ಶ್ರೀರಂಗಪಟ್ಟಣ: ವಾಡಿಕೆಯಂತೆ ಸೆಪ್ಟೆಂಬರ್, ಅಕ್ಟೋ ಬರ್ ತಿಂಗಳು ಶ್ರೀರಂಗಪಟ್ಟಣದಲ್ಲಿ ಉತ್ತಮ ಮಳೆಯಾ ಗಿದ್ದು, ರೈತರಿಗೆ ಒಂದು ರೀತಿಯಲ್ಲಿ ಹರ್ಷ ತಂದಿದೆ.
ಉತ್ತಮ ಮಳೆಯಿಂದ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿ ಸರಿಯಾದ ಸಮಯಕ್ಕೆ ನಾಲೆಗಳಿಗೆ ನೀರು ನೀಡಿ, ಮುಂಗಾರು ಭತ್ತ ಬಿತ್ತನೆ ಕಾರ್ಯ ನಡೆಸಿ, ನಾಟಿ ಮಾಡಿ ಪೈರು ಬೆಳೆಯುವರೆಗೂ ರೈತರು ಉತ್ತಮ ಬೇಸಾಯ ಮಾಡಿದ್ದರು.
ಯಾವುದೇ ರೋಗವಿಲ್ಲ: ಭತ್ತದಲ್ಲಿನ ಕಳೆಕಿತ್ತು ಉತ್ತಮ ಪೋಷಕಾಂಶದ ಗೊಬ್ಬರ ಹಾಕಿ, ಬೆಳೆಗೆ ಸಮೃದ್ಧ ನೀರು ನೀಡಿದ್ದರಿಂದ ಭತ್ತ ನಾಟಿ ಮಾಡಿರುವ ಜಮೀನುಗಳಲ್ಲಿ ಯಾವುದೇ ರೋಗವಿಲ್ಲದೆ ಉತ್ತಮ ಬೆಳೆಯಾಗುವ ಸಂಭವ ಹೆಚ್ಚಾಗಿದೆ. ಕೆಲವು ಭಾಗದ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ನೀರಾವರಿ ಪ್ರದೇಶದ ಜಮೀನುಗಳಿಗೆ ಒಂದೆಡೆ ಭತ್ತ ನಾಟಿ ಮಾಡಿ, ಮಳೆಯಾಶ್ರಿತ ಪ್ರದೇಶದ ಕೆಲವು ಭಾಗದಲ್ಲಿ ಹೂವು ಬೆಳೆ, ಕಾಳುಗಳ ಬಿತ್ತನೆಯಾಗಿ ಫಸಲು ಬರುವ ಸಾಧ್ಯತೆಗಳಿವೆ. ಇನ್ನು ಕೆಲವು ಭಾಗಗಳಲ್ಲಿ ಉರುಳಿ ಚೆಲ್ಲುವ ಕಾರ್ಯ ನಡೆಯುತ್ತಿದೆ.
ರೋಗ ಕಡಿಮೆ: ಆಗಷ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ನಿರಂತರ ಮಳೆಯಿಂದ ಭತ್ತದ ಕಾಂಡ ಕೊರೆಯವ ಹುಳು, ಬೆಂಕಿ ರೋಗ, ಗರಿಸುತ್ತುವ ರೋಗ ಇವೆಲ್ಲವೂ ಕಡಿಮೆಯಾಗಿ ಭತ್ತದ ಬೆಳೆ ಬಿದ್ದ ಮಳೆಗೆ ನಳನಳಿಸಿ, ಈಗ ಉತ್ತಮ ಫಸಲು ಬರುವ ಸಾಧ್ಯತೆ ಹೆಚ್ಚಾಗಿದೆ. ಮಳೆ ಬಿದ್ದ ಪರಿಣಾಮ ಈ ಬಾರಿ ರೋಗ ಬೆಳೆಗೆ ತಗುಲಿಲ್ಲ. ಬೆಳೆಯು ಅಷ್ಟೇ ಪ್ರಮಾಣದಲ್ಲಿ ಚೆನ್ನಾಗಿ ಬೆಳೆದಿದೆ. ಇನ್ನೇನು ಭತ್ತದ ಗೊನೆ ಹೊರ ಚಾಚಿ ಹಾಲು ತುಂಬಿ ಕಾಯಿಯಾಗಿದೆ.
ಯಾವುದೇ ಅಡೆತಡೆಗಳಿಲ್ಲ: ಪ್ರತಿ ವರ್ಷ ಸೆಪ್ಟೆಂಬರ್ ವೇಳೆಗೆ ಮಳೆ ಇಲ್ಲದೆ, ನೀರಾವರಿ ಪ್ರದೇಶದಲ್ಲಿನ ಭತ್ತದ ಪೈರುಗಳಿಗೆ ಸೈನಿಕ ಹುಳುಗಳು ಬಾಧೆ ಜಮೀನುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈ ವರ್ಷ ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ಮಳೆ ಬಿದ್ದಿದ್ದರಿಂದ ಕಾಂಡ ಕೊರೆವ ಹುಳುಗಳ ಬಾಧೆಯಿಂದ ಮುಕ್ತವಾಗಿದೆ. ಬೆಳೆಗಳು ಯಾವುದೇ ಅಡೆತಡೆ ಇಲ್ಲದೆ ಬೆಳೆಯ ಇಳುವರಿ ಹೆಚ್ಚಾಗಿದ್ದು, ಖುಷಿಯಲ್ಲಿದ್ದಾರೆ ರೈತರು.
ಖರೀದಿ ಕೇಂದ್ರಕ್ಕೆ ಆಗ್ರಹ : ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಭತ್ತ ಹೆಚ್ಚಾಗುವ ಸೂಚನೆಗಳು ಕಾಣುತ್ತಿದೆ. ಭತ್ತಕ್ಕೆ ಸರ್ಕಾರ ಮುಂದಾಗಿ ಬೆಂಬಲ ಬೆಲೆ ಘೋಷಣೆ ಮಾಡಿ, ಭತ್ತ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಭತ್ತದ ಫಸಲು ಬಂದ ನಂತರ ರೈತರಿಂದ ಭತ್ತದ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸುವ ಬದಲು, ಸರ್ಕಾರ ಈಗಿನಿಂದಲೇ ಭತ್ತದ ಖರೀದಿ ಕೇಂದ್ರ ತೆರೆಯಬೇಕು ಎಂದು ಬೆಳಗೊಳದ ರೈತ ಸುನೀಲ್ ಆಗ್ರಹಿಸಿದ್ದಾರೆ.
ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಿಸಿ : ನೀರಾವರಿ ಪ್ರದೇಶಕ್ಕೆ ಸರಿಯಾದ ಸಮಯಕ್ಕೆ ನಾಲೆಗಳ ಮೂಲಕ ನೀರು ಹರಿಸಲಾಗಿದೆ. ಇದರಿಂದ ಮುಂಗಾರು ಬಿತ್ತನೆ ಕಾರ್ಯ ನಡೆದು ಭತ್ತದ ಪೈರು ಬೆಳವಣಿಗೆ ಸಮಯಕ್ಕೆ ಕಳೆ ಕಿತ್ತು ಗೊಬ್ಬರ ಹಾಕಿದ ನಂತರ ಸರಿ ಸಮಯಕ್ಕೆ ಮಳೆ ಆಶ್ರಯ ಚೆನ್ನಾಗಿ ಬಿದ್ದಿದೆ. ಇದರಿಂದ ಯಾವುದೇ ರೋಗಗಳು ಭತ್ತದ ಬೆಳೆಯಲ್ಲಿ ಕಾಣಿಸಿಕೊಂಡಿಲ್ಲ. ಇದರಿಂದ ಉತ್ತಮ ಬೆಳೆ ಬರುವ ಸಾಧ್ಯತೆ ಇದೆ. ಆದರೆ, ಭತ್ತದ ಪೈರು ಹೂಚೆಲ್ಲಿ, ಹಾಲುದುಂಬಿ ಕಟಾವಿನ ಅಂಚಿನವರಿಗೂ ಕುತ್ತಿಗೆ ರೋಗ ತಡೆಯಲು ರೈತರು ಔಷಧವನ್ನು ಸಿಂಪಡಿಸ ಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಅಧಿಕಾರಿ ನಿಶಾಂತ್ ಕೀಲಾರ ತಿಳಿಸಿದ್ದಾರೆ.
-ಗಂಜಾಂ ಮಂಜು