Advertisement

ಉತ್ತಮ ಮುಂಗಾರು ಮಳೆ : ನಾಟಿ ಉತ್ಸಾಹದಲ್ಲಿ ಕೃಷಿಕರು

06:00 AM Jun 17, 2018 | |

ಕಾಸರಗೋಡು: ಪ್ರಸ್ತುತ ವರ್ಷ ನಿರೀಕ್ಷೆಯಂತೆ ಮುಂಗಾರು ಮಳೆ ಬಿರುಸುಗೊಂಡಿದ್ದು ಕೃಷಿಕರು ಬಹಳಷ್ಟು ಖುಷಿಯಲ್ಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಭತ್ತ ನಾಟಿ ಆರಂಭಿಸುವ ದಿಶೆಯಲ್ಲಿ ಕೃಷಿಕರು ಉತ್ಸುಕರಾಗಿದ್ದಾರೆ. ಈಗಾಗಲೇ ಸಾಕಷ್ಟು ನೀರು ಲಭಿಸಿದ್ದು ಭತ್ತ ಕೃಷಿಗೆ ಅನುಗುಣವಾಗಿದೆ. ಇದರಿಂದಾಗಿ ಕೃಷಿಕರು ಬಹಳಷ್ಟು ನಿರೀಕ್ಷೆಯಲ್ಲಿದ್ದಾರೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ  ಈ ವರ್ಷ ಅತ್ಯಧಿಕ ಅಂದರೆ 234.3 ಮಿಲ್ಲಿ  ಮೀಟರ್‌ ಬೇಸಿಗೆ ಮಳೆ ಸುರಿದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಇದು ಸರಾಸರಿ ಮಳೆ ಲಭ್ಯತೆಗಿಂತ  ಶೇಕಡಾ 38ರಷ್ಟು  ಅಧಿಕವಾಗಿದೆ ಎಂದು ಕೇರಳ ಹವಾಮಾನ ಇಲಾಖೆ ಹೇಳಿದೆ. ಇದಕ್ಕೆ ಅನುಗುಣವಾಗಿ ಈ ಬಾರಿಯ ಮಳೆಗಾಲವೂ ಸರಿಯಾದ ಸಮಯಕ್ಕೆ ಧಾರಾಕಾರ ಮಳೆಯೊಂದಿಗೆ ಆರಂಭವಾಗಿದೆ. ಇದರಿಂದಾಗಿ ಭತ್ತದ ಗದ್ದೆ  ಸಹಿತ ಕೃಷಿ ಚಟುವಟಿಕೆಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯಬಹುದೆಂದು ಲೆಕ್ಕಹಾಕಲಾಗಿದೆ.

ಭತ್ತ ಕೃಷಿಕರಿಗೆ ವರ
ಈ ಸಾಲಿನ ಬೇಸಿಗೆ ಮಳೆಯು ಭತ್ತದ ಕೃಷಿಗೆ ಅತ್ಯಂತ ಸೂಕ್ತವಾದ ರೀತಿಯಲ್ಲಿ  ಸುರಿದಿದ್ದು, ಕೃಷಿಕರಿಗೆ  ವರವಾಗಿ ಪರಿಣಮಿಸಿದೆ. ಭತ್ತ ಕೃಷಿಯ ಒಂದನೇ ಬೆಳೆಯ ನೇಜಿ ಬೆಳೆಯಲು ಪೂರಕವಾಗಿ ಬೇಸಿಗೆ ಮಳೆ ದೊರಕಿದೆ. ಅಲ್ಲದೆ ಉತ್ತಮ ಮುಂಗಾರು ಕೂಡ ಭತ್ತ  ಕೃಷಿಯ ಒಂದನೇ ಬೆಳೆಯು ನಿರೀಕ್ಷೆಗಿಂತ ಅಧಿಕ ಫಸಲು ನೀಡಲಿದೆ ಎಂದು ಕೃಷಿ ವಲಯದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭತ್ತದ ಎರಡನೇ ಬೆಳೆಗೂ ನಿಖರವಾದ ಸಮಯದಲ್ಲಿ  ಬಿತ್ತನೆ ನಡೆಸಲು ಸಾಧ್ಯವಿದೆ. ಅಕ್ಟೋಬರ್‌ ಮೊದಲ ವಾರದಲ್ಲೇ ಎರಡನೇ ಬೆಳೆಗಾಗಿ ಕೃಷಿಕರು ಗದ್ದೆಗಿಳಿಯಬಹುದಾಗಿದೆ.
ಮೇ 9 ಹಾಗೂ ಮೇ 29ರಂದು ಕಾಸರಗೋಡು ಜಿಲ್ಲೆಯಲ್ಲಿ  ಅತ್ಯಧಿಕ ಬೇಸಿಗೆ ಮಳೆ ಬಿದ್ದಿದೆ. 

ಮೇ 9ರಂದು 40.6 ಮಿಲ್ಲಿ ಮೀಟರ್‌, ಮೇ 29ರಂದು 45 ಮಿಲ್ಲಿ ಮೀಟರ್‌ ಬೇಸಿಗೆ ಮಳೆಯಾಗಿದೆ. ಕಳೆದ ವರ್ಷ ಜಿಲ್ಲೆಗೆ 87.3 ಮಿಲ್ಲಿ ಮೀಟರ್‌ ಬೇಸಿಗೆ ಮಳೆ ಲಭಿಸಿದೆ. ಪಿಲಿಕ್ಕೋಡು ಸಂಶೋಧನಾ ಕೇಂದ್ರದ ಲೆಕ್ಕಾಚಾರದಂತೆ ಈ ಬಾರಿ ಕಳೆದ ವರ್ಷಕ್ಕಿಂತ ಶೇಕಡಾ 68 ಕ್ಕೂ ಅಧಿಕ ಬೇಸಿಗೆ ಮಳೆ ದೊರಕಿದೆ ಬೇಸಿಗೆ ಮಳೆ ಚೆನ್ನಾಗಿ ಬಿದ್ದಿರುವುದರಿಂದ ಜಿಲ್ಲೆಯಲ್ಲಿ  ಕುಡಿಯುವ ನೀರಿನ ಕೊರತೆ ಅಷ್ಟೊಂದು ಕಾಡಲಿಲ್ಲ. ಹಿಂದಿನ ವರ್ಷಗಳಂತೆ ಟ್ಯಾಂಕರ್‌ಗಳಲ್ಲಿ  ಬರುವ ಕುಡಿಯುವ ನೀರಿಗಾಗಿ ಪಾತ್ರೆಗಳನ್ನು  ಹಿಡಿದು ಕಾದು ನಿಲ್ಲುವ ದೃಶ್ಯ ಈ ಬಾರಿ ಹೆಚ್ಚಾಗಿ ಇರಲಿಲ್ಲ. ಕೆಲವು ಸ್ಥಳೀಯಾಡಳಿತ ಸಂಸ್ಥೆಗಳು ಮಾತ್ರ ಕುಡಿಯುವ ನೀರು ವಿತರಿಸಬೇಕಾಯಿತು. 

ಜಿಲ್ಲಾಡಳಿತದ ನಿಧಿಗೆ ಕುಡಿಯುವ ನೀರು ವಿತರಣೆಗಾಗಿ ರಾಜ್ಯಸರಕಾರವು ಒಂದು ಕೋಟಿ ರೂ. ನೀಡಿತ್ತು. ಆದರೆ ಈ ಬಾರಿ ಅದನ್ನು  ವಿನಿಯೋಗಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿಲ್ಲ. ಕಳೆದ ಎರಡು ಮೂರು ವರ್ಷಗಳಿಗೆ ಹೋಲಿಸಿದಾಗ ಈ ಬಾರಿ ಕೆಲವೇ ಮನೆಗಳ ಬಾವಿಗಳು ಮಾತ್ರ ಬತ್ತಿರುವುದಾಗಿ ಲೆಕ್ಕಾಚಾರಗಳು ತಿಳಿಸುತ್ತಿವೆ.

Advertisement

ಸಿಡಿಲು ಮಿಂಚಿನ ಆರ್ಭಟ 
ಇದೇ ವೇಳೆ ಬೇಸಿಗೆ ಮಳೆಯ ಸಂದರ್ಭ ಮತ್ತು  ಮಳೆಗಾಲದ ಆರಂಭದಲ್ಲಿ  ಈ ವರ್ಷ ಸಿಡಿಲು ಮಿಂಚಿನ ಆರ್ಭಟ ಹೆಚ್ಚಾಗಿ ಕಂಡುಬಂದಿದೆ. ಇದಕ್ಕೆ ಉತ್ತರ ಭಾರತದ ಅಧಿಕ ಉಷ್ಣಾಂಶವೇ ಪ್ರಮುಖ ಕಾರಣವೆಂದು ಹವಾಮಾನ ಇಲಾಖೆ ತಿಳಿಸಿದೆ.  ಉಷ್ಣಾಂಶ ಹೆಚ್ಚಿದಾಗ ವಾತಾವರಣ¨ ವಾಯು ಮೇಲಕ್ಕೆ ಹೋಗುತ್ತಿದ್ದು, ಬಲವಾದ ಗಾಳಿ ಭೂಮಿ ಯಲ್ಲಿ  ಬೀಸುತ್ತದೆ. ಈ ಗಾಳಿ ಕೇರಳದ ಎಲ್ಲಾ  ಜಿಲ್ಲೆಗಳಲ್ಲೂ  ಬೀಸಿದೆ. ಬಲವಾಗಿ ಬೀಸುವ ಗಾಳಿಯಲ್ಲಿ  ಮೋಡಗಳು ಅಡಗಿರುತ್ತವೆ. ಭೂಮಿಯಲ್ಲಿ  ಬೀಸುವ ಗಾಳಿಯೊಳಗಿನ ಮೋಡಗಳಿಂದ ಭೂಮಿಗೆ ವಿದ್ಯುತ್‌ ಪ್ರವಹಿಸುತ್ತದೆ. ಇದು ಸಿಡಿಲು ಮಿಂಚು ಶಕ್ತಿಯುತಗೊಳ್ಳಲು ಕಾರಣವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತ್ಯೇಕ ಬೋಟ್‌
ಮೀನು ಕಾರ್ಮಿಕರ ಸುರಕ್ಷತೆ ನಿಟ್ಟಿನಲ್ಲಿ  ಪ್ರತ್ಯೇಕ ಬೋಟ್‌ ಅಳವಡಿಸಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ  ಅಗತ್ಯದ ಔಷಧಿ ಖಾತರಿಪಡಿಸಲು ತೀರ್ಮಾನಿಸಲಾಗಿದ್ದು, ಪೂರ್ಣ ಹೊOಯನ್ನುೆ  ಜಿಲ್ಲಾ  ವೈದ್ಯಾಧಿ ಕಾರಿ ಯವರಿಗೆ ನೀಡಲಾಗಿದೆ.

ಸರಾಸರಿಗಿಂತ ಶೇ.16 ಕ್ಕೂ ಅಧಿಕ ಬೇಸಿಗೆ ಮಳೆ
ಪಿಲಿಕ್ಕೋಡು ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಲೆಕ್ಕಾಚಾರದಂತೆ ಸರಾಸರಿಗಿಂತ ಶೇಕಡಾ 16 ಕ್ಕೂ ಅಧಿಕ ಬೇಸಿಗೆ ಮಳೆ ಈ ಬಾರಿ ಜಿಲ್ಲೆಯಲ್ಲಿ  ಲಭಿಸಿದೆ. ಹವಾಮಾನ ನಿರೀಕ್ಷಣಾ ವಿಭಾಗದ ಪ್ರಕಾರ ಸರಾಸರಿ ಬೇಸಿಗೆ ಮಳೆ 180.2 ಮಿಲ್ಲಿ  ಮೀಟರ್‌ ಆಗಿದೆ. ಪಿಲಿಕ್ಕೋಡು ಸಂಶೋಧನಾ ಕೇಂದ್ರದ ಪ್ರಕಾರ ಸರಾಸರಿ ಬೇಸಿಗೆ ಮಳೆ ಲಭ್ಯತೆ 201.6 ಮಿಲ್ಲಿ ಮೀಟರ್‌ ಆಗಿರುತ್ತದೆ. ಕಳೆದ 30 ವರ್ಷಗಳ ಬೇಸಿಗೆ ಮಳೆಯ ಪ್ರಮಾಣವನ್ನು  ಅನುಸರಿಸಿ ಈ ಸರಾಸರಿ ಲೆಕ್ಕ ಹಾಕಲಾಗಿದೆ. ಮಾರ್ಚ್‌, ಎಪ್ರಿಲ್‌, ಮೇ ತಿಂಗಳಲ್ಲಿ  ಸುರಿದ ಮಳೆಯನ್ನು  ಬೇಸಿಗೆ ಮಳೆ ಎಂದು ಪರಿಗಣಿಸಿ ಅಂಕಿ ಅಂಶಗಳನ್ನು  ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next