ಹೆಬ್ರಿ: ಯಾವುದೇ ರಾಸಾಯನಿಕ ಬಳಸದೇ ಶೂನ್ಯ ಬಂಡವಾಳದೊಂದಿಗೆ ಸಾವಯವ ಕೃಷಿಯ ಮೂಲಕ ಉತ್ತಮ ಭತ್ತ ಬೆಳೆ ಬೆಳೆಯಲು ಸಾಧ್ಯ.ಅದಕ್ಕೆ ಉತ್ತಮ ಉದಾಹರಣೆ ಪ್ರಗತಿಪರ ಕೃಷಿಕ ಸಾಧು ಶೆಟ್ಟಿ ಅವರು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಎಸ್.ವಿ. ಪಾಟೀಲ್ ಹೇಳಿದರು.
ಅವರು ಅ.23ರಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ , ಬ್ರಹ್ಮಾವರ ವಲಯ ಕೃಷಿ ಮತ್ತು ತೋಟ ಗಾರಿಕೆ ಸಂಶೋಧನಾ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಚಾರ ಸಾಧು ಶೆಟ್ಟಿ
ಅವರ ಮನೆಯ ವಠಾರದಲ್ಲಿ ಅ.23ರಂದು ನಡೆದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯ ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಕೃಷಿಯಲ್ಲಿ ರೈತರು ವಿಭಿನ್ನ ಸಂಶೋಧನೆಯನ್ನು ಅಳವಡಿಸಿಕೊಂಡು ಕೃಷಿಕರೇ ವಿಜ್ಞಾನಿಗಳಾಗಿ ದ್ದಾರೆ. ಪ್ರಾಯೋಗಿಕವಾಗಿ ಅಳವಡಿಸಿ ಉತ್ತಮ ಫಲಿತಾಂಶ ಕೊಟ್ಟಾಗ ಇತರರಿಗೆ ಮಾದರಿಯಾಗುತ್ತಾರೆ ಎಂದರು.
3,200 ರೈತರಿಂದ ಅಳವಡಿಕೆ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯಡಿಯಲ್ಲಿ 3,200 ರೈತರು ಸಾವಯವ ಗೊಬ್ಬರ ಬಳಸಿ ಭತ್ತದ ಕೃಷಿ ಹಾಗೂ ಇತರ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಉತ್ತಮ ಫಲಿತಾಂಶ ಬಂದಿದೆ. 10 ಕೃಷಿ ವಲಯ 20 ಸಾವಿರ ರೈತರು ಸೇರಿದಂತೆ ಕರ್ನಾಟಕದಲ್ಲಿ 35 ಸಾವಿರ ರೈತರು ಶೂನ್ಯ ಬಂಡವಾಳ ಸಾವಯುವ ಕೃಷಿ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಬ್ರಹ್ಮಾವರದ ಹಿರಿಯ ಕೃಷಿ ವಿಜ್ಞಾನಿ ಸುಧೀರ್ ಕಾಮತ್ ಹೇಳಿದರು.
ಚಾರ ಗ್ರಾ.ಪಂ. ಉಪಾಧ್ಯಕ್ಷೆ ರೇಷ್ಮಾ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ವೇದಿಕೆಯ ಸಂಸ್ಥಾಪಕ ರವೀಂದ್ರನಾಥ ಶೆಟ್ಟಿ, ಅಧ್ಯಕ್ಷೆ ಸುಮತಿ ಚಾರ, ಡಾ| ಬಸಮ್ಮ ಮೊದಲಾದವರು ಉಪಸ್ಥಿತರಿದ್ದರು. ಯುವ ಕೃಷಿಕ ರಾಜೇಶ್ ಸ್ವಾಗತಿಸಿ, ಗಣೇಶ್ ಸೇಡಿಮನೆ ಕಾರ್ಯಕ್ರಮ ನಿರೂಪಿಸಿ, ಚಾರ ಮಿಥುನ್ ಶೆಟ್ಟಿ ವಂದಿಸಿದರು. ಬಳಿಕ ಸಾವಯವ ಭತ್ತದ ಕೃಷಿ ಪರಿಸರ ಭೇಟಿ ಮಾಹಿತಿ ಹಾಗೂ ಸಾವಯವ ತರಕಾರಿ ಪ್ರದರ್ಶನ ಕಾರ್ಯಕ್ರಮ ನಡೆಯಿತು.