Advertisement

ಕಳೆದುಹೋದ ಕೆರೆಗಳಿಗೆ ಬರುತ್ತಾ ಕಳೆ?

10:59 AM Jul 17, 2018 | |

ಬೆಂಗಳೂರು: ಧೂಳು ತಿನ್ನುತ್ತಿರುವ ಕೆರೆಗಳ ಒತ್ತುವರಿ ಅಧ್ಯಯನ ವರದಿಯನ್ನು ಹೊಸ ಸರ್ಕಾರವಾದರೂ ಅಂಗೀಕಾರ ಮಾಡುವುದೇ? ಆ ಮೂಲಕ ಸಾವಿರಾರು ಎಕರೆ ಕೆರೆ ಜಾಗವನ್ನು ನುಂಗಿಹಾಕಿದವರ ವಿರುದ್ಧ ಚಾಟಿ ಬೀಸುವುದೇ? ಕಳೆದುಹೋದ ಕೆರೆಗಳಿಗೆ ಮತ್ತೆ ಜೀವಕಳೆ ಬರುವುದೇ?

Advertisement

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಪರಿಸರವಾದಿಗಳು ಮತ್ತು ನಗರದ ನಾಗರಿಕರಲ್ಲಿ ಈ ಆಶಾವಾದ ಮೂಡಿದೆ. ಈ ನಿರೀಕ್ಷೆಗೆ ಕಾರಣವೂ ಇದೆ. ಯಾಕೆಂದರೆ, ನಗರದಲ್ಲಿನ ಕೆರೆಗಳ ಒತ್ತುವರಿ ವಿರುದ್ಧ ಈ ಹಿಂದೆ ಗುಡುಗಿದವರು, ನಂತರ ಅದಕ್ಕೊಂದು ಸದನ ಸಮಿತಿ ರಚನೆಗೆ ಕಾರಣರಾದವರು ಅಂದು ಪ್ರತಿಪಕ್ಷದ ನಾಯಕರಾಗಿದ್ದ ಎಚ್‌.ಡಿ.ಕುಮಾರಸ್ವಾಮಿ. ಈಗ ಅವರೇ ಮುಖ್ಯಮಂತ್ರಿ. ಹಾಗಾಗಿ ಮೊದಲ ಅಧಿವೇಶನದಲ್ಲೇ ಈ ಬಗ್ಗೆ ಪ್ರಸ್ತಾಪಿಸಿ ಕೆರೆ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ಸಮಿತಿ ರಚನೆಗೆ ಪತ್ರ: 2014ರ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸುಮಾರು ಒಂದು ತಾಸು ಕೆರೆ ಒತ್ತುವರಿ ಕುರಿತು ಮಾತನಾಡಿದ್ದರು. “ನಗರದ ಸುತ್ತಮುತ್ತ ಕೆರೆಗಳ ಒತ್ತುವರಿ ಬಗ್ಗೆ ಸಮಗ್ರ ತನಿಖೆ ಮಾಡಿ, ಸೂಕ್ತ ಶಿಫಾರಸಿನೊಂದಿಗೆ ವರದಿ ಸಲ್ಲಿಸಬೇಕು. ಇದಕ್ಕಾಗಿ ಸದನ ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದ್ದರು. ಜತೆಗೆ ಅಂದಿನ ಮುಖ್ಯಮಂತ್ರಿಗೆ ಪತ್ರ ಕೂಡ ಬರೆದಿದ್ದರು. ಪರಿಣಾಮ ಕೆ.ಬಿ.ಕೋಳಿವಾಡ ನೇತೃತ್ವದಲ್ಲಿ ಸದನ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. 

ನಂತರ ಆ ಸಮಿತಿ ಬೆಂಗಳೂರು ನಗರ ಮತ್ತು ಸುತ್ತಲಿನ ಕೆರೆಗಳ ಒತ್ತುವರಿ ಬಗ್ಗೆ 2014ರಿಂದ 2017ರವರೆಗೆ ಸುದೀರ್ಘ‌ ಅಧ್ಯಯನ ನಡೆಸಿ, ಕಳೆದ ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ 1,547 ಕೆರೆಗಳಲ್ಲಿ 10,785 ಎಕರೆ ಒತ್ತುವರಿಯಾಗಿದ್ದು, 7,530 ಎಕರೆ ಖಾಸಗಿ ಸಂಸ್ಥೆಗಳೇ ಆಕ್ರಮಿಸಿಕೊಂಡಿವೆ. ಇದರ ಅಂದಾಜು ಮೊತ್ತ 15 ಲಕ್ಷ ಕೋಟಿ ರೂ. ದಾಟಲಿದೆ. ಈ ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. 

Advertisement

ತಪ್ಪಿತಸ್ಥರ ಸ್ಥಿರಾಸ್ತಿ, ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಕ್ರಿಮಿನಲ… ಮೊಕದ್ದಮೆ ದಾಖಲಿಸುವ ಜತೆಗೆ ಒತ್ತುವರಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸಮಿತಿ ಸರ್ಕಾರಕ್ಕೆ ಸಲಹೆ ಮಾಡಿತ್ತು.

ಕಾಲಹರಣ ಬಿಡಿ; ರಕ್ಷಣೆ ಮಾಡಿ: ಅಷ್ಟೇ ಅಲ್ಲ ಸದನವು ಕಾಲಹರಣ ಮಾಡದೆ, ಕೆರೆಗಳ ರಕ್ಷಣೆಗಾಗಿ ತುರ್ತಾಗಿ ಕ್ರಿಯಾಯೋಜನೆ ಸಿದ್ಧಪಡಿಸುವುದು ಅಗತ್ಯ ಮತ್ತು ಅನಿವಾರ್ಯ ಎಂದು ಸಮಿತಿ ಹೇಳಿತ್ತು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ, ನಗರ ಪ್ರದೇಶದ ಸವಿಸ್ತಾರ ಅಳತೆ ಕೈಗೊಂಡು, ಪ್ರಸ್ತುತ ವಸ್ತುಸ್ಥಿತಿಯಂತೆ ಕಾನೂನಿನನ್ವಯ ದಾಖಲೆಗಳನ್ನು ಸಿದ್ಧಪಡಿಸುವುದು, ಕೆರೆ ಒತ್ತುವರಿ ವಿಚಾರದಲ್ಲಿ ನಿಯಮ ಉಲ್ಲಂಘನೆಗೆ ರಾಜಕೀಯ ಒತ್ತಡಗಳನ್ನು ಹೇರಿದವರ ವಿರುದ್ಧವೂ ಕ್ರಮ ಕೈಗೊಳ್ಳಲು ಹಿಂಜರಿಯಬಾರದು ಎಂದು ಶಿಫಾರಸು ಮಾಡಲಾಗಿತ್ತು. ಆದರೆ ಈಗ ಈ ವರದಿ ಕೊಳೆಯುತ್ತಾ ಬಿದ್ದಿದೆ.  

ಇದು ಮೊದಲ ಕೆರೆ ಅಧ್ಯಯನ ವರದಿ ಅಲ್ಲ ಒತ್ತುವರಿಗೆ ಸಂಬಂಧಿಸಿದಂತೆ ಇದೇನೂ ಮೊದಲ ವರದಿ ಅಲ್ಲ. ಈ ಹಿಂದೆ
ಹಲವು ವರದಿಗಳು ಸಲ್ಲಿಕೆ ಆಗಿವೆ. ಆದರೆ, ಅನುಷ್ಠಾನ ಮಾತ್ರ ಆಗಿಲ್ಲ. 1986ರಲ್ಲಿ ಲಕ್ಷ್ಮಣ ರಾವ್‌ ಸಮಿತಿಯು ಬೆಂಗಳೂರಿನ ಕೆರೆಗಳ ರಕ್ಷಣೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿತ್ತು. ಅದರಂತೆ 1961ರಲ್ಲಿ ನಗರ ವ್ಯಾಪ್ತಿಯಲ್ಲಿ 261 ಕೆರೆಗಳಿದ್ದವು. 1984ರ ಸಿಡಿಪಿ ಬೆಂಗಳೂರು ವ್ಯಾಪ್ತಿ 1,279 ಚದರ ಮೀಟರ್‌ ಆಗಿದ್ದು, 389 ಕೆರೆ/ಕಟ್ಟೆಗಳಿದ್ದವು. ಅದರಲ್ಲಿ 81 ಜೀವಂತ ಕೆರೆಗಳು, 46 ಅನುಪಯುಕ್ತ ಕೆರೆಗಳು ಮತ್ತು 90 ಕೆರೆಗಳು ಅರಣ್ಯ ಇಲಾಖೆಗೆ ವರ್ಗಾವಣೆ ಆಗಿದ್ದು, ಉಳಿದ ಕೆರೆಗಳು ಅರಣ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಜಂಟಿ ಮಾಲೀಕತ್ವಕ್ಕೆ ವರ್ಗಾವಣೆ ಆಗಿವೆ ಎಂದು ಗುರುತಿಸಲಾಗಿತ್ತು. ಪ್ರಸ್ತುತ ನಗರದ ಕೋರ್‌ ಏರಿಯಾದಲ್ಲಿ 352 ಕೆರೆಗಳಿವೆ
ಎನ್ನಲಾಗಿದೆ.

ಲಕ್ಷ್ಮಣ ರಾವ್‌ ವರದಿ ನಂತರ 2007-08ರಲ್ಲಿ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ನಗರದ ಭೂ ಒತ್ತುವರಿ ಕುರಿತ ವಿಧಾನ ಮಂಡಲ ಜಂಟಿ ಸದನ ಸಮಿತಿ ವರದಿ ಸಲ್ಲಿಸಿತ್ತು. ಅದರಲ್ಲಿ 41,303 ಎಕರೆಗೂ ಅಧಿಕ ಸರ್ಕಾರಿ ಭೂಮಿಯನ್ನು 45,863 ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖೀಸಲಾಗಿತ್ತು. ಇದರಲ್ಲಿ ಕೆರೆಗಳು ಕೂಡ ಸೇರಿವೆ.

ಇದಾದ ನಂತರ 2012ರ ಏಪ್ರಿಲ್‌ನಲ್ಲಿ ಕೆರೆಯ ಸುತ್ತಲಿನ 30 ಮೀಟರ್‌ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳನ್ನು ಕೂಡಲೇ ನೆಲಸಮ ಮಾಡುವಂತೆ ಹೈಕೋರ್ಟ್‌ ಆದೇಶಿಸಿತ್ತು. ಅಲ್ಲದೆ, ಕೆರೆ ಸಂರಕ್ಷಣೆಗೆ ಅಧಿಕಾರಿಗಳ ಸಮಿತಿ ರಚಿಸುವಂತೆ ಸೂಚಿಸಿತ್ತು.

ರಾಜ್ಯದೆಲ್ಲೆಡೆ ಕೆರೆಗಳ ಸ್ಥಿತಿಗತಿ ಸಮೀಕ್ಷೆ ಮಾಡಬೇಕು. ಕೆರೆಗಳ ರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಬೇಕು. ಕಾಲಕಾಲಕ್ಕೆ ಹೂಳೆತ್ತಬೇಕು. ವೈಜ್ಞಾನಿಕ ವಿಧಾನದಲ್ಲಿ ಕಳೆ, ಹೂಳು ತೆಗೆಯಬೇಕು. ರಾಜ ಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕು ಎನ್ನುವುದೂ ಸೇರಿದಂತೆ ಹಲವು ನಿರ್ದೇಶನಗಳನ್ನು ಹೈಕೋರ್ಟ್‌ ನೀಡಿತ್ತು. ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ಮಾಡಲಾಗಿತ್ತು. ನಂತರ ರಾಷ್ಟ್ರೀಯ ಹಸಿರು ಪೀಠ ಕೆರೆ ಅಂಚಿನ 70 ಮೀ. ಜಾಗವನ್ನು ಬಫ‌ರ್‌ ಝೋನ್‌ ಎಂದು ಘೋಷಿಸಬೇಕು ಎಂದು ಹೇಳಿತ್ತು.

ಕೆರೆಗಳ ಒತ್ತುವರಿ ಅಧ್ಯಯನ ಕುರಿತ ಸದನ ಸಮಿತಿ ರಚನೆ ಮತ್ತು ಅದು ಸಲ್ಲಿಸಿದ 10 ಸಾವಿರ ಪುಟಗಳ ವರದಿಯು ಎಚ್‌.ಡಿ. ಕುಮಾರಸ್ವಾಮಿ ಅವರ ಕಾಳಜಿ ಫ‌ಲ. ಈಗ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ಸಹಜವಾಗಿ ವರದಿಗೆ ಮಹತ್ವ ಬಂದಿದ್ದು, ಜಾರಿ ಮಾಡುವ ನಿರೀಕ್ಷೆಯೂ ಇದೆ. ವರದಿ ಶಿಫಾರಸುಗಳನ್ನು ಅನುಷ್ಠಾನಗೊಳಿಸುತ್ತಾರೆ ಎಂಬ ಭರವಸೆ ಇದೆ.
 ಕೆ.ಬಿ. ಕೋಳಿವಾಡ, ಕೆರೆ ಒತ್ತುವರಿ ಅಧ್ಯಯನ ಸದನ ಸಮಿತಿ ಅಧ್ಯಕ್ಷರು

ಬರೀ ವರದಿಗಳನ್ನು ಒಪ್ಪಿಸುವ ಕೆಲಸವೇ ಆಗುತ್ತಿದೆಯೇ ಹೊರತು, ಅವುಗಳ ಅನುಷ್ಠಾನ ಮಾತ್ರ ಶೂನ್ಯ. ಈ ಮಧ್ಯೆ ಕೆರೆಗಳು ಕಣ್ಮರೆ ಆಗುತ್ತಲೇ ಇವೆ. ಜನಪ್ರತಿನಿಧಿಗಳ ವರದಿ ಒತ್ತಟ್ಟಿಗಿರಲಿ, ನ್ಯಾಯಾಲಯದ ಆದೇಶವನ್ನೂ ಪಾಲಿಸುತ್ತಿಲ್ಲ. ಹೊಸ ಸರ್ಕಾರವೂ ಮತ್ತೂಂದು ವರದಿಗೆ ಸೂಚಿಸದೆ ಅನುಷ್ಠಾನಕ್ಕೆ ಮುಂದಾಗಬೇಕು.
 ಲಿಯೊ ಎಫ್. ಸಾಲ್ಡಾನ, ಸಂಯೋಜಕ, ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌

 ಹಿಂದೆ ಎಚ್‌ಡಿಕೆ ಸಿಎಂ ಆಗಿದ್ದಾಗಲೇ ನಗರದ ಭೂಒತ್ತುವರಿ ಕುರಿತ ವಿಧಾನ ಮಂಡಲ ಜಂಟಿ ಸದನ ಸಮಿತಿ ರಚಿಸಿದ್ದರು. ಈಗ ವಿಶೇಷ ನ್ಯಾಯಾಲಯ ರಚನೆಯಾಗಿದ್ದರೂ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಮಧ್ಯೆ 2014ರಲ್ಲಿ ಕೆರೆ ಒತ್ತುವರಿ ಕುರಿತ ಸದನ ಸಮಿತಿ ರಚನೆ ಆಯಿತು. ಈ ವರದಿ ಅನುಷ್ಠಾನದಲ್ಲಿ ಅವರು ಬದ್ಧತೆ ಪ್ರದರ್ಶಿಸಬೇಕು.
 ಎ.ಟಿ.ರಾಮಸ್ವಾಮಿ, ಶಾಸಕರು

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next