Advertisement

ಎಳನೀರ ಸ್ನಾನಂ ಎಳನೀರ ಪಾನಂ

06:35 PM May 21, 2019 | mahesh |

ನಿರ್ಜಲೀಕರಣ, ಸನ್‌ಬರ್ನ್, ತುರಿಕೆ, ಬೆವರುಸಾಲೆ, ಕಜ್ಜಿ, ಬಾಯಿಹುಣ್ಣು, ಉರಿಮೂತ್ರ ಸಮಸ್ಯೆ, ನಿದ್ರಾಹೀನತೆ… ಬೇಸಿಗೆಯಲ್ಲಿ ನಮ್ಮನ್ನು ಕಾಡುವ ಸಮಸ್ಯೆಗಳು ಒಂದೇ, ಎರಡೇ? ಇವುಗಳಿಂದ ಪಾರಾಗಲು ಕ್ರೀಂ, ಲೋಷನ್‌, ಜೆಲ್‌ಗ‌ಳಿಗಿಂಥ ಸುಲಭ ಮಾರ್ಗವೊಂದಿದೆ. ಅದುವೇ ಎಳನೀರು… ಎಳನೀರಿನಲ್ಲಿ ದೇಹದ ಆಂತರಿಕ ಆರೋಗ್ಯಕ್ಕೆ, ಬಾಹ್ಯ ಸೌಂದರ್ಯಕ್ಕೆ ಬೇಕಾಗುವ ಹಲವು ವಿಟಮಿನ್‌ಗಳು, ಕ್ಯಾಲ್ಸಿಯಂ, ಮೆಗ್ನಿಷಿಯಂ, ಪೊಟ್ಯಾಶಿಯಂ ಮುಂತಾದವು ಅಧಿಕ ಪ್ರಮಾಣದಲ್ಲಿವೆ…

Advertisement

ಎಳನೀರೆಂಬ ಅಮೃತ
– ದೇಹದ ನಿರ್ಜಲೀಕರಣವನ್ನು ತಡೆಯುತ್ತದೆ.
– ಜೀವರಸಾಯನಿಕ ಕ್ರಿಯೆಯನ್ನು ಉತ್ತೇಜಿಸುತ್ತದೆ.
– ಹೊಟ್ಟೆಯುಬ್ಬರವನ್ನು ತಡೆದು, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
– ಸ್ನಾಯುಗಳ ಸೆಳೆತಕ್ಕೆ ರಾಮಬಾಣ.
– ಮೂಳೆಗಳನ್ನು ಗಟ್ಟಿಯಾಗಿಸುತ್ತೆ.
– ಮಧುಮೇಹ, ರಕ್ತದೊತ್ತಡ ನಿಯಂತ್ರಣ.
– ಚರ್ಮಕ್ಕೆ ತೇವಾಂಶ ನೀಡಿ, ಬಿಸಿಲಿಗೆ ಚರ್ಮ ಬಣ್ಣಗೆಡುವುದನ್ನು ತಡೆಯುತ್ತದೆ.
-ಮೂತ್ರಪಿಂಡದ ಕಲ್ಲು ಕರಗಿಸುತ್ತದೆ.
-ಉರಿಮೂತ್ರ ಶಮನ.
– ಟೆನ್ಸ್ ನ್‌(ಒತ್ತಡ)ಕಡಿಮೆಗೊಳಿಸುತ್ತದೆ.
-ಮಲಬದ್ಧತೆ ನಿವಾರಿಸುತ್ತದೆ.
-ತೂಕ ಇಳಿಕೆಗೆ ಸಹಕಾರಿ.
-ಆಮಶಂಕೆ, ಅತಿಸಾರದಂಥ ಸಮಸ್ಯೆಗಳನ್ನು ತಡೆಯುತ್ತದೆ.

ಎಳನೀರಿನ ಜಳಕ
ಎಳನೀರಿನ ಸೇವನೆಯಷ್ಟೇ ಅಲ್ಲ, ಎಳನೀರಿನಿಂದ ಮುಖ ತೊಳೆಯುವುದರಿಂದಲೂ ಚರ್ಮ ಸುಕೋಮಲವಾಗುತ್ತದೆ. ಎಳನೀರಿನ ಜೊತೆ ಕೆಲವು ಸಾಮಗ್ರಿ ಬೆರೆಸಿ, ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

– ಎಳನೀರು ಮತ್ತು ಸುಣ್ಣದ ತಿಳಿಯನ್ನು ಸಮವಾಗಿ ಸೇರಿಸಿ, ಅದಕ್ಕೆ ಒಂದು ಚಿಟಿಕೆ ಅರಶಿನ ಹಾಕಿ ಅಂಗೈ, ಅಂಗಾಲುಗಳಿಗೆ ಹಚ್ಚಿಕೊಂಡರೆ ಉರಿ ಕಡಿಮೆಯಾಗುತ್ತದೆ.
– ಎಳನೀರಿನ ಒಳಗಿರುವ ಗಂಜಿ ಅಥವಾ ಕಾಯಿಯನ್ನು ಸ್ವಲ್ಪ ಎಳನೀರಿನ ಜೊತೆ ಸೇರಿಸಿ ರುಬ್ಬಿ, ತಲೆ, ಮುಖ, ಮೈಕೈಗೆ ಲೇಪಿಸಿಕೊಂಡು ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ಸ್ನಾನ ಮಾಡಿ.
– ತಾಜಾ ಎಳನೀರಿಗೆ ಸ್ವಲ್ಪ ರೋಸ್‌ ವಾಟರ್‌ ಬೆರೆಸಿ, ಶುಭ್ರ ಹತ್ತಿಯಲ್ಲಿ ಅದ್ದಿ ಕತ್ತು, ಮುಖ, ಕಣ್ಣಿನ ಸುತ್ತ 20 ನಿಮಿಷ ನಿಧಾನವಾಗಿ ಮಸಾಜ್‌ ಮಾಡಿ. ಎಳನೀರು- ರೋಸ್‌ ವಾಟರ್‌ನ ಮಿಶ್ರಣವನ್ನು ಗಾಳಿಯಾಡದ ಬಾಟಲಿಯಲ್ಲಿ ಹಾಕಿ ಫ್ರಿಡ್ಜ್ನಲ್ಲಿ ಎರಡೂರು ದಿನ ಇಟ್ಟು ಬಳಸಬಹುದು.
– ಸ್ನಾನ ಮಾಡುವ ನೀರಿನಲ್ಲಿ ಎಳನೀರು ಬೆರೆಸುವುದರಿಂದ ದೇಹ ಫ್ರೆಶ್‌ ಎನಿಸುತ್ತದೆ. ಕೊನೆಯದಾಗಿ ಸುರಿದುಕೊಳ್ಳುವ ನೀರಿನ ಬದಲು ಎಳನೀರು ಸುರಿದುಕೊಳ್ಳಬಹುದು.
– ಪ್ರತಿದಿನ ಎಳನೀರಿನಿಂದ ಮುಖ ತೊಳೆದರೆ ಮೊಡವೆಗಳು ಕಡಿಮೆಯಾಗುತ್ತವೆ. ಕಪ್ಪು ಕಲೆಗಳು ಮಾಯವಾಗುತ್ತವೆ.

ಎಳನೀರಿನ ಪಾನಕ
– ಎಳನೀರಿಗೆ ಲಿಂಬೆರಸ ಬೆರೆಸಿ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಹೆಚ್ಚುತ್ತದೆ ಮತ್ತು ಪೋಷಕಾಂಶಗಳ ಕೊರತೆ ನೀಗುತ್ತದೆ.
– ಎಳನೀರಿಗೆ ಬೆಲ್ಲ ಮತ್ತು ಅರ್ಧ ಚಮಚ ಕೊತ್ತಂಬರಿ ಬೀಜದ ಪುಡಿಯನ್ನು ಸೇರಿಸಿ ದಿನಕ್ಕೆರಡು ಬಾರಿ ಕುಡಿದರೆ ಉರಿಮೂತ್ರ ಕಡಿಮೆಯಾಗುತ್ತದೆ.
– ಒಂದು ಬಟ್ಟಲು ಎಳನೀರಿಗೆ ಮೂರ್ನಾಲ್ಕು ಚಿಟಿಕೆ ಏಲಕ್ಕಿ ಪುಡಿ ಮತ್ತು ಎರಡು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ವಾಂತಿ ನಿಲ್ಲುತ್ತದೆ.
– ತೆಂಗಿನಕಾಯಿ ತುರಿಯನ್ನು ಎಳನೀರಿನೊಂದಿಗೆ ರುಬ್ಬಿ, ಅದಕ್ಕೆ ಏಲಕ್ಕಿ ಮತ್ತು ಕಲ್ಲುಸಕ್ಕರೆ ಬೆರೆಸಿ, ದಿನಕ್ಕೆರಡು ಬಾರಿ ಸೇವಿಸಿದರೆ ಹೊಟ್ಟೆ ಹುಣ್ಣು, ಬಿಕ್ಕಳಿಕೆ, ನಿದ್ರಾಹೀನತೆ ಸಮಸ್ಯೆ ಗುಣವಾಗುತ್ತದೆ.

Advertisement

– ಗೀತಾ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next