Advertisement
ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಬೆಳ್ಳಾರೆ ಹೋಲಿ ಕ್ರಾಸ್ ಚರ್ಚ್‌ನಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿದರು. ಏಸು ಕ್ರಿಸ್ತರು ತನ್ನ ಶಿಷ್ಯರ ಪಾದ ತೊಳೆದ ಆಚರಣೆಯ ಸ್ಮರಣಾರ್ಥವಾಗಿ ಬಿಷಪ್ ಅವರು 12 ಮಂದಿ ಕ್ರಿಸ್ತ ಅನುಯಾಯಿಗಳ ಪಾದ ತೊಳೆದರು.
Related Articles
Advertisement
ಇದೇ ರೀತಿ ಎಲ್ಲ ಚರ್ಚ್‌ಗಳಲ್ಲಿ ಹಾಗೂ ಸಿಎಸ್‌ಐ, ಪ್ರೊಟೆಸ್ಟೆಂಟ್ ಸಭೆಯ ಚರ್ಚ್‌ಗಳಲ್ಲಿ ಸಂಜೆ ಹೊತ್ತು ಪವಿತ್ರ ಗುರುವಾರದ ಆಚರಣೆಯಲ್ಲಿ ಯೇಸುವಿನ ಕೊನೆಯ ಭೋಜನದ ವಿಧಿವಿಧಾನ ನಡೆಯಿತು.
ಇಂದು “ಗುಡ್ ಫ್ರೈಡೇ‘
ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಪ್ರಯುಕ್ತ ಮಾ. 29ರಂದು “ಗುಡ್ ಫ್ರೈಡೆ’ ಆಚರಿಸಲಾಗುತ್ತದೆ. ಚರ್ಚ್ ಗಳಲ್ಲಿ ಶಿಲುಬೆ ಹಾದಿ, ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ ನಡೆಸಲಾಗುತ್ತದೆ. ಈ ದಿನ ಕ್ರೈಸ್ತರು ಉಪವಾಸ ವ್ರತ ಆಚರಿಸುತ್ತಾರೆ. ಇಂದು ಪವಿತ್ರ ಸಭೆಯಲ್ಲಿ ಬಲಿಪೂಜೆಗಳು ನಡೆಯುತ್ತಿಲ್ಲ.ಮಂಗಳೂರಿನ ಬಿಷಪ್ ಅವರು ಬಿಷಪ್ಸ್ ಹೌಸ್‌ನ ಚಾಪೆಲ್‌ನಲ್ಲಿ ಪ್ರಾರ್ಥನೆ ಮತ್ತು ಪ್ರವಚನ ನೀಡಲಿದ್ದಾರೆ. ಮಾ. 29ರಂದು ಪವಿತ್ರ ಸಭೆಯಲ್ಲಿ ಬಲಿಪೂಜೆಗಳು ಇರುವುದಿಲ್ಲ. ಮಾ. 30ರಂದು ಈಸ್ಟರ್ ಜಾಗರಣೆಯ ಬಲಿಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ನಡೆಸಿಕೊಡಲಿದ್ದಾರೆ.
ಉಡುಪಿಯಲ್ಲಿ ಆಚರಣೆ
ಉಡುಪಿ: ಉಡುಪಿ ಧರ್ಮಪ್ರಾಂತದ ಪ್ರಧಾನ ಧಾರ್ಮಿಕ ಕಾರ್ಯಕ್ರಮ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ ನಲ್ಲಿ ಧರ್ಮಾಧ್ಯಕ್ಷ ರ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ನಡೆಯಿತು. ಧರ್ಮಾಧ್ಯಕ್ಷರು 12 ಮಂದಿ ಪ್ರೇಷಿತರ (ವಿಶ್ವಾಸಿಗಳು) ಪಾದಗಳನ್ನು ತೊಳೆಯುವ ಮೂಲಕ ಏಸುಕ್ರಿಸ್ತರು ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶ ನೀಡಿ, ಯೇಸು ಸ್ವಾಮಿ ಲೋಕಕಲ್ಯಾಣಕ್ಕಾಗಿ ತನ್ನನ್ನು ತಾನೇ ಈ ಲೋಕಕ್ಕೆ ಅರ್ಪಿಸಿದರು.
ಅಂತೆಯೇ ನಾವು ನಮ್ಮ ಜೀವನವನ್ನು ಪರರ ಒಳಿತಿಗಾಗಿ ಜೀವಿಸುವ ಮೂಲಕ ಮಾದರಿಯಾಗಬೇಕು ಎಂದರು. ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ವಂ| ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ| ಜೋಯ್ ಅಂದ್ರಾದೆ, ನಿವೃತ್ತ ಧರ್ಮಗುರು ವಂ| ಲಾರೆನ್ಸ್ ರಾಡ್ರಿಗಸ್ ಉಪಸ್ಥಿತರಿದ್ದರು.
ಬೆಳ್ತಂಗಡಿಯಲ್ಲಿ ಆಚರಣೆ
ಬೆಳ್ತಂಗಡಿ: ಯೇಸುವಿನ ಪ್ರೀತಿಯ ಸ್ಮರಣೆಯ ಅನುಷ್ಠಾನವಾದ ಪಾಸ್ಕ ಹಬ್ಬದ ಆಚರಣೆಯ ಪ್ರಯುಕ್ತ ಬೆಳ್ತಂಗಡಿ ಸಂತ ಲಾರೆನ್ಸ್‌ರ ಪ್ರಧಾನ ದೇವಾಲಯದಲ್ಲಿ ಧರ್ಮಾಧ್ಯಕ್ಷರಾದ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ ಅವರು 12 ಮಂದಿ ವಿಶ್ವಾಸಿಗಳ ಪಾದಗಳನ್ನು ತೊಳೆಯುವ ಮೂಲಕ ಹಬ್ಬಕ್ಕೆ ವಿಶೇಷ ಮಹತ್ವ ನೀಡಿದರು. ಬಳಿಕ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದರು. ಮಹಾದೇವಾಲಯದ ವಿಕಾರ್ ವಂ| ಥಾಮಸ್, ವಂ| ಕುರಿಯಾಕೋಸ್, ವಂ| ಟೋಮಿ, ಹೆಚ್ಚಿನ ಸಂಖ್ಯೆಯಲ್ಲಿ ಧರ್ಮ ಭಗಿನಿಯರು ಪಾಲ್ಗೊಂಡರು.