ಫಸಲ್ ವಿಮಾ ಯೋಜನೆಗೆ 900 ಕೋ.ರೂ., ಕೃಷಿ ಸಂಚಯಿ ಯೋಜನೆಗೆ 831 ಕೋ.ರೂ. ಗುರುತಿಸಿರುವುದು ಗಮನಾರ್ಹ ವಿಚಾರ. ಕೃಷಿಯ ಫಸಲು ನಷ್ಟವಾದರೆ ವಿಮಾ ಯೋಜನೆ ಮೂಲಕ ಪರಿಹಾರ ಒದಗಿಸುವುದು ಯೋಜನೆಯ ಗುರಿ. ಈ ಯೋಜನೆಯಡಿ ಶೇ. 2-3 ಶೇರು ಮಾತ್ರ ರೈತರಿಗೆ ಪಾವತಿಸಲಿಕ್ಕಿದೆ, ಉಳಿದ ಅಂಶವನ್ನು ಸರಕಾರ ಭರಿಸಲಿದೆ.
ಕಿಸಾನ್ ಸಮ್ಮಾನ್ ಯೋಜನೆ ಮುಂದುವರಿಯಲಿದ್ದು ರೈತರಿಗೆ ವಾರ್ಷಿಕ 4,000 ರೂ. ಸಹಾಯಧನ ಜಮೆ ಆಗಲಿದೆ. ಕೇಂದ್ರ ಸರಕಾರದ 6,000 ರೂ. ವಿತರಣೆಯೊಂದಿಗೆ ಇದು ಹೆಚ್ಚುವರಿ ಸಹಾಯ. ಇದು ಸಂಕಷ್ಟದಲ್ಲಿರುವ ಕೃಷಿಕರಿಗೆ ಉತ್ತೇಜನವಾಗಲಿದೆ.
300 ಕೋ.ರೂ.ಗಳನ್ನು ಸಾವಯವ ಕೃಷಿಗೆ ಮೀಸಲಿರಿಸಲಾಗಿದೆ. ರಾಷ್ಟ್ರೀಯ ಇ ಮಾರುಕಟ್ಟೆ ಮೂಲಕ ಸಾವಯವ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಇದೊಂದು ಹೊಸ ಉಪಕ್ರಮ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಸಾವಯವ ಇಂಗಾಲ ಹೆಚ್ಚಿಸುವ ಯೋಜನೆಗೆ 75 ಕೋ.ರೂ. ಇರಿಸಿರುವುದು ಸಾವಯವ ಕೃಷಿ ಕ್ಷೇತ್ರಕ್ಕೆ ಆಶಾವಾದ ಹುಟ್ಟಿಸಲಿದೆ. ಕೃಷಿ ರಫ್ತು ವಲಯ ಸ್ಥಾಪನೆ (ಔಷಧೀಯ ಗಿಡಗಳು)ಗೆ ಪ್ರೋತ್ಸಾಹ ನೀಡಲಾಗುವುದು.
ಇದರಿಂದ ಭಾರತದ ಪುರಾತನ ಆಯುರ್ವೇದ ಮತ್ತು ಗಿಡಮೂಲಿಕೆ ಜ್ಞಾನಕ್ಕೆ ವೇಗವರ್ಧನೆಯಾಗಬಹುದು.
ಸಾಕಷ್ಟು ಉತ್ತಮ ಯೋಜನೆಗಳು ಕಂಡುಬಂದರೂ ಕೃಷಿ ಕ್ಷೇತ್ರದ ಗಾತ್ರವನ್ನು ನೋಡಿದರೆ ಅನುದಾನ ಏನೇನೂ ಸಾಲದು ಎಂದೆನಿಸುತ್ತದೆ. ಬಹುತೇಕ ಯೋಜನೆಗಳು ಬಜೆಟ್ ಕಡತದಲ್ಲಿಯೇ ಉಳಿಯುತ್ತವೆ, ಅನುಷ್ಠಾನ ಆಗುವುದು ಕಡಿಮೆ. ಆದ್ದರಿಂದ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ.
– ರಾಮಕೃಷ್ಣ ಶರ್ಮ ಬಂಟಕಲ್ಲು , ಅಧ್ಯಕ್ಷರು, ಜಿಲ್ಲಾ ಕೃಷಿಕ ಸಂಘ, ಉಡುಪಿ.