Advertisement

ಕರಾವಳಿಯ ವಿವಿಧೆಡೆ ಉತ್ತಮ ಮಳೆ; ಅಪಾರ ಹಾನಿ , ಧರೆಗುರುಳಿದ ಮರ,ವಿದ್ಯುತ್‌ ಕಂಬಗಳು

02:04 AM May 01, 2020 | Sriram |

ಮಂಗಳೂರು/ಉಡುಪಿ: ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡದ ಪರಿಣಾಮ ಕರಾವಳಿಯ ಕೆಲವು ಭಾಗಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಕೊಯ್ಯೂರು, ಗೇರುಕಟ್ಟೆ, ಕರಾಯ, ಕಲ್ಲೇರಿ, ಮಿತ್ತಬಾಗಿಲು, ದಿಡುಪೆ, ಉಪ್ಪಿನಂಗಡಿ ಪರಿಸರದಲ್ಲಿ ಸಂಜೆ ವೇಳೆ ಒಂದು ತಾಸಿಗೂ ಅಧಿಕ ಉತ್ತಮ ಮಳೆಯಾಗಿದೆ. ಚಾರ್ಮಾಡಿ, ನೆರಿಯ, ಮುಂಡಾಜೆ, ಕನ್ಯಾಡಿ ಮುಂತಾದ ಕಡೆಗಳಲ್ಲಿ ಗುಡುಗು, ಗಾಳಿ ಜೋರಾಗಿತ್ತು. ಬಂಟ್ವಾಳ, ಸುಳ್ಯದ ವಿವಿಧೆಡೆ ಹನಿ ಮಳೆಯಾಗಿದೆ.

ಮಂಗಳೂರು ನಗರದಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣ ಇತ್ತು. ಕಾರ್ಕಳ ನಗರ, ಹಿರ್ಗಾನ, ರೆಂಜಾಳ, ಕುಕ್ಕುಂದೂರು ಪರಿಸರದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.

2 ದಿನ ಯೆಲ್ಲೂ ಅಲರ್ಟ್‌
ಕರಾವಳಿ ಭಾಗದಲ್ಲಿ ಮೇ 2 ಮತ್ತು 3ರಂದು ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ ಸುಮಾರು 64.5 ಮಿ.ಮೀ.ನಿಂದ 115.5 ಮಿ.ಮೀ. ವರೆಗೆ ಮಳೆಯಾಗುವ ಸಾಧ್ಯತೆ ಇದೆ.

ಸಿಡಿಲು ಬಡಿದು ಹಾನಿ
ವಿಟ್ಲ: ಕುದ್ದುಪದವು ನಿವಾಸಿ ಚನ್ನಪ್ಪ ನಾಯ್ಕ ಅವರ ಮನೆಯ ಸಮೀಪದ ತೆಂಗಿನ ಮರಕ್ಕೆ ಮತ್ತು ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಮನೆಯ ವಿದ್ಯುತ್‌ ಸಂಪರ್ಕ ವ್ಯವಸ್ಥೆ , ಉಪಕರಣಗಳು ಸುಟ್ಟುಹೋಗಿವೆ.

Advertisement

ಬೆಳ್ತಂಗಡಿ: ಅಪಾರ ಹಾನಿ
ಬೆಳ್ತಂಗಡಿ: ತಾಲೂಕಿನ ಮೇಲಂತಬೆಟ್ಟು ಗ್ರಾಮದಲ್ಲಿ ಜಿ.ಪಂ. ಮಾಜಿ ಸದಸ್ಯ ಶೈಲೇಶ್‌ ಕುರ್ತೋಡಿ ಅವರ ಹಟ್ಟಿಗೆ ವಿದ್ಯುತ್‌ ಕಂಬ ಬಿದ್ದು ಹಾನಿಯಾಗಿದೆ. ಪರಿಸರದ ತೋಟಗಳಲ್ಲಿ 80ಕ್ಕೂ ಅಧಿಕ ಅಡಿಕೆ ಗಿಡಗಳು ಗಾಳಿಗೆ ಬುಡಸಮೇತ ಧರೆಗುರುಳಿವೆ.

ಉಜಿರೆ ಪೇಟೆ ಸಮೀಪ ಪಕ್ಕದ ಕಲ್ಲೆಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಗಣೇಶ್‌ ನಾಯ್ಕ… ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್‌ ಸಂಪರ್ಕ ಸುಟ್ಟುಹೋಗಿದೆ. ನಡ ಗ್ರಾಮದ ನಡ ಬೈಲು ಶ್ರೀಧರ ಆಚಾರ್ಯ ಅವರ ಮನೆ ಮೇಲೆ ಮರ ಬಿದ್ದಿದೆ. ಮೇಲಂತಬೆಟ್ಟು ಇಳಂತಿಲ, ಕಣಿಯೂರು ಪರಿಸರ ಸೇರಿದಂತೆ ಒಟ್ಟು 15ಕ್ಕೂ ಅಧಿಕ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಉಪ್ಪಿನಂಗಡಿಯಲ್ಲೂ ಹಾನಿ
ಉಪ್ಪಿನಂಗಡಿ: ಲಕ್ಷ್ಮೀವೆಂಕಟರಮಣ ದೇವಾಲಯದ ಕಲ್ಯಾಣ ಮಂಟಪ, ಗಣಪತಿ ಮಠ, ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ನೌಕರರ ವಸತಿ ಗೃಹ, ಪಾಕಶಾಲೆ, ಜಗದೀಶ್‌ ಶೆಟ್ಟಿ ಅವರ ಕಟ್ಟಡ ಸಹಿತ ಪರಿಸರದ ಹಲವು ಕಟ್ಟಡಗಳು ಹಾನಿಗೀಡಾಗಿವೆ.

ನೆಕ್ಕಿಲಾಡಿಯ ಆದರ್ಶ ನಗರದ ಆಸ್ಯಮ್ಮ ಅವರ ಮನೆ ಸಂಪೂರ್ಣ ಹಾನಿಗಿಡಾಗಿದೆ. ಇದೇ ಪರಿಸರದ 3 ಮನೆಗಳು ಭಾಗಶಃ ಹಾನಿಗೀಡಾಗಿವೆ. ಇಳಂತಿಲದಲ್ಲಿ ಮರಗಳು ಉರುಳಿ ಬಿದ್ದಿದ್ದು, 6 ವಿದ್ಯುತ್‌ ಕಂಬಗಳು ತುಂಡಾಗಿವೆ. ಒಂದು ವಿದ್ಯುತ್‌ ಪರಿವರ್ತಕ ಸಂಪೂರ್ಣ ಹಾನಿಗೀಡಾಗಿದೆ. ಇದೇ ಗ್ರಾಮದ ಬನ್ನೆಂಗಳದಲ್ಲಿ ವಿಜಯ ರಾಮಕೃಷ್ಣ ಅವರ ಮನೆಗೆ ಸಿಡಿಲು ಬಡಿದು ಮನೆ ಹಾನಿಗೀಡಾಗಿದೆ. ನೂಜದಲ್ಲಿ ರೂಪಾ ಅವರ ಮನೆಗೂ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೋಡಿಂಬಾಡಿ: ಹೊಸ ಮನೆಗೆ ಹಾನಿ
ಪುತ್ತೂರು: ಭಾರೀ ಗಾಳಿ-ಮಳೆಯಿಂದ ತಾಲೂಕಿನ ಕೋಡಿಂಬಾಡಿ ಗ್ರಾಮದ ಮೊನಡ್ಕ ಸುರೇಶ್‌ ಶೆಟ್ಟಿ ಅವರ ಮನೆ ಸಿಮೆಂಟ್‌ ಶೀಟಿನ ಛಾವಣಿ ಹಾನಿಗೀಡಾಗಿದೆ. ಕೆಲ ತಿಂಗಳ ಹಿಂದೆಯಷ್ಟೆ ಮನೆ ನಿರ್ಮಿಸಲಾಗಿತ್ತು.

ಸುರೇಶ್‌ ಶೆಟ್ಟಿ, ಪತ್ನಿ ಆಶಾ ಕಾರ್ಯಕರ್ತೆ ಪವಿತ್ರಾ, ಒಂದು ವರ್ಷ ಹಾಗೂ ಐದು ವರ್ಷದ ಮಕ್ಕಳು ಈ ಸಂದರ್ಭ ಮನೆ ಯಲ್ಲಿದ್ದರೂ ಅಪಾಯದ ಸೂಚನೆ ಸಿಕ್ಕಿದ ಕೂಡಲೇ ಹೊರಗೆ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. 1 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next