Advertisement

ಖಾಸಗಿ ವೈದ್ಯರ ಮುಷ್ಕರಕ್ಕೆ ಉತ್ತಮ ಪ್ರತಿಭಟನೆ

11:43 AM Nov 04, 2017 | |

ಧಾರವಾಡ: ಕರ್ನಾಟಕ ರಾಜ್ಯ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘವು ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಕರೆ ನೀಡಿದ್ದ ಬಂದ್‌ಗೆ ನಗರದಲ್ಲಿ ಶುಕ್ರವಾರ ಉತ್ತಮ ಸ್ಪಂದನೆ ದೊರಕಿತು. 

Advertisement

ಬಂದ್‌ ಹಿನ್ನೆಲೆಯಲ್ಲಿ ತಮ್ಮ ಆಸ್ಪತ್ರೆ ಮತ್ತು ಕ್ಲಿನಿಕ್‌ ಗಳ ಸೇವೆ ಸ್ಥಗಿತಗೊಳಿಸಿದ ವೈದ್ಯರು, ಸಿಬ್ಬಂದಿ ಭಾರತೀಯ ವೈದ್ಯಕೀಯ ಸಂಘ ಧಾರವಾಡ ಘಟಕದ ನೇತೃತ್ವದಲ್ಲಿ ಘಟಕದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ಕೈಗೊಂಡರು. 

ವೈದ್ಯ ವೃತ್ತಿ ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಈ ಕಾಯ್ದೆ ಮರಣ ಶಾಸನವಾಗಲಿದೆ. ಹೀಗಾಗಿ ಕೂಡಲೇ ಸರಕಾರ ಈ ನೂತನ ಕಾಯ್ದೆಯನ್ನು ಜಾರಿಗೆ ತರುವ ಯೋಚನೆ ಕೈಬಿಡಬೇಕು ಎಂದು ವೈದ್ಯರು ಆಗ್ರಹಿಸಿದರು. ವೈದ್ಯಕೀಯ ವಿಧಾನದಲ್ಲಿ ಚಿಕಿತ್ಸೆ ನೀಡುವುದು ಪ್ರಾಯೋಗಿಕ ಆಗಿದ್ದು, ಇದರಲ್ಲಿ ಸ್ವಲ್ಪ ತಪ್ಪು ಸಂಭವಿಸುವುದು ಸತ್ಯ.

ಹಾಗಂತ ಯಾವ ವೈದ್ಯರು ರೋಗಿಯ ಪ್ರಾಣದ ಜೊತೆಗೆ ಆಟವಾಡುವುದಿಲ್ಲ. ಒಂದು ವೇಳೆ ವೈದ್ಯರು ತಿಳಿದೂ ತಪ್ಪು ಮಾಡಿದರೆ ಶಿಕ್ಷೆ ವಿಧಿ ಸಲಿ. ಅದನ್ನು ಬಿಟ್ಟು ಈ ರೀತಿ ಕಾಯ್ದೆ ಜಾರಿಗೆ ತಂದು ಎಲ್ಲ ವೈದ್ಯರನ್ನು ಅನುಮಾನ ದೃಷ್ಟಿಯಿಂದ ನೋಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. 

ಈ ಕಾಯ್ದೆಯಿಂದಾಗುವ ಅನಾಹುತಗಳನ್ನು ಭಾರತೀಯ ವೈದ್ಯಕೀಯ ಸಂಘವು ಅನೇಕ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶಕುಮಾರ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ. ಇಷ್ಟಾದರೂ ಈ ಕಾಯ್ದೆಯನ್ನು ಜಾರಿಗೆ ತರಲು ಸರಕಾರ ಪ್ರಯತ್ನಿಸುತ್ತಿರುವುದು ದುರ್ದೈವ ಸಂಗತಿ.

Advertisement

ನ್ಯಾ| ವಿಕ್ರಮ್‌ಜಿತ್‌ ಸೇನ್‌ ನೇತೃತ್ವದ ಸಮಿುತಿಯೂ ಈ ಕಾಯ್ದೆಯನ್ನು ವಿರೋಧಿಸಿದೆ ಎಂದು ದೂರಿದರು. ವೈದ್ಯಕೀಯ ಸಂಸ್ಥೆಗಳು ಇಷ್ಟೇ ಪ್ರಮಾಣದ ಚಿಕಿತ್ಸಾ ವೆಚ್ಚ ವಿ ಧಿಸಬೇಕು ಎಂಬುದಾಗಿ ಹೇಳುವುದು ಅತಿರೇಕದ ಸಂಗತಿ.

ಸರಕಾರ ವೈದ್ಯಕೀಯ ಸಂಸ್ಥೆಗಳು ಹಾಗೂ ವೈದ್ಯರ ದರ ವಿಚಾರದಲ್ಲಿ ಭಾಗವಹಿಸಿದರೆ ವೈದ್ಯರ ಮಕ್ಕಳಿಗೆ ಉಚಿತ ವೈದ್ಯಕೀಯ ಪ್ರವೇಶ ನೀಡಬೇಕು. ಖಾಸಗಿ ವೈದ್ಯರು ಖರೀದಿಸುವ ಯಂತ್ರಗಳ ದರವನ್ನು ಶೇ. 50ರಷ್ಟು ಕಡಿಮೆ ಮಾಡಬೇಕು. ಆದಾಯ ತೆರಿಗೆಯಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿದರು. 

ಇದಾದ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಇದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರನ್ನೂ ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಡಾ| ಉದಯ ಸಾಂಬ್ರಾಣಿ, ಡಾ| ಸಂದಿಪ ಪ್ರಭು, ಡಾ| ಎಸ್‌.ಎಫ್‌. ಕುಂಬಾರ ಸೇರಿದಂತೆ ನೂರಾರು ವೈದ್ಯರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next