ಚನ್ನರಾಯಪಟ್ಟಣ: ಕ್ರೀಡೆಯಲ್ಲಿ ತೊಡಗುವವರ ಆರೋಗ್ಯ ಉತ್ತಮವಾಗಿರುತ್ತದೆ. ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಜನರು ಮುಂದಾಗ ಬೇಕೆಂದು ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ವೆಂಕಟೇಶಮೂರ್ತಿ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಕೋರಮಾರನಹಳ್ಳಿ ಮೊರಾರ್ಜಿ ವಸತಿ ಶಾಲೆ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಯಲ್ಲಿ ತೊಡುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಿ ಎಂದರು.
ಪ್ರಕೃತಿಗೆ ವಿರುದ್ಧವಾಗಿ ಬದುಕಬೇಡಿ: ಪೂರ್ವಜರು ಚಳಿ ಮಳೆ ಬಿಸಿಲಿಗೆ ಅಂಜದೇ ಪ್ರಕೃತಿ ಜೊತೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಆದರೆ ಇಂದು ಬಿಸಿಲಿನ ತಾಪವನ್ನು ತಾಳಲಾರದೇ ಹವಾ ನಿಯಂತ್ರಣಕ್ಕೆ ಮೊರೆ ಹೋಗುತ್ತಿದ್ದೇವೆ. ಈ ರೀತಿ ಪ್ರಕೃತಿಗೆ ವಿರುದ್ಧವಾಗಿ ನಾವು ಬದುಕುತ್ತಿರುವುದರಿಂದ ಹಲವು ರೋಗಗಳನ್ನು ತಂದುಕೊಂಡು ಸಾವಿಗೆ ಆಹ್ವಾನ ನೀಡುತ್ತಿದ್ದೇವೆ. ಪರಿಸರಕ್ಕೆ ಪೂರಕವಾಗಿ ನಾವು ಬದುಕು ನಡೆಸಬೇಕಿದೆ ಎಂದು ಹೇಳಿದರು.
ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ, ಕ್ರೀಡೆಯಲ್ಲಿ ಪಾಲ್ಗೊಂಡವರು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಕ್ರೀಡಾ ಕ್ಷೇತ್ರ ದಲ್ಲಿ ಸಾಧನೆ ಮಾಡಿದವರಿಗೆ ಸಾಕಷ್ಟು ಸರ್ಕಾರಿ ಸೌಲಭ್ಯಗಳು ದೊರೆ ಯಲಿವೆ. ಕ್ರೀಡಾಪಟುಗಳಿಗೆ ಅನೇಕ ಉದ್ಯಮ ವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುತ್ತದೆ ಎಂದರು.
ಕ್ರೀಡೆಯ ಬಗ್ಗೆ ಆಸಕ್ತಿ ವಹಿಸಿ:ವಿದ್ಯಾರ್ಥಿಗಳೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ ತೋರಬೇಕು. ಶಾಲಾ ಮೈದಾನದಲ್ಲಿ ಹೆಚ್ಚು ಮರ ಬೆಳೆಸಲು ಮುಂದಾಗಬೇಕು. ದೈಹಿಕ ಶಿಕ್ಷಕರು ತಮ್ಮ ಶಾಲಾ ಆವರಣದಲ್ಲಿ ಚಿಕ್ಕ ಉದ್ಯಾನವ ನಿರ್ಮಾಣಕ್ಕೆ ಮುತುವರ್ಜಿ ತೋರಬೇಕಿದೆ. ಜಾಗತಿಕ ತಾಪಮಾನ ಕಡಿಮೆ ಮಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು. 32 ತಂಡಗಳು ಭಾಗಿ: ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಜಿಲ್ಲೆಯ 8 ತಾಲೂಕಿನಿಂದ ಸುಮಾರು 32 ತಂಡಗಳು ಭಾಗವಹಿಸಿದ್ದು, ಪ್ರತಿ ತಾಲೂಕಿನಲ್ಲಿ ಪ್ರೌಢ ಶಾಲೆಯಿಂದ ಒಂದು ಬಾಲಕ ಹಾಗೂ ಬಾಲಕಿಯರ ತಂಡ, ಪ್ರಾಥಮಿಕ ಶಾಲೆಯಿಂದ ಬಾಲಕ ಹಾಗೂ ಬಾಲಕಿಯರ ತಂಡವಿದ್ದು ಸುಮಾರು 520 ಕ್ರೀಡಾ ಪಟುಗಳು ಭಾಗವಹಿಸಿದ್ದರು.
ತಾಪಂ ಅಧ್ಯಕ್ಷೆ ಇಂದಿರಾ ಧ್ವಜಾ ರೋಹಣ ನೆರವೇರಿಸಿದರು. ಜಿಪಂ ಸದಸ್ಯ ಸಿ.ಎನ್. ಪುಟ್ಟಸ್ವಾಮಿಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಂಜುನಾಥ, ಬಿಇಒ ಪುಷ್ಪಲತಾ, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ವಿಜಯ ಕುಮಾರ ಉಪಸ್ಥಿತರಿದ್ದರು.