ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಕೆಲವೇ ದಿನಗಳಲ್ಲಿ ಶೇಕಡ ನೂರರಷ್ಟು ಬಿತ್ತನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹುತಾತ್ಮ ಯೋಧರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬರದಛಾಯೆ ಬಹುತೇಕ ಸರಿದಂತಾಗಿದೆ. ಬಿತ್ತನೆ ಕಾರ್ಯಗಳು ಚುರುಕುಗೊಂಡಿದ್ದು, ಹಾವೇರಿಯಲ್ಲಿ ಶೇ. 87ರಷ್ಟು ಆಗಿದೆ. ಅದೇ ರೀತಿ, ರಾಜ್ಯದ ಇತರ ಪ್ರದೇಶಗಳಲ್ಲೂ ಬಿತ್ತನೆ ಪ್ರಮಾಣ ಏರಿಕೆ ಕಂಡುಬರುತ್ತಿದೆ ಎಂದು ಹೇಳಿದರು.
ಮಳೆಯಿಂದ ಕೈಮೀರಿ ಹೋಗುವ ಪರಿಸ್ಥಿತಿ ಎಲ್ಲಿಯೂ ನಿರ್ಮಾಣವಾಗಿಲ್ಲ. ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ, ಆಲಮಟ್ಟಿ ಸೇರಿದಂತೆ ರಾಜ್ಯದ ಎಲ್ಲ ಜಲಾಶಯಗಳಿಗೆ ಒಳಹರಿವು ಹೆಚ್ಚಾಗುತ್ತಿದೆ. ರೈತರಿಗೆ ಹಾಗೂ ಸರ್ಕಾರಕ್ಕೆ ಸಂತೋಷ ತಂದಿದೆ. ಇದರೊಂದಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲವಾಗಿದ್ದು, ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಕುಡಿಯುವ ನೀರಿನ ಸಮಸ್ಯೆ ಕೂಡ ಬಗೆಹರಿದಿದೆ ಎಂದರು.
31ಕ್ಕೆ ವಿವಿಧ ಜಿಲ್ಲೆಗಳ ಪ್ರವಾಸ: ಬರುವ ಸೋಮವಾರ ಮತ್ತು ಮಂಗಳೂರು ಅಂದರೆ ಜುಲೈ 31 ಹಾಗೂ ಆಗಸ್ಟ್ 1ರಂದು ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲಿದ್ದು, ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಜನರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸಲಾಗುವುದು. ಈಗಾಗಲೇ ಸಚಿವ ಕೃಷ್ಣ ಬೈರೇಗೌಡ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಗಿಲ್ ಯೋಧರ ಬದುಕು ಯುವಕರಿಗೆ ಸ್ಫೂರ್ತಿ: ಇದಕ್ಕೂ ಮುನ್ನ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ಸುಮಾರು 524 ಯೋಧರು ದುರ್ಗಮ ಸ್ಥಳದಲ್ಲಿ ಹೋರಾಡಿ ದೇಶವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಎಲ್ಲರ ಆತ್ಮಕ್ಕೆ ಶಾಂತಿ ಕೋರಿ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹುತಾತ್ಮ ಯೋಧರ ಜೀವನ ಯುವಕರಿಗೆ ಸ್ಫೂರ್ತಿ ಎಂದು ಹೇಳಿದರು.