Advertisement

ನ್ಯಾನೋದಲ್ಲಿವೆ ಉತ್ತಮ ಸಂದೇಶ ನೀಡುವ ಕತೆಗಳು

06:08 PM Nov 18, 2021 | Team Udayavani |

ಬೆಳಗಾವಿ: ಚಿಕ್ಕದಾದರೂ ಚೊಕ್ಕದಾದ ಅರ್ಥ ನೀಡಬಲ್ಲ, ಉತ್ತಮ ನೀತಿ ಸಂದೇಶ ನೀಡಬಲ್ಲ ಎಲ್ಲ ಆಯಾಮಗಳನ್ನು ನ್ಯಾನೋ ಕತೆಗಳು ಹೊಂದಿವೆ. ಆಧುನಿಕ ಒತ್ತಡದ ವೇಗದಲ್ಲಿ ನ್ಯಾನೊಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದು ಹಿರಿಯ ಸಾಹಿತಿಗಳು ಹಾಗೂ ಕಾವ್ಯ ಕೂಟ ಬಳಗದ ಸಂಸ್ಥಾಪಕರಾದ ಈಶ್ವರ ಮಮದಾಪೂರ ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ಕಾವ್ಯ ಕೂಟ ಕನ್ನಡ ಬಳಗದ ನ್ಯಾನೋ ಕಥಾ ಸಂಕಲನ ಕೃತಿಯ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿಯ ಕಾವ್ಯಕೂಟ ಬಳಗದ ಸದಸ್ಯರು ಅತ್ಯಂತ ಕ್ರಿಯಾಶೀಲರಾಗಿದ್ದು ಆಶಾ ಯಮಕನ ಮರ್ಡಿ ನೇತೃತ್ವದಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವರ್ಷಕ್ಕೊಂದು ಅಥವಾ ಎರಡು ಕೃತಿಗಳನ್ನು ಈ ನಾಡಿಗೆ ನೀಡುವಂತಾಗಲಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾವ್ಯ ಕೂಟ ಬಳಗದ ಆಶಾ ಎಸ್‌ ಯಮಕನಮರಡಿ ಅವರು, ಕಾವ್ಯ ಕೂಟ ಬಳಗವು ನಿಜ ಸಾಹಿತ್ಯದ ಪ್ರಕಾರಗಳ ಅಧ್ಯಯನ ಹಾಗೂ ಸಾಹಿತ್ಯಾಸಕ್ತ ಸಮಾನ ಮನಸ್ಕರ ಬಳಗವಾಗಿದೆ. ಕನ್ನಡ ಉಳಿಸಿ ಬೆಳೆಸುವಲ್ಲಿ ನಮ್ಮ ಈ ಬಳಗ ಅಳಿಲು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕೃತಿ ಬಿಡುಗಡೆ ಮಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶಾಂತಾದೇವಿ ಹುಲೆಪ್ಪನವರಮಠ ಮಾತನಾಡಿ, ಕಾವ್ಯ ಕೂಟ ಬಳಗವು ಕಲಿತು ಕಲಿಸುವ ವೇದಿಕೆ. ಬರಹದ ಪ್ರಕಾರಗಳೊಂದಿಗೆ ಮಾನವೀಯ ಮೌಲ್ಯಗಳು ಇಲ್ಲಿ ವಿಜೃಂಭಿಸುವ ವೇದಿಕೆಯಾಗಿದೆ ಎಂದರು.

ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ ಡಾ. ಗುರುದೇವಿ ಹುಲ್ಲೆಪ್ಪನವರಮಠ ಮಾತನಾಡಿ, ನನ್ನನ್ನು ನೋಡಬೇಡ ನಾನು ಬರೆದದ್ದು ನೋಡು ಎನ್ನಬೇಕು. ಮನುಷ್ಯ ಅನುಕರಣಶೀಲ. ಸಾಹಿತ್ಯವನ್ನು ಜನ ಅನುಸರಿಸುವುದರಿಂದ ಮಾರ್ಗಶೀಲರಾಗಿರಬೇಕೆಂದು ಹೇಳಿದರು.

Advertisement

ಕೃತಿ ಪರಿಚಯ ಮಾಡಿದ ಹಿರಿಯ ಸಾಹಿತಿ ಡಾ. ಪಿ.ಜಿ .ಕೆಂಪಣ್ಣವರ ಕಾಲಕ್ಕೆ ತಕ್ಕಂತೆ ಸಾಹಿತ್ಯದ ಅಭಿರುಚಿಗಳು ಬದಲಾಗುತ್ತವೆ. ತಾವು ಬದುಕುವುದರೊಂದಿಗೆ ಇತರರು ಬದುಕಬೇಕೆನ್ನುವ ಸಂದೇಶವನ್ನು ನೀಡುವ ಚಿಕ್ಕ ಚೊಕ್ಕ ಕಥೆಗಳು ಈ ಸಂಕಲನದಲ್ಲಿ ದಾಖಲಾಗಿವೆ ಎಂದು ಹೇಳಿದರು. ಕಲಬುರ್ಗಿಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಮಲ್ಲಿನಾಥ ತಳವಾರ ಮಾತನಾಡಿ, ಮಾನವ ಎಲ್ಲದಕ್ಕೂ ಕಾಲದ ಮೇಲೆ ಗೂಬೆ ಕೂರಿಸುವ ಪ್ರವೃತ್ತಿಯನ್ನು ಹೊಂದಿದ್ದು, ಅದನ್ನು ಸಾಹಿತ್ಯಿಕವಾಗಿಯೂ ಬಳಸುತ್ತಿರುವುದು ದುರಂತ. ಆಸಕ್ತಿಯಿಂದ ಸಾಹಿತ್ಯದ ರೂಪಗಳ ಬಗ್ಗೆ ಗಮನ ಕೊಡದೆ, ಅವಕಾಶವಾದಿಯಾಗಿ ಸಾಗುತ್ತಿದ್ದಾನೆ. ಈ ಕಾರಣಕ್ಕಾಗಿಯೇ ಬದುಕು-ಬರಹ ಒಂದೇ ಆಗದೆ ದೂರ ದೂರವೇ ಉಳಿಯುತ್ತಿವೆ ಎಂದು ವಿಷಾದಿಸಿದರು.

ಸಮಾರಂಭದಲ್ಲಿ ಸಾಹಿತಿಗಳಾದ ಲೀಲಾ ಕಲಕೋಟಿ, ಹಮೀದಾ ಬೇಗಂ ದೇಸಾಯಿ, ಪ್ರೇಮಾ ಅಂಗಡಿ, ವಾಸಂತಿ ಮೇಳೆದ, ಶಮಾ ಜಮಾದಾರ, ರೂಪಾ ಶಿವಪ್ಪ ಕೌತಗಾರ, ಸುನೀತಾ ಪಾಟೀಲ, ಮಲ್ಲಿಕಾರ್ಜುನ ಕೋಳಿ ಉಪಸ್ಥಿತರಿದ್ದರು. ಲಲಿತಾ ಕ್ಯಾಸನ್ನವರ ಸ್ವಾಗತಿಸಿದರು. ಮಂಜುಶ್ರೀ ಹಾವಣ್ಣವರ ಪರಿಚಯ ಮಾಡಿದರು. ನಿರ್ಮಲಾ ಪಾಟೀಲ ನಿರೂಪಿಸಿ, ಪ್ರಭಾ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next