ಮದ್ದೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮಂಡ್ಯ ಜಿಲ್ಲೆ “ಎ’ ಶ್ರೇಣಿಯಲ್ಲಿ 4ನೇ ಸ್ಥಾನಕ್ಕೆ ಜಿಗಿಯುವ ಮೂಲಕ ಉತ್ತಮ ಫಲಿತಾಂಶ ಪಡೆದುಕೊಂಡಿದೆ.
ಮೈಸೂರು ವಿಭಾಗ ಮಟ್ಟದ ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆಗೆ “ಎ’ ಶ್ರೇಣಿ ಸ್ಥಾನ ಬಂದಿದ್ದು, ರಾಜ್ಯದ 8 ಮಂದಿ ಟಾಪರ್‌ಗಳ ಪೈಕಿ ಮಂಡ್ಯ ತಾಲೂಕಿನ ಮಾರದೇವನಹಳ್ಳಿಯ ಶ್ರೀಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮಾಧ್ಯಮ ಬಾಲಕರ ಶಾಲೆಯ ವಿದ್ಯಾರ್ಥಿ ಎಂ.ಸಿ.ಧೀರಜ್‌ರೆಡ್ಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
6 ಸ್ಥಾನಗಳ ಜಿಗಿತ: ಕಳೆದ ವರ್ಷ 10ನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆ 6 ಸ್ಥಾನಗಳ ಜಿಗಿತ ಕಂಡಿದೆ. 2014ರಲ್ಲೂ 4ನೇ ಸ್ಥಾನ ಪಡೆದಿತ್ತು. 2011ರಲ್ಲಿ 3ನೇ ಸ್ಥಾನ ಪಡೆದಿದ್ದ ಮಂಡ್ಯ, 2012ರಲ್ಲಿ 8 ಸ್ಥಾನಕ್ಕೆ ಕುಸಿದಿತ್ತು. 2013ರಲ್ಲಿ ಮತ್ತೆ 6 ಸ್ಥಾನಗಳ ಜಿಗಿದು ರಾಜ್ಯಕ್ಕೆ 2ನೇ ಸ್ಥಾನ ಪಡೆದಿತ್ತು. 2015ರಲ್ಲಿ 6ನೇ ಸ್ಥಾನ ಪಡೆದಿತ್ತು. 2016ರಲ್ಲಿ ಕುಸಿತ ಕಾಣುವ ಮೂಲಕ 21ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 2017ರಲ್ಲಿ 23ನೇ ಸ್ಥಾನ ಹಾಗೂ 2018ರಲ್ಲಿ 28ನೇ ಸ್ಥಾನಕ್ಕೆ ಕುಸಿದಿತ್ತು.
ಶ್ರಮದ ಫಲ: ಪ್ರಸ್ತುತ ಜಿಲ್ಲೆಯ 11,099 ಬಾಲಕರು, 10,161 ಬಾಲಕಿಯರು ಸೇರಿದಂತೆ 21,260 ವಿದ್ಯಾರ್ಥಿಗಳು ಕೋವಿಡ್ ಭಯದ ನಡುವೆಯೂ ಪರೀಕ್ಷೆ ಬರೆದಿದ್ದರು. ಕೋವಿಡ್ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತೆ ತೆಗೆದುಕೊಂಡು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಉತ್ತಮಪಡಿಸಲು ಜಿಲ್ಲಾಧಿಕಾರಿ ಡಾ.ಎಂ..ವೆಂಕಟೇಶ್, ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಹಾಗೂ ಡಿಡಿಪಿಐ ರಘುನಂದನ್ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಅಧಿಕಾರಿಗಳ ಶ್ರಮ ಫಲ ನೀಡಿದೆ.
ಮೊದಲನೇ ಸ್ಥಾನಕ್ಕೆ ಪ್ರಯತ್ನಿಸಿ: ಯಾಲಕ್ಕಿಗೌಡ : ಮಂಡ್ಯ ಜಿಲ್ಲೆ ಕಳೆದ ಬಾರಿ 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿರುವುದು ಸಂತಸ ತಂದಿದೆ. ಫಲಿತಾಂಶ ಉತ್ತಮಪಡಿಸಲು ಶಿಕ್ಷಕರಿಗೆ 60 ಕಾರ್ಯಾಗಾರಗಳನ್ನು ನಡೆಸಲಾಗಿತ್ತು. ಲಾಕ್ ಡೌನ್‌ಗೂ ಮುಂಚೆ ಪರೀಕ್ಷೆ ನಡೆದಿದ್ದರೆ, ಮೊದಲ ಸ್ಥಾನಕ್ಕೇರುವ ಎಲ್ಲ ಸಾಧ್ಯತೆ ಇತ್ತು. ಜಿಲ್ಲೆಯ ವಿದ್ಯಾರ್ಥಿ ರಾಜ್ಯದಲ್ಲಿ ಟಾಪರ್ ಬಂದಿರುವುದರಿಂದ ಹೆಮ್ಮೆಯ ವಿಷಯವಾಗಿದೆ. ಇದೊಂದು ದೊಡ್ಡ ಸಾಧನೆಯಾಗಿದೆ. ಮುಂದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಪ್ರವೃತ್ತರಾಗುವ ಮೊದಲನೇ ಸ್ಥಾನಕ್ಕೆ ಪ್ರಯತ್ನಿಸಬೇಕು ಎಂದು ಜಿಪಂ ಅಂದಿನ ಸಿಇಒ ಕೆ.ಯಾಲಕ್ಕಿಗೌಡ ಹೇಳಿದರು.
ನಮ್ಮ ಗುರಿ ಮೊದಲ ಸ್ಥಾನವಾಗಿತ್ತು. ಈಗ ಇನ್ನೂ ಫಲಿತಾಂಶದ ವಿವರ ಬರದ ಕಾರಣ ಮೊದಲ ಸ್ಥಾನ ಹಾಗೂ ನಮ್ಮ ಜಿಲ್ಲೆಯ ಸ್ಥಾನಕ್ಕೆ ಇರುವ ಫಲಿತಾಂಶದ ವ್ಯತ್ಯಾಸ ಗೊತ್ತಾಗಬೇಕಿದೆ. 10ನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು ನಾಲ್ಕನೇ ಸ್ಥಾನಕ್ಕೆ ತರಲು ಎಲ್ಲ ಶಿಕ್ಷಕರು ಹಾಗೂ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೊದಲ ಸ್ಥಾನ ಪಡೆಯಲು ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗುವುದು. ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳ ಶಿಕ್ಷಕರಿಗೆ ಹೆಚ್ಚಿನ ಶ್ರಮವಹಿಸುವಂತೆ ಸೂಚಿಸಲಾಗುವುದು.
– ರಘುನಂದನ್, ಡಿಡಿಪಿಐ, ಮಂಡ್ಯ