ಮಹಾನಗರ: ಕ್ರೈಸ್ತರು ಶುಭ ಶುಕ್ರವಾರವನ್ನು ಆಚರಿಸಿದರು. ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನವನ್ನು ಸ್ಮರಿಸಿ ಚರ್ಚ್‌ಗಳಲ್ಲಿ ದಿನವಿಡೀ ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಧ್ಯಾನ, ಉಪವಾಸ
ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ “ಶಿಲುಬೆಯ ಹಾದಿ’ (ವೇ ಆಫ್ ದಿ ಕ್ರಾಸ್) ಆಚರಣೆಯನ್ನು ಚರ್ಚ್ ಮತ್ತು ಚರ್ಚ್ ಆವರಣದಲ್ಲಿ ನಡೆಸುವ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಯಾತನೆಯನ್ನು ಸ್ಮರಿಸಿದರು. ಜತೆಗೆ ಈ ದಿನವನ್ನು ಧ್ಯಾನ ಮತ್ತು ಉಪವಾಸದ ಮೂಲಕ ಕಳೆದರು.
ಮಂಗಳೂರಿನ ಬಿಷಪ್ ರೆ| ಡಾ| ಪೀಟರ್ ಪಾವ್ ಸಲ್ಡಾನ್ಹಾ ಅವರು ಕೊಡಿಯಾಲಬೈಲ್‌ನ ಬಿಷಪ್ಸ್ ಹೌಸ್ ಚಾಪೆಲ್‌ನಲ್ಲಿ ಮಧ್ಯಾಹ್ನ ನಡೆದ ಶಿಲುಬೆಯ ಹಾದಿ ಮತ್ತು ಸಂಜೆ ನಡೆದ ಪ್ರಾರ್ಥನ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ರೊಜಾರಿಯೊ ಕೆಥೆಡ್ರಲ್, ಮಿಲಾಗ್ರಿಸ್, ಬೆಂದೂರು, ಕುಲಶೇಖರ, ಉರ್ವ, ಅಶೋಕನಗರ, ಕೂಳೂರು, ಬೋಂದೆಲ್, ಕಾಸ್ಸಿಯಾ, ವೆಲೆನ್ಸಿಯಾ, ಆಂಜೆಲೋರ್, ಪಾಲ್ದನೆ, ವಾಮಂಜೂರು, ಪೆರ್ಮನ್ನೂರು, ಪಾನೀರ್, ಮುಡಿಪು, ಪೇಜಾವರ, ಬಜಪೆ, ಮುಕ್ಕ ಮತ್ತಿತರ ಚರ್ಚ್‌ಗಳಲ್ಲಿ ಶುಭ ಶುಕ್ರವಾರದ ಕಾರ್ಯಕ್ರಮಗಳು ಜರಗಿದ್ದು, ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಬಂಧ ಪಟ್ಟ ಚರ್ಚ್‌ಗಳ ಧರ್ಮಗುರುಗಳು ನೇತೃತ್ವ ವಹಿಸಿದ್ದರು.