ಮೈಸೂರು: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಂಸದೀಯ ಸಮಿತಿಯು ಸಮಿತಿಯ ಅಧ್ಯಕ್ಷರಾದ ರಮಾದೇವಿ ಅವರ ನೇತೃತ್ವದಲ್ಲಿ ಇಲ್ಲಿನ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿತು.
ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಅಭಿವೃದ್ಧಿ ನಿಗಮ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಅಭಿವೃದ್ಧಿ ನಿಗಮ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಅಭಿವೃದ್ಧಿ ನಿಗಮ ಸೇರಿದಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಧಿಕಾರಿಗಳೊಂದಿಗೆ ಆಯಾ ಇಲಾಖೆ ವತಿಯಿಂದ ಕರ್ನಾಟಕದಲ್ಲಿನ ಎಸ್.ಸಿ., ಒಬಿಸಿ ಮತ್ತು ಅಪಾಯಕಾರಿ ಉದ್ಯೋಗದಲ್ಲಿ ತೊಡಗಿರುವ ವ್ಯಕ್ತಿಗಳ ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು, ಸಫಾಯಿ ಕರ್ಮಚಾರಿಗಳ ಕಲ್ಯಾಣ ಮತ್ತು ಪುನರ್ವಸತಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈ ಸಭೆ ನಡೆಯಿತು.
ರಾಜ್ಯ ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಕರ್ನಾಟಕ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಕೈಗೊಂಡಿರುವ ಕಾರ್ಯಗಳ ಬಗ್ಗೆ ಸಮಿತಿ ಮಾಹಿತಿ ಪಡೆಯಿತು.
ಸಮಿತಿಯ ಅಧ್ಯಕ್ಷರಾದ ರಮಾದೇವಿ ಮಾತನಾಡಿ, ಸಮಾಜದ ಹಿಂದುಳಿದ ವರ್ಗಗಳಾದ ಎಸ್.ಸಿ, ಎಸ್.ಟಿ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡು ಸಮಿತಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಕಾರ್ಯಕ್ರಮಗಳ ಕುರಿತು ಚರ್ಚೆ: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ರಕ್ಷಣಾ ಸಚಿವಾಲಯದ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿ ಆ ಸಂಸ್ಥೆಯಲ್ಲಿ ಎಸ್ .ಸಿ, ಎಸ್.ಟಿ ಮತ್ತು ವಿಕಲಚೇತನರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು, ಸಂಸ್ಥೆಗಳಲ್ಲಿರುವ ಸಿ.ಎಸ್.ಆರ್. ನಿಧಿ ಬಳಸಿಕೊಂಡು ರೂಪಿಸಿರುವ ಚಟುವಟಿಕೆ ಹಾಗೂ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಂಸದೀಯ ಸಮಿತಿಯ ಸದಸ್ಯರು, ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ಇದ್ದರು.