ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿತ್ಯ ಒಂದು ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಪಡುತ್ತಿದ್ದಾರೆ. ಈ ಹಿನ್ನೆಲೆ ಸೋಮವಾರ ಮತ್ತೆ 15.25 ಲಕ್ಷ ಡೋಸ್‌ಗಳ ಲಸಿಕೆ ರಾಜ್ಯಕ್ಕೆ ಬರಲಿದೆ.
ಏ.1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆಗೆ ಅನುಮತಿ ನೀಡಿದ ಹಿನ್ನೆಲೆ ರಾಜ್ಯದಲ್ಲಿ ಹೆಚ್ಚು ಮಂದಿ ಲಸಿಕೆ ಪಡೆಯುತ್ತಿದ್ದಾರೆ. ಶನಿವಾರ ದಾಖಲೆಯ ಎರಡು ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ. ಭಾನುವಾರ ರಜೆ ದಿನವಾದ ಹಿನ್ನೆಲೆ 8,892 ಮಂದಿ 45 ವರ್ಷ ಮೇಲ್ಪಟ್ಟವರು, 5,637 ಮಂದಿ ಹಿರಿಯರು ಲಸಿಕೆ ಪಡೆದಿದ್ದಾರೆ. ರಾಜ್ಯದಲ್ಲಿ ಈವರೆಗೂ 5.7 ಲಕ್ಷ ಆರೋಗ್ಯ ಕಾರ್ಯಕರ್ತರು, 2.46 ಲಕ್ಷ ಮುಂಚೂಣಿ ಕಾರ್ಯಕರ್ತರು, 45 ವರ್ಷದಿಂದ 59 ವರ್ಷದವರೆಗಿನ 9.10 ಲಕ್ಷ ಮಂದಿ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು 21.65 ಲಕ್ಷ ಮಂದಿ ಸೇರಿ 43.5 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆ ಲಸಿಕೆ ಕೊರತೆ ಎಂಬ ಮಾತು ಕೇಳಿ ಬರುತ್ತಿದ್ದು, ಈ ಕುರಿತು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಕರ್ನಾಟಕಕ್ಕೆ ಸೋಮವಾರ ಎರಡು ಪ್ರತ್ಯೇಕ ಕಂತುಗಳಲ್ಲಿ ಒಟ್ಟು 15,25,500 ಡೋಸ್ ಕೊರೊನಾ ಲಸಿಕೆ ಬರಲಿದೆ. ಒಂದು ಕಂತಿನಲ್ಲಿ ರಸ್ತೆ ಮೂಲಕ 5,25,500 ಡೋಸ್ ಲಸಿಕೆ ಬೆಳಗಾವಿಗೆ ತಲುಪಲಿದ್ದು, ಮತ್ತೂಂದು ಕಂತಿನಲ್ಲಿ 10 ಲಕ್ಷ ಡೋಸ್ ಲಸಿಕೆ ವಿಮಾನದ ಮೂಲಕ ಸೋಮವಾರ ಸಂಜೆ ಬೆಂಗಳೂರಿಗೆ ತಲುಪಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರಿಗೆ ಕೋವಿಡ್ ಪಾಸಿಟಿವ್
ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 7 ಲಕ್ಷ ಲಸಿಕೆ ದಾಸ್ತಾನಿದೆ. ಇದೀಗ ಮತ್ತೆ 15.25 ಲಕ್ಷ ಲಸಿಕೆ ಬರುತ್ತಿರುವುದರಿಂದ ರಾಜ್ಯದಲ್ಲಿ ಯಾವುದೇ ಲಸಿಕೆ ಕೊರತೆ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.