ಬೆಂಗಳೂರು: ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮತ್ತು ಮಾರುಕಟ್ಟೆ ಒದಗಿಸಲು ಇದೇ ಜ. 18ರಿಂದ 20ರವರೆಗೆ ಸಾವಯವ-ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಬಿಬಿಎಂಪಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ “ಸುಗ್ಗಿ-ಹುಗ್ಗಿ: ಸಿರಿ ಧಾನ್ಯಗಳೊಂದಿಗೆ ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಮುಂಚೂಣಿಯಲ್ಲಿದೆ. ಕೃಷಿ ನೀತಿಯಲ್ಲಿ ಇದಕ್ಕೆ ಸಾಕಷ್ಟು ಒತ್ತು ನೀಡಲಾಗಿದೆ.
ಅದಕ್ಕೆ ಪೂರಕವಾಗಿ ಸರ್ಕಾರ ಹಲವು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಈಗ ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಕೊಟ್ಟು ಮಾರುಕಟ್ಟೆ ಒದಗಿಸಲು ಬೆಂಗಳೂರಿನ ಅರಮನೆ ಮೈದಾನದಲ್ಲಿ 3 ದಿನಗಳ ಅಂತರರಾಷ್ಟೀಯ ಮಟ್ಟದ ಮೇಳ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮದೇ ಆದ ಸಂಸ್ಕೃತಿ, ಕೃಷಿ, ಸಂಪ್ರದಾಯವಿದೆ. ಆದರೆ, ಈಗಿನ ಆಧುನಿಕ ಕೃಷಿ ನೆಪದಲ್ಲಿ ವಿದೇಶಿ ಆಹಾರ ಪದಾರ್ಥಗಳ ಬಳಕೆ ಹೆಚ್ಚಾಗಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹಾಗಾಗಿ, ಸಾವಯವ ಕೃಷಿ ಪದ್ಧತಿ ಹಾಗೂ ಸಿರಿಧಾನ್ಯಗಳಿಗೆ ಮರಳಬೇಕಾಗಿದೆ ಎಂದರು.
ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ವರ ರಾವ್, ಆಯುಕ್ತ ಡಾ. ಕೆ.ಜಿ. ಜಗದೀಶ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ. ಕಾಟಪ್ಪ ಕಣ್ಣೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಲವಂತರಾವ್ ಪಾಟೀಲ್ ಮತ್ತಿತರರು ಇದ್ದರು.
ಸುಗ್ಗಿ-ಹುಗ್ಗಿ ಸಂಭ್ರಮ: ಸುಗ್ಗಿ-ಹುಗ್ಗಿ ಸಂಭ್ರಮದ ಪ್ರಯುಕ್ತ ಲಾಲ್‌ಬಾಗ್‌ನ ಮುಖ್ಯದ್ವಾರದ ಪರಿಸರದಲ್ಲಿ ಕರಾವಳಿ-ಮಲೆನಾಡು, ಹಳೆ ಮೈಸೂರು, ಬಯಲುಸೀಮೆ, ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಸಂಪ್ರಾದಾಯಿಕ ಬೆಳೆಗಳು, ಅಲ್ಲಿನ ಕಲೆ-ಸಂಸ್ಕೃತಿ, ಸಂಪ್ರದಾಯಗಳನ್ನು ಬಿಂಬಿಸುವ ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ರಾಶಿ ಪೂಜೆ ನಡೆಸುವ ಮೂಲಕ ಕೃಷಿ ಸಚಿವರು ಸುಗ್ಗಿ-ಹುಗ್ಗಿ ಸಂಬ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಜಾನಪದ ಕಲಾ ತಂಡಗಳಿಂದ ಗಾಯನ, ನೃತ್ಯ, ಕುಣಿತ ನಡೆಯಿತು.