ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಅವರ “ವಜ್ರಗಳು’ ಕಾದಂಬರಿ ಆಧಾರಿತ ಚಿತ್ರ “ಸಾರಾ ವಜ್ರ’ ಬಿಡುಗಡೆಯಾಗಿ ತೆರೆಗೆ ಬಂದಿದ್ದು, ನಿಧಾನವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಮುಸ್ಲಿಂ ಮಹಿಳೆಯ ಬದುಕು, ಧಾರ್ಮಿಕ ಕಟ್ಟುಪಾಡು ಗಳು, ಮಹಿಳಾ ಸ್ವಾತಂತ್ರ್ಯ, ತಲಾಖ್, ಕೌಟುಂಬಿಕ ಕ್ರೌರ್ಯ ಮೊದಲಾದ ಸಂಗತಿಗಳ ಸುತ್ತ “ಸಾರಾ ವಜ್ರ’ ಚಿತ್ರದ ಕಥಾಹಂದರವಿದ್ದು, ಚಿತ್ರದಲ್ಲಿ ನಟಿ ಅನು ಪ್ರಭಾಕರ್ ನಾಯಕಿಯಾಗಿ ನಫೀಸಾ ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
1980-90ರ ದಶಕದ ಸಾಮಾಜಿಕ ಸ್ಥಿತಿ-ಗತಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಸಾಗುವ “ಸಾರಾ ವಜ್ರ’ ಸಿನಿಮಾದಲ್ಲಿ ಅನು ಪ್ರಭಾಕರ್ ಅವರೊಂದಿಗೆ ಹಿರಿಯ ನಟ ರಮೇಶ್ ಭಟ್, ಸುಧಾ ಬೆಳವಾಡಿ, ರೆಹಮಾನ್ ಹಾಸನ್, ಪ್ರದೀಪ್ ಪೂಜಾರಿ, ಶಂಕನಾದ ಅರವಿಂದ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ದಕ್ಷಿಣ ಕನ್ನಡ, ಕಾಸರಗೋಡು ಸುತ್ತಮುತ್ತಲಿನ ಕರಾವಳಿಯ ಸುಂದರ ತಾಣಗಳಲ್ಲಿ “ಸಾರಾ ವಜ್ರ’ದ ಚಿತ್ರೀಕರಣ ನಡೆಸಲಾಗಿದೆ. ಎಂ. ದೇವೇಂದ್ರ ರೆಡ್ಡಿನಿರ್ಮಾಣದಲ್ಲಿ ಮೂಡಿ ಬಂದಿರುವ “ಸಾರಾ ವಜ್ರ’ ಚಿತ್ರಕ್ಕೆಅರ್ನಾ ಸಾಧ್ಯ (ಶ್ವೇತಾ ಶೆಟ್ಟಿ) ನಿರ್ದೇಶನ ಮಾಡಿದ್ದಾರೆ.
ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಕೂಡ ಪ್ರದರ್ಶನ ಕಂಡಿರುವ “ಸಾರಾ ವಜ್ರ’ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಥಿಯೇಟರ್‌ಗಳಲ್ಲಿ ತೆರೆ ಕಂಡಿರುವ “ಸಾರಾ ವಜ್ರ’ ಮಹಿಳಾಪ್ರಧಾನ ಚಿತ್ರವಾಗಿ ಸದಭಿರುಚಿ ಪ್ರೇಕ್ಷರನ್ನು ಸೆಳೆಯುತ್ತಿದ್ದು, ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳ ನಡುವೆಯೇ ತೆರೆಕಂಡಿರುವ “ಸಾರಾ ವಜ್ರ’ಕ್ಕೆ ಇಂಥದ್ದೊಂದು ಪ್ರತಿಕ್ರಿಯೆ ಸಿಗುತ್ತಿರುವುದು ಚಿತ್ರತಂಡಕ್ಕೆ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.