Advertisement

ಮಕ್ಕಳ ಹರಿದ ಬಟ್ಟೆ ಹೊಲಿದು ಕೊಡುತ್ತಿದ್ದ ಶಿಕ್ಷಕನಿಗೆ ಪ್ರಶಸ್ತಿ

09:17 PM Sep 04, 2021 | Team Udayavani |

ಮಂಡ್ಯ: ಶಾಲಾ ಮಕ್ಕಳ ಹರಿದ ಬಟ್ಟೆ ಹೊಲಿದು ಕೊಡುತ್ತಿದ್ದ ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸ್ವಾಮಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.

Advertisement

1967ನೇ ಜೂ.20ರಂದು ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಜವರಯ್ಯ-ಚನ್ನಮ್ಮ ದಂಪತಿಯ ಪುತ್ರರಾಗಿ ಜನಿಸಿದ ಸ್ವಾಮಿ ಅವರು, ಪ್ರಾಥಮಿಕ ಶಿಕ್ಷಣವನ್ನು ಬಳ್ಳೂರಿನಲ್ಲೇ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಸಾಲಿಗ್ರಾಮದಲ್ಲಿ ಪಡೆದರೆ, ಪದವಿ ಪೂರ್ವ ಶಿಕ್ಷಣವನ್ನು ಕೆ.ಆರ್‌.ನಗರದಲ್ಲಿ ಮುಗಿಸಿದರು.

ಆಲಕೆರೆಯ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ:
ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ಟಿಸಿಎಚ್‌ ಮುಗಿಸಿದ ಸ್ವಾಮಿ ಅವರು 1989ರ ನವೆಂಬರ್‌ನಲ್ಲಿ ಮಂಡ್ಯ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಪ್ರಸ್ತುತ ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

60 ಮಕ್ಕಳಿಗೆ ಶಿಕ್ಷಣ:
ಇವರು ಈ ಶಾಲೆಗೆ ಮುಖ್ಯ ಶಿಕ್ಷಕರಾಗಿ ನೇಮಕವಾಗಿ ಬಂದ ನಂತರ ಶಾಲೆಯನ್ನು ಭೌತಿಕವಾಗಿ ಹಾಗೂ ಶೈಕ್ಷಣಿಕವಾಗಿ ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಮಕ್ಕಳ ಮನೆ ಮಾಡುವ ಮೂಲಕ 60 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಕೊಠಡಿಗಳಿಗೆ ಸ್ಪೀಕರ್‌ ಅಳವಡಿಕೆ
ದಾನಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರಿಂದ ಸುಮಾರು 25 ಲಕ್ಷ ರೂ. ಸಂಗ್ರಹಿಸಿ ಶಾಲೆಯಲ್ಲಿ ರಂಗಮಂದಿರ, ಶುದ್ಧ ಕುಡಿಯುವ ನೀರು, ಸೌರ ವಿದ್ಯುತ್‌, ಕ್ರೀಡಾ ಸಾಮಗ್ರಿಗಳು, ಅಲ್ಮೇರಾ, ಎಜುಸ್ಯಾಟ್‌ ಹಾಗೂ ರೇಡಿಯೋ ಕಾರ್ಯಕ್ರಮಕ್ಕೆ ಅಗತ್ಯವಾಗಿ ಬೇಕಾಗಿರುವ ಎಲ್ಲ ಕೊಠಡಿಗಳಿಗೆ ಸ್ಪೀಕರ್‌ಗಳನ್ನು ಅಳವಡಿಸಿದ್ದಾರೆ.

Advertisement

ವಿಶೇಷವೆಂದರೆ ಶಾಲೆಗೆ ಬರುತ್ತಿದ್ದ ಮಕ್ಕಳು ಹರಿದ ಬಟ್ಟೆಯಲ್ಲಿ ಬಂದಿದ್ದರೆ, ಕೂಡಲೇ ತಾವೇ ಹರಿದ ಬಟ್ಟೆಗಳನ್ನು ಹೊಲಿದು ಕೊಡುವ ಮೂಲಕ ಮಕ್ಕಳಿಗೆ ಶಿಸ್ತು, ಸ್ವಚ್ಛತೆ, ಪರಿಸರ ಜ್ಞಾನ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಖುಷಿ ತಂದಿದೆ. ಪ್ರಶಸ್ತಿಯಿಂದ ನನ್ನ ಕರ್ತವ್ಯ ಪ್ರಜ್ಞೆ ಹಾಗೂ ಜವಾಬ್ದಾರಿ ಹೆಚ್ಚಿಸಿದೆ. ಶಾಲೆಯ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಶ್ರಮ ವಹಿಸಬೇಕು ಎಂಬುದನ್ನು ಪ್ರಶಸ್ತಿ ಸಾಬೀತುಪಡಿಸಿದೆ.
– ಸ್ವಾಮಿ, ಮುಖ್ಯ ಶಿಕ್ಷಕ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next