ಯಲಬುರ್ಗಾ: ಉತ್ತಮ ಆರೋಗ್ಯ ಪ್ರತಿಯೊಬ್ಬರ ಹಕ್ಕಾಗಿದೆ. ಸರ್ಕಾರಗಳು ನಾನಾ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿವೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಗೌಡ್ರ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಸ್ವಚ್ಛ ಭಾರತ ಮೀಷನ್ ಯೋಜನೆಯಡಿ ತಾಲೂಕು ಯುನಿಸೇಫ್ ಘಟಕ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ವತಿಯಿಂದ ಹಮ್ಮಿಕೊಂಡ ಮಾದರಿ ಗ್ರಾಮ ಪಂಚಾಯಿತಿಯ ಕ್ಷೇತ್ರಮಟ್ಟದ ಕಾರ್ಯಕರ್ತರಿಗೆ ಹಾಗೂ ಸ್ಥಾಯಿ ಸಮಿತಿ ಸದಸ್ಯರಿಗೆ ಸಾಮರ್ಥ್ಯ ಅಭಿವೃದ್ಧಿ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯರಾದ ನಾವುಗಳು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಸಾಕಷ್ಟು ಮುಂದುವರಿದಿರುವ ಈ ದಿನಗಳಲ್ಲಿ ಸ್ವಚ್ಛತೆ ಹಾಗೂ ಶೌಚಾಲಯ ಬಳಕೆ ವಿಷಯ ಬಂದಾಗ ನಾವು ಇನ್ನು ಯಾವ ಕಾಲದಲ್ಲಿ ಇದ್ದೇವೆ ಎಂದು ಹೇಳುವುದಕ್ಕೆ ತಲೆತಗ್ಗಿಸಬೇಕಾಗಿದೆ. ಗ್ರಾಮಗಳಲ್ಲಿ ರಚನೆಯಾಗಿರುವ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳು ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕಿದೆ. ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಪ್ರತಿ ಗ್ರಾಪಂ ವತಿಯಿಂದ ಬ್ಲೀಚಿಂಗ್ ಪುಡಿ ಖರೀದಿ ಮಾಡಿ ಸಿಂಪರಣೆ ಮಾಡುವುದಕ್ಕೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ತಾಪಂ ಇಒ ಡಾ| ಡಿ. ಮೋಹನ್ ಮಾತನಾಡಿ, ಕೆಲ ವರ್ಷಗಳಿಂದ ತಾಲೂಕಿನಲ್ಲಿ ಶೌಚಾಲಯ ನಿರ್ಮಾಣ ಹಾಗೂ ಬಳಕೆ ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಆದರೆ ನಿರೀಕ್ಷೆಯಂತೆ ಇನ್ನು ಪೂರ್ಣ ಪ್ರಮಾಣದಲ್ಲಿ ಸಾಧನೆ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎನ್ನುವ ಬೇಸರ ಇದೆ. ಶೌಚಾಲಯ ನಿರ್ಮಾಣ ಹಾಗೂ ಬಳಕೆ ಮಾಡುವ ಬಗ್ಗೆ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ನಾನಾ ಇಲಾಖೆಯ ಅಧಿಕಾರಿಗಳು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಶೌಚಾಲಯ ನಿರ್ಮಾಣ ಮಾಡಿಕೊಂಡ ಕೆಲವರು ಶೌಚಾಲಯ ಬಳಸುತ್ತಿಲ್ಲ. ಸ್ವಾಭಿಮಾನಕ್ಕಾಗಿ ಶೌಚಾಲಯ ಎನ್ನುವುದನ್ನು ಅರಿಯಬೇಕು ಎಂದು ಹೇಳಿದರು.
ಯುನಿಸೇಫ್ ತಾಲೂಕು ಸಂಯೋಜಕ ಭೀಮಣ್ಣ ಹವಳಿ ಮಾತನಾಡಿ, ತಾಲೂಕಿನ ಇಟಗಿ, ಮಸಬಹಂಚಿನಾಳ, ಹೀರೆವಂಕಲಕುಂಟಾ, ಮುಧೋಳ, ಸಂಕನೂರ ಗ್ರಾಪಂಗಳು ಶೌಚಾಲಯ ನಿರ್ಮಾಣ, ಬಳಕೆಯಲ್ಲಿ ಉತ್ತಮ ಸಾಧನೆ ಮಾಡಿವೆ. ಮುಂಬರು ದಿನಗಳಲ್ಲಿ ಎಲ್ಲ ಗ್ರಾಪಂಗಳಲ್ಲಿ ಶೌಚಾಲಯ, ಸ್ವಚ್ಛತೆ ಬಗ್ಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಆರೋಗ್ಯ ಇಲಾಖೆಯ ಅಧಿಕಾರಿ ಎಸ್.ಡಿ. ಬೆನ್ನೂರ, ಹನುಂತಗೌಡ ಪಾಟೀಲ್, ಬಸವರಾಜ ಸೂಡಿ ಸೇರಿದಂತೆ ಇನ್ನಿತರರು ಉಪನ್ಯಾಸ ನೀಡಿದರು.