ತುಮಕೂರು: ಕಲ್ಪತರು ನಾಡಿನಲ್ಲಿ ಈ ವಾರ ಕೋವಿಡ್ ಆರ್ಭಟ ಹೆಚ್ಚಿ ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದ್ದು ಆತಂಕದಲ್ಲಿರುವ ಜನರು ಕೋವಿಡ್ ಗೆ ಹೆದರಿ ಸೋಂಕು ಹರಡದಂತೆ ಸರ್ಕಾರ ಘೋಷಿಸಿರುವ ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ನೀಡಿರುವ ಭಾನುವಾರದ ಲಾಕ್ ಡೌನ್ ಆದೇಶಕ್ಕೆ ಇಡೀ ಜಿಲ್ಲೆಯ ಜನರು ಸ್ಪಂದಿಸಿದ್ದು ಎಲ್ಲಾ ಕಡೆ ಜನರು ಮನೆಯಿಂದ ಹೊರ ಬರದೇ ಕೋವಿಡ್ ವೈರಸ್ ಹರಡ ದಂತೆ ತಡೆಯಲು ಜನರು ಜಾಗೃತಿ ವಹಿಸಿರುವುದು ಕಂಡುಬಂದಿದ್ದರೂ ಚಿಕನ್, ಮಟನ್ ಮತ್ತು ಮೀನು ಮಾರಾಟದ ಅಂಗಡಿ ಗಳ ಮುಂದೆ ಜನರು ಸಾಮಾಜಿಕ ಅಂತರವನ್ನು ಮರೆತು ಕ್ಯೂ ನಿಂತಿರುವುದು ಎಲ್ಲಾ ಕಡೆ ಕಂಡು ಬಂದಿತು.
ರಸ್ತೆಗಳು ಖಾಲಿ ಖಾಲಿ: ಕೋವಿಡ್ ಸೋಂಕು ಈಗ ಜಿಲ್ಲೆಯ ಗ್ರಾಮಗಳಲ್ಲಿ ಹೆಚ್ಚು ಕಂಡು ಬರುತ್ತಿರುವಂತೆಯೇ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಕಡೆ ಭಾನುವಾರ ಲಾಕ್‌ಡೌನ್‌ಗೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಕಲ್ಪತರು ನಾಡಿನಲ್ಲಿ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿ ಜನ ಸಂಚಾರ ಸಂಪೂರ್ಣ ಸ್ತಬ್ಧಗೊಂಡ ಪರಿಣಾಮ ಇಡೀ ತುಮಕೂರು ಬಿಕೋ ಎನ್ನುತ್ತಿತ್ತು.
ಲಾಕ್‌ಡೌನ್‌ಗೆ ಸ್ಪಂದಿನೆ: ಲಾಕ್‌ಡೌನ್ ಸಡಿಲಿಕೆ ಗೊಂಡ ನಂತರ ಎಲ್ಲಾ ಕಡೆ ಜನಸಂಚಾರ ಹೆಚ್ಚಿ ಇಡೀ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಪರಿಣಾಮ ಸರ್ಕಾರ ಕರೆ ನೀಡಿರುವ ಭಾನುವಾರದ ಲಾಕ್‌ಡೌನ್‌ಗೆ ಕಲ್ಪತರು ನಾಡಿನ ಜನರು ಲಾಕ್‌ಡೌನ್‌ಗೆ ಸ್ಪಂದಿಸಿದ್ದಾರೆ. ಇಡೀ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಗೊಳಿಸಿದ ಪರಿಣಾಮ ಜಿಲ್ಲಾದ್ಯಂತ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಲಾಕ್‌ಡೌನ್‌ಗೆ ಬೆಂಬಲಿಸಿ ಸರ್ಕಾರ ಘೋಷಿಸಿರುವ ಕೋವಿಡ್ ವೈರಸ್ ನಿಯಂತ್ರಣಕ್ಕೆ ಕೈ ಜೋಡಿಸಿದರು.