Advertisement
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆ ನಾಪತ್ತೆಯಾಗಿತ್ತು. ಇದರಿಂದ ಮತ್ತೆ ಸೆಕೆಯ ವಾತಾವರಣ ಇತ್ತು. ಗುರುವಾರ ಬೆಳಗ್ಗೆಯಿಂದಲೇ ಉತ್ತಮ ಮಳೆ ಸುರಿದಿದೆ. ಇದರಿಂದ ಉಷ್ಣಾಂಶದಲ್ಲಿಯೂ ಬದಲಾವಣೆ ಆಗಿದೆ.
Related Articles
Advertisement
ಸುಳ್ಯ ತಾಲೂಕಿನ ಅಲ್ಲಲ್ಲಿ ಮಧ್ಯಾಹ್ನದ ಬಳಿಕ ಧಾರಾಕಾರ ಮಳೆಯಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಬಿಸಿಲಿನ ವಾತಾವರಣ ಇದ್ದು, ಬಳಿಕ ಮೋಡ ಕವಿದು ನಿರಂತರ ಮಳೆ ಸುರಿಯಿತು.
ಸುಳ್ಯ ಪೇಟೆ, ಜಾಲ್ಸೂರು, ಐವರ್ನಾಡು, ಕಲ್ಮಡ್ಕ, ಸೋಣಂಗೇರಿ, ಬೆಳ್ಳಾರೆ, ಪಂಜ, ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಉತ್ತಮ ಮಳೆಯಾಗಿದೆ.
ಉಡುಪಿ: ಉತ್ತಮ ಮಳೆ :
ಉಡುಪಿ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ, ಗುರುವಾರ ಹಲವೆಡೆ ಉತ್ತಮ ಮಳೆಯಾಗಿದೆ. ಉಡುಪಿ, ಕುಂದಾಪುರ, ಕಾರ್ಕಳ, ಹೆಬ್ರಿ ಭಾಗದಲ್ಲಿ ಕೆಲವೆಡೆ ಮಳೆ ಸುರಿದಿದ್ದು, ಉಡುಪಿ, ಮಲ್ಪೆ, ಪರ್ಕಳ, ಮಣಿಪಾಲ ಭಾಗದಲ್ಲಿ ಕೆಲಕಾಲ ಧಾರಾಕಾರ ಮಳೆಯಾಗಿದೆ.
ಇಳಿಕೆಯಾದ ತಾಪಮಾನ :
ಕಳೆದ ಎರಡು-ಮೂರು ದಿನಗಳಲ್ಲಿ ಸೆಕೆಯ ಅನುಭವ ಹೆಚ್ಚಿತ್ತು. ಗುರುವಾರ ಮಳೆ ಆರಂಭವಾದ ಬಳಿಕ ತಾಪಮಾನದಲ್ಲಿ ಕೊಂಚ ಇಳಿಕೆ ಕಂಡು ಬಂತು. ಮಂಗಳೂರಿನಲ್ಲಿ 31ರಿಂದ 32 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದ ಗರಿಷ್ಠ ತಾಪಮಾನ ಗುರುವಾರ 30 ಡಿಗ್ರಿ ಸೆಲ್ಸಿಯಸ್‌ನಲ್ಲಿತ್ತು. ಕನಿಷ್ಠ ತಾಪಮಾನ 24 ಡಿ.ಸೆ. ದಾಖಲಾಗಿತ್ತು. ಮುಂದಿನ ಒಂದು ವಾರದ ಅವಧಿಯಲ್ಲಿ ಗರಿಷ್ಠ ತಾಪಮಾನ 30 ಡಿ.ಸೆ. ಒಳಗೆ ಇರುವ ಸಾಧ್ಯತೆ ಇದ್ದರೆ, ಕನಿಷ್ಠ ತಾಪಮಾನ 23 ಡಿ.ಸೆ. ಒಳಗೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕೃಷಿ ಕಾರ್ಯಕ್ಕೆ ಜೀವ :
ಕೆಲವು ದಿನ ಮಳೆ ಇಲ್ಲದೆ ಜೀವಕಳೆ ಕಳೆದುಕೊಂಡಿದ್ದ ಕೃಷಿ ಕಾರ್ಯ ಮತ್ತೆ ಚುರುಕಾಗಿದೆ. ಬುಧವಾರ ರಾತ್ರಿಯೇ ಹೆಚ್ಚಿನೆಡೆ ಮಳೆ ಸುರಿದಿದ್ದು, ಗುರುವಾರ ಇನ್ನೂ ಉತ್ತಮವಾಗಿ ಮಳೆ ಸುರಿದಿದ್ದರಿಂದ ಒಣಗಿದ್ದ ಗದ್ದೆಗಳಲ್ಲಿ ನೀರು ನಿಂತಿತು.
ಟ್ರ್ಯಾಕ್ಟರ್, ಟಿಲ್ಲರ್ ಬಂದು ನಿಂತಿದ್ದರೂ ಮಳೆ ಬಾರದೆ ಉಳುಮೆ ಮಾಡಲು ಅಸಾಧ್ಯವಾಗಿದ್ದ ರೈತರು ಗುರುವಾರ ಉಳುಮೆ ಕಾರ್ಯದಲ್ಲಿ ತೊಡಗಿಕೊಂಡದ್ದು ಕಾಣಿಸಿತು.
ಎಲ್ಲೋ, ಆರೆಂಜ್ ಅಲರ್ಟ್ :
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂ. 17ಮತ್ತು 18ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಗಾಳಿ, ಗುಡುಗು ಸಿಡಿಲಿನಿಂದ ಕೂಡಿದ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ.
ಜೂನ್ 19 ಮತ್ತು 20ರಂದು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದಿರುವ ಹವಾಮಾನ ಇಲಾಖೆ, ಆರೆಂಜ್ ಅಲರ್ಟ್ ಘೋಷಿಸಿದೆ.
ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ :
ಪ್ರಸ್ತುತ ಸಮುದ್ರ ಪ್ರಕ್ಷುಬ್ಧವಾಗಿದೆ. ಜತೆಗೆ ಆಗಾಗ ವೇಗವಾಗಿ ಗಾಳಿ ಕೂಡ ಬೀಸುತ್ತಿದೆ. ಆದುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ಕರಾವಳಿಯಾದ್ಯಂತ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕೆಲವೊಮ್ಮೆ ಗಾಳಿಯ ವೇಗ ಗಂಟೆಗೆ 60.ಕಿ.ಮೀ. ವರೆಗೆ ತಲುಪುವ ಸಾಧ್ಯತೆ ಇದೆ. ಈ ವೇಳೆ ಮಂಗಳೂರಿನಿಂದ ಕಾರವಾರದವರೆಗಿನ ಸಮುದ್ರದಲ್ಲಿ ಎರಡರಿಂದ 2.6 ಮೀಟರ್ ಎತ್ತರದವರೆಗೆ ಅಲೆಗಳು ಏಳುವ ಸಂಭವ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.