Advertisement

ಕಲ್ಲುಗಳ ನಾಡು ಕಾರ್ಕಳದಲ್ಲಿ  ಉತ್ತಮವಾಗಿದೆ ನೀರ ಸೆಲೆ

05:11 AM Feb 04, 2019 | |

ಕಾರ್ಕಳ: ಕರಿಗಲ್ಲಿನ ನಾಡು ಕಾರ್ಕಳದಲ್ಲಿ ಜೀವ ಜಲದ ಸೆಲೆ(ಒರತೆ)ಗೆ ಕೊರತೆಯಾಗದೇ ಸದ್ಯ ಬಾವಿಗಳಲ್ಲಿ ನೀರಿನ ಮಟ್ಟವು ಉತ್ತಮ ಸ್ಥಿತಿಯಲ್ಲಿದೆ.

Advertisement

ತಾಲೂಕಿನ ಸ್ವರ್ಣಾ ನದಿ ಹೊರತುಪಡಿಸಿದಲ್ಲಿ ಬೇರೆ ನದಿಗಳ ನೀರಿನ ಮೂಲವಿಲ್ಲ. ರಾಮಸಮುದ್ರ, ಆನೆಕೆರೆ, ಸಿಗಡಿಕೆರೆ ಇವು ಕಾರ್ಕಳಕ್ಕೆ ಪ್ರಕೃತಿಯೇ ನೀಡಿದ ವರದಾನ. ಉಳಿದಂತೆ ಕೆರೆ, ಬಾವಿ, ಕೊಳವೆ ಬಾವಿಗಳೇ ನೀರಿನ ಆಸರೆ. ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಬೀಳುವ ಪ್ರದೇಶವಾಗಿರುವ ಕಾರ್ಕಳ ತಾಲೂಕಿನಲ್ಲಿ 2017ರಲ್ಲಿ 4,800 ಮೀ.ಮೀ. ಮಳೆಯಾಗಿದ್ದು, 2018ರಲ್ಲಿ 4,003 ಮೀ.ಮೀ. ಮಳೆ ಸುರಿದಿದೆ.

ಪುರಸಭಾ ವ್ಯಾಪ್ತಿಯ ಚಿತ್ರಣ
ಸ್ವರ್ಣಾ ನದಿ ನೀರನ್ನು ಮುಂಡ್ಲಿಯಿಂದ 125 ಎಚ್‌ಪಿ ಪಂಪ್‌ಸೆಟ್‌ ಬಳಸಿ ರಾಮ ಸಮುದ್ರ ಬಳಿಯಿರುವ ನೀರು
ಶುದ್ಧೀಕರಣ ಘಟಕಕ್ಕೆ ಪ್ರತಿದಿನ 3 ಎಂಎಲ್‌ಡಿ (ಮೆಗಾ ಲೀಟರ್‌ ಪರ್‌ ಡೇ. 1 ಎಂಎಲ್‌ಡಿ =10 ಲಕ್ಷ ಲೀ.) ನೀರು ಪೂರೈಸಲಾಗುತ್ತಿದ್ದು, ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ 4,558 ಕುಟುಂಬಗಳು ನೀರಿನ ಸಂಪರ್ಕ ಪಡೆದಿವೆ.
ಮುಂಡ್ಲಿ ಯೋಜನೆಯಲ್ಲದೇ ಪುರಸಭಾ ವ್ಯಾಪ್ತಿಯಲ್ಲಿ 13 ಕೊಳವೆ ಬಾವಿ ಇವೆ. ಅನೇಕ ಖಾಸಗಿ ಬಾವಿ, ಕೊಳವೆ ಬಾವಿಗಳಿವೆ. 5 ಎಕರೆ ವಿಸ್ತೀರ್ಣದ ಆನೆಕೆರೆಯ ಅಲ್ಪ ಭಾಗದ ಹೂಳನ್ನು ಮತ್ತು 3 ಎಕರೆ ವಿಸ್ತೀರ್ಣದ ಸಿಗಡಿ ಕೆರೆಯಲ್ಲಿ ತುಂಬಿದ್ದ ಪೂರ್ತಿ ಹೂಳನ್ನು ತೆಗೆದು ನೀರು ಸಮೃದ್ಧವಾಗಿ ತುಂಬುವಂತೆ ಮಾಡಲಾಗಿದೆ. ಇದರಿಂದ ಈ ಭಾಗದ ಬಾವಿಗಳಲ್ಲಿನ ನೀರಿನ ಮಟ್ಟ ಗಣನೀಯವಾಗಿ ವೃದ್ಧಿಸಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಸ ಯೋಜನೆಗಳು
2018ರಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಬವಣೆ ಅಷ್ಟಾಗಿ ಕಂಡು ಬರದಿದ್ದರೂ ಮುಂಜಾಗ್ರತೆ ನಿಟ್ಟಿನಲ್ಲಿ ಹಿರಿಯಂಗಡಿಯಲ್ಲಿ 20 ಲಕ್ಷ ರೂ., ಹವಾಲ್ದಾರ್‌ ಬೆಟ್ಟಿನಲ್ಲಿ 10.25 ಲಕ್ಷ ರೂ., ತೆಳ್ಳಾರು 19ನೇ ಅಡ್ಡರಸ್ತೆಯಲ್ಲಿ 19.6 ಲಕ್ಷ ರೂ,ಕಾಬೆಟ್ಟು ನೇತ್ರಾವತಿ ರಸ್ತೆಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಬಾವಿ ನಿರ್ಮಿಸಲಾಗಿದೆ. ಜೋಗಲ್‌ ಬೆಟ್ಟಿನಲ್ಲಿಒಂದು ಬಾವಿ, ಕಲ್ಲೊಟ್ಟೆ ರಸ್ತೆಯಲ್ಲಿ 2 ಕೊಳವೆ ಬಾವಿ ಕೊರೆಯಲಾಗಿದೆ.

ಶಾಶ್ವತ ನೀರು ಪೂರೈಕೆಗೆ ಯೋಜನೆಗಳು
ಎಂವಿಎಸ್‌ ಅನುಷ್ಠಾನದಲ್ಲಿ  ಸರಕಾರದ  ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ  ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯು ಕಾರ್ಕಳ ತಾಲೂಕಿನ ಹೆಬ್ರಿ ಹಾಗೂ ನಿಟ್ಟೆಯಲ್ಲಿ ಸ್ಥಾಪನೆಯಾಗುತ್ತಿದೆ. ಹೆಬ್ರಿ ಯೋಜನೆಗೆ 7.5 ಕೋ.ರೂ. ಹಾಗೂ ನಿಟ್ಟೆ ಯೋಜನೆಗೆ 5.91 ಕೋ.ರೂ. ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಹೆಬ್ರಿ ಪರಿಸರದ 4 ಗ್ರಾ.ಪಂ. ಗಳಿಗೆ ಹಾಗೂ ನಿಟ್ಟೆಯ 1 ಗ್ರಾ.ಪಂ.ಗೆ ನೀರು ಪೂರೈಕೆಯಾಗಲಿದ್ದು, ಇಲ್ಲಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ.

Advertisement

ಅಂತರ್ಜಲ ಮಟ್ಟ ಅಲ್ಪ ಏರಿಕೆ 


2017ರ ಎಪ್ರಿಲ್‌ನಲ್ಲಿ ನೀರಿನ ಅಭಾವವಿದ್ದ ಕಾರಣ ಎತ್ತರ ಪ್ರದೇಶದಲ್ಲಿರುವ ಕೆಲವೊಂದು ಮನೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಈ ಹಿನ್ನೆಲೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗಿದೆ. 2018ರಲ್ಲಿ ನೀರಿನ ಬವಣೆ ಪುರಸಭಾ  ವ್ಯಾಪ್ತಿಯಲ್ಲಿ ತಲೆದೋರಿಲ್ಲ. ಈ ವರ್ಷ ಕುಡಿಯುವ ನೀರಿಗಾಗಿ ಜನತೆ ಪರಿತಪಿಸಬಾರದೆನ್ನುವ ನಿಟ್ಟಿನಲ್ಲಿ ಪುರಸಭೆಯ ವತಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪದ್ಮನಾಭ ಎನ್‌. ಕೆ., ಕಿರಿಯ ಅಭಿಯಂತರು, ಪುರಸಭೆ ಕಾರ್ಕಳ

ಗ್ರಾ.ಪಂ.ಗಳು 14ನೇ ನಿಧಿ ಅನುದಾನವನ್ನು ಗರಿಷ್ಠ ಪ್ರಮಾಣದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಬಳಸುತ್ತಿವೆ. ತುರ್ತು ನೀರಿನ ಯೋಜನೆಗಾಗಿ ಬಿಡುಗಡೆಗೊಂಡ 50 ಲಕ್ಷ ರೂ. ವೆಚ್ಚದಲ್ಲಿ ನಾನಾ ಕಾಮಗಾರಿಗಳು ನಡೆಯುತ್ತಿದ್ದು, ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
 ಶ್ರೀಧರ್‌ ನಾಯಕ್‌, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಕಾರ್ಕಳ

ಗ್ರಾಮಾಂತರ ಭಾಗದಲ್ಲಿ  ಸಮಸ್ಯೆ
ಕಾರ್ಕಳ ನಗರ ಪ್ರದೇಶಗಳಲ್ಲಿ ನೀರಿನ ಅಭಾವ ಅಷ್ಟಾಗಿ ಎದುರಾಗದಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಸಮಸ್ಯೆ ಇದೆ. ಕಳೆದ ವರ್ಷ ಹೆಬ್ರಿ, ಚಾರಾ, ಶಿವಪುರ, ಮರ್ಣೆ, ವರಂಗ, ನಿಟ್ಟೆ, ಕುಚ್ಚಾರು, ಪಳ್ಳಿ, ಕಲ್ಯಾ, ನೀರೆ, ಶಿರ್ಲಾಲು ಗ್ರಾ.ಪಂ. ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜುಗೊಳಿಸಲಾಗಿತ್ತು. ತಹಶೀಲ್ದಾರ್‌ ಅವರ ಸೂಚನೆ ಮೇರೆಗೆ ತಾ.ಪಂ. ಟ್ಯಾಂಕರ್‌ ಮೂಲಕ ಈ ಭಾಗಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next