ಕಲಬುರಗಿ: ಆರೋಗ್ಯವಂತ ವ್ಯಕ್ತಿಯಿಂದ ಮಾತ್ರವೇ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ. ಆದ್ದರಿಂದ ಇಂದಿನ ಯುವಕರು ಉತ್ತಮ ಆರೋಗ್ಯ ಪಡೆಯುವತ್ತ ಹೆಚ್ಚು ಕಾಳಜಿ ಹರಿಸಬೇಕು ಎಂದು ಗುವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಪ್ರೊ| ರಮೇಶ ಲಂಡನಕರ್ ಹೇಳಿದರು.
ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೂಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ರಾಷ್ಟ್ರೀಯ ಸೇವ ಯೋಜನೆ ಕೋಶ ಹಮ್ಮಿಕೊಂಡಿದ್ದ ಏಡ್ಸ್ ಕುರಿತು ಅರಿವು ಮೂಡಿಸುವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದುವುದನ್ನು ಬಿಟ್ಟು ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ಸರಿಯಾದ ಮಾರ್ಗವಲ್ಲ. ಮೊದಲು ಓದಿನ ಕಡೆಗೆ ಸಮಯ ನೀಡಿ. ಜೊತೆಗೆ ಹೆತ್ತವರಕಡೆಗೂ ಕಾಳಜಿ ಇಡಿ. ಸಮಾಜ ಕಾರ್ಯಗಳಲ್ಲಿ, ರಾಷ್ಟ್ರೀಯ ಸೇವೆಗಳಲ್ಲಿ ತೊಡಗಿಸಿಕೊಳ್ಳಿ. ಇದರಿಂದ ಉತ್ತಮ ಹಾಗೂ ಆಕರ್ಷಕ ವ್ಯಕ್ತಿತ್ವ ನಿಮ್ಮದಾಗುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಮಲ್ಲಿಕಾರ್ಜುನ ಪರಡಿ, ದಾನಗಳಲ್ಲಿಯೇ ರಕ್ತ ದಾನ ಶ್ರೇಷ್ಠವಾಗಿದ್ದು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನಮಾಡಬೇಕು ಎಂದು ಹೇಳಿದರು.
ಕುಲಸಚಿವ ಪ್ರೊ| ದಯಾನಂದ ಅಗಸರ ಉದ್ಘಾಟಿಸಿ, ಏಡ್ಸ್ ಭಯಾನಕ ರೋಗವಾಗಿದ್ದು, ಈ ರೋಗಕ್ಕೆಯುವಜನತೆ ಬಲಿಯಾಗುತ್ತಿದ್ದಾರೆ. ಇದರಿಂದ ದೂರವಿರಿ ಎಂದು ಸಲಹೆ ನೀಡಿದರು.
ಮಲ್ಲಿಕಾರ್ಜುನ ಬಿರಾದಾರ, ಪ್ರೊ| ಡಿ.ಎಂ. ಮದರಿ, ಕುಲಸಚಿವರು (ಮೌಲ್ಯಮಾಪನ), ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ| ರಾಜೇಂದ್ರ ಭಾಲ್ಕೆ ಹಾಜರಿದ್ದರು. ಸೋಮನಾಥ ನಿರೂಪಿಸಿದರು, ಮಲ್ಲಿಕಾರ್ಜುನ ವಂದಿಸಿದರು, ಡಾ| ಚಂದ್ರಕಲಾ ಬಿದರಿ ಪ್ರಾರ್ಥನಾ ಗೀತೆ ಹಾಡಿದರು.