ಕಾಸಿಂ, “ನೀನು ನನ್ನನ್ನು ಬಾವಿಗೆ ತಳ್ಳಿ ಒಳ್ಳೆಯ ಕೆಲಸವನ್ನೇ ಮಾಡಿದೆ. ನನಗಲ್ಲಿ ಹೊಸ ಸಾಮ್ರಾಜ್ಯ ಸಿಕ್ಕಿತು. ನಾನೀಗ ಅಲ್ಲಿಯ ಅಧಿಪತಿಯ ಪ್ರಧಾನಿ. ನಿನ್ನ ಅಸೂಯೆಯು ನನ್ನನ್ನು ಪ್ರಧಾನಿ ಮಂತ್ರಿಯನ್ನಾಗಿಸಿತು. ಆದರೆ, ನಿನ್ನನ್ನು ಭಿಕ್ಷುಕನನ್ನಾಗಿಸಿತು. ಮಾಡಿದ ತಪ್ಪಿಗೆ ನೀನು ಸರಿಯಾದ ಶಿಕ್ಷೆಯನ್ನೇ ಅನುಭವಿಸಿದೆ,’ ಎಂದ.
ಕಾಸಿಂನ ಮಾತು ಕೇಳುತ್ತಲೇ, ಫಾಹಿನ್ ನಿಂತಲ್ಲೇ ಕಣ್ಣೀರಾದ. ಮೊಣಕಾಲೂರಿ ನನ್ನನ್ನು ಕ್ಷಮಿಸು ಎಂದು ಕೇಳಿಕೊಂಡ. ನನಗೀಗ ನನ್ನ ತಪ್ಪಿನ ಅರಿವಾಗಿದೆ. ಇನ್ನೆಂದಿಗೂ ಈ ರೀತಿ ಮಾಡುವುದಿಲ್ಲ ಎಂದು ಬೇಡಿಕೊಂಡ. ಕಾಸಿಂ ಕೂಡಲೇ, ಫಾಹಿನ್‌ನ ಕೈಹಿಡಿದು ಮೇಲಕ್ಕೆತ್ತಿ ಆಲಿಂಗಿಸಿಕೊಂಡ. ಅಷ್ಟೇ ಅಲ್ಲ, ಹೊಸದಾಗಿ ವ್ಯಾಪಾರ ಆರಂಭಿಸಲು ಫಾಹಿನ್‌ಗೆ ಸಾಕಷ್ಟು ಹಣವನ್ನೂ ನೀಡಿದ.
(ಮೂಲ: “ಅರೇಬಿಯನ್ ನೈಟ್ಸ್’ನ
“ದಿ ಗುಡ್ ನೇಬರ್’)
ಹಲೀಮತ್ ಸ ಅದಿಯಾ