Advertisement

ಸಮೃದ್ಧ ಮಳೆ; ಸಂತೃಪ್ತ ಇಳೆ

11:54 AM Jul 31, 2019 | Suhan S |

ಬೆಳಗಾವಿ: ಜುಲೈ ಕೊನೆಯ ವಾರದಲ್ಲಿ ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿರುವ ಜಲಾಶಯಗಳ ಚಿತ್ರಣ ಬದಲಾಗಿದೆ. ಎರಡು ತಿಂಗಳ ಹಿಂದಷ್ಟೇ ಬಹುತೇಕ ಖಾಲಿಯಾಗಿ ಕುಡಿಯುವ ನೀರಿನ ಪೂರೈಕೆ ಆತಂಕ ಎದುರಿಸಿದ್ದ ಜಲಾಶಯಗಳು ಈಗ ಈ ಭೀತಿಯಿಂದ ಹೊರಬಂದಿವೆ. ಜೊತೆಗೆ ನೀರಾವರಿಯ ಚಿಂತೆಯನ್ನೂ ದೂರ ಮಾಡಿವೆ.

Advertisement

ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ ನದಿಗೆ ರಾಜಾ ಲಖಮನಗೌಡ (ಹಿಡಕಲ್) ಜಲಾಶಯ, ಮಲಪ್ರಭಾ ನದಿಗೆ ನವಿಲುತೀರ್ಥ (ಇಂದಿರಾಗಾಂಧಿ) ಅಣೆಕಟ್ಟು, ಕೃಷ್ಣಾ ನದಿಗೆ ಅಥಣಿ ಗಡಿ ಭಾಗದ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಗ್ರಾಮದ ಬಳಿ ಹಿಪ್ಪರಗಿ ಜಲಾಶಯ ಹಾಗೂ ಮಾರ್ಕಂಡೇಯ ನದಿಗೆ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಬಳಿ ಮಾರ್ಕಂಡೇಯ ಜಲಾಶಯಗಳಿವೆ. ಈ ಜಲಾಶಯಗಳಿಂದ ಲಕ್ಷಾಂತರ ಹೆಕ್ಟೇರ್‌ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರಕಿಸಲಾಗಿದೆ.

ಬೆಳಗಾವಿ ತಾಲೂಕು ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ವ್ಯಾಪಕ ಮಳೆಯಿಂದ ಮಾರ್ಕಂಡೇಯ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದರೆ ಬೆಳಗಾವಿಗೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯ ಸೋಮವಾರ ರಾತ್ರಿ ಭರ್ತಿಯಾಗಿ ಹೆಚ್ಚುವರಿ ನೀರು ಮಾರ್ಕಂಡೇಯ ನದಿಗೆ ಹರಿಯುತ್ತಿದ್ದು ಎರಡೂ ಜಲಾಶಯಗಳು ಮನಸ್ಸಿಗೆ ಮುದ ನೀಡುತ್ತಿವೆ.

ಮಾರ್ಕಂಡೇಯ ಜಲಾಶಯ: ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಬಳಿ ಮಾರ್ಕಂಡೇಯ ನದಿಗೆ 2006 ರಲ್ಲಿ ನಿರ್ಮಾಣ ಮಾಡಲಾಗಿರುವ ಮಾರ್ಕಂಡೇಯ ಜಲಾಶಯ ಒಟ್ಟು 3.696 ಟಿಎಂಸಿ ಸಾಮರ್ಥ್ಯ ಹೊಂದಿದೆ. ಈ ಜಲಾಶಯದಿಂದ ಹುಕ್ಕೇರಿ, ಗೋಕಾಕ, ಬೆಳಗಾವಿ ಹಾಗೂ ಸವದತ್ತಿ ತಾಲೂಕಿನ 19,105 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಜಲಾಶಯದ ಒಟ್ಟು 3,696 ಟಿಎಂಸಿ ನೀರಿನಲ್ಲಿ ಬೆಳಗಾವಿ, ಹುಕ್ಕೇರಿ, ಗೋಕಾಕ ಹಾಗೂ ಸವದತ್ತಿ ತಾಲೂಕಿನ 19105 ಹೆಕ್ಟೇರ್‌ ಪ್ರದೇಶಕ್ಕೆ 3.28 ಟಿಎಂಸಿ ನೀರು ಹಾಗೂ ಹುಕ್ಕೇರಿ ಮತ್ತು ಗೋಕಾಕ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 0.03 ಟಿಎಂಸಿ ನೀರನ್ನು ನಿಗದಿಪಡಿಸಲಾಗಿದೆ.

Advertisement

ಕಳೆದ 13 ವರ್ಷಗಳ ಅವಧಿಯಲ್ಲಿ ಒಮ್ಮೆ ಮಾತ್ರ (2015-16) ಜಲಾಶಯ ಭರ್ತಿಯಾಗಿಲ್ಲ. ಈ ವರ್ಷ ಬಹಳ ಬೇಗ ಜಲಾಶಯ ತುಂಬಿಕೊಂಡಿದ್ದು ಈಗ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಸತತ ಮಳೆಯಿಂದಾಗಿ ಜಲಾಶಯಕ್ಕೆ ಈಗ 1,820 ಕ್ಯೂಸೆಕ್‌ ನೀರು ಬರುತ್ತಿದೆ. ಹೀಗಾಗಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದ್ದು ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸೂಚನೆ ಸಹ ನೀಡಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದರು.

ರಕ್ಕಸಕೊಪ್ಪ ಜಲಾಶಯ: ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ರಕ್ಕಸಕೊಪ್ಪ ಜಲಾಶಯದ ನೀರನ್ನು ಕುಡಿಯಲು ಮೀಸಲಿಡಲಾಗಿದ್ದು, ಬೆಳಗಾವಿ ನಗರದ ಜನರಿಗೆ ಇದನ್ನು ಸರಬರಾಜು ಮಾಡಲಾಗುತ್ತದೆ. ಒಟ್ಟು 2,476 ಅಡಿ ಸಾಮರ್ಥ್ಯದ ಈ ಜಲಾಶಯ ಜು.29 ರಂದು ಸಂಪೂರ್ಣ ಭರ್ತಿಯಾಗಿದೆ.

ಎರಡು ತಿಂಗಳ ಹಿಂದೆ ಜಲಾಶಯ ಬಹುತೇಕ ಖಾಲಿಯಾಗಿದ್ದರಿಂದ ಆತಂಕ ಉಂಟಾಗಿತ್ತು. ಇದರಿಂದ ನಗರದ ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಪೂರೈಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಜುಲೈ ಕೊನೆಯ ವಾರದಲ್ಲಿ ಸತತವಾಗಿ ಬಿದ್ದ ಭಾರೀ ಮಳೆ ಎಲ್ಲ ಆತಂಕವನ್ನು ದೂರ ಮಾಡಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರನ್ನು ಹೊರಗೆ ನದಿಗೆ ಬಿಡಲಾಗುತ್ತಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಪ್ಪ ಹೇಳಿದರು.

45 ವರ್ಷಗಳ ಹಿಂದೆ ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ರಾಜಾ ಲಖಮನಗೌಡ (ಹಿಡಕಲ್) ಜಲಾಶಯ ನಿಧಾನವಾಗಿ ಭರ್ತಿಯಾಗುತ್ತಿದೆ. ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಒಂದೇ ದಿನ ಸುಮಾರು ಮೂರು ಆಡಿಗಳಷ್ಟು ನೀರು ಬಂದಿದೆ. ಒಟ್ಟು 2,175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,144 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು 20 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ.

ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಕಲ್ಪಿಸುವ ಮಲಪ್ರಭಾ ಜಲಾಶಯಕ್ಕೆ ಸಹ ಮೊದಲಿನ ಕಳೆ ಬಂದಿದೆ. ಮಲಪ್ರಭಾ ನದಿ ಉಗಮ ಸ್ಥಾನ ಖಾನಾಪುರ ತಾಲೂಕಿನ ಕಣಕುಂಬಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಜಲಾಶಯಕ್ಕೆ 10 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next