Advertisement
ಕರ್ತನಾದ ಯೇಸು ಕ್ರಿಸ್ತರು ಶಿಲುಬೆಯ ಮೇಲೆ ಅತ್ಯಂತ ನೋವಿನಿಂದ ಮತ್ತು ಹಿಂಸಾತ್ಮಕವಾಗಿ ಸಾವನ್ನಪ್ಪಿದ ಆ ದಿನವು ಸಾಮಾನ್ಯವಾಗಿ “ಶುಭ ‘ ಶುಕ್ರವಾರ ಎನಿಸದು. ಮರಣದ ಸಂಕೇತವಾಗಿ ಆಚರಿಸುವ ಮೌನ, ಉಪವಾಸ, ಪ್ರಾರ್ಥನೆ, ಧ್ಯಾನ ಇತ್ಯಾದಿ ಗುಣ ವಿಶೇಷಗಳನ್ನು ಗಮನಿಸಿದರೆ ಅದು ಶುಭ ದಿನ ಆಗುವುದಾದರೂ ಹೇಗೆ?
Related Articles
Advertisement
ತನ್ನ ಬದುಕು ಯಾತನಾಮಯವಾಗಿ ಕೊನೆಗೊಳ್ಳುವುದೆಂದು ಯೇಸು ಅವರಿಗೆ ತಿಳಿದಿತ್ತೇ? :
ತನ್ನನ್ನು ಅವಮಾನಿಸಿ, ಚಾಟಿಯಿಂದ ಹೊಡೆದು ಮರಣಕ್ಕೆ ಒಪ್ಪಿಸಲಾಗುತ್ತದೆ ಎಂಬುದಾಗಿ ಯೇಸು ಮೂರು ಬಾರಿ ಭವಿಷ್ಯ ನುಡಿದಿದ್ದರು; ಆದರೆ ಅವರು ಮೂರನೇ ದಿನ ಪುನರುತ್ಥಾನಗೊಂಡಿದ್ದಾರೆ.
ತಾನು ದೇವಪುತ್ರ ಎಂದು ಸತ್ಯಹೇಳಿ, ಪಾಪಿಗಳಿಗೆ ಮತ್ತು ದೀನ ದಲಿತರಿಗೆ ದೇವರ ನಿಶ್ಶರ್ತ ಪ್ರೀತಿಯನ್ನು ಪ್ರಕಟ ಪಡಿಸಿದ್ದಕ್ಕಾಗಿ ತಾನು ಸುತ್ತಮುತ್ತಲ ಜನರ ವಿರೋಧ ಕಟ್ಟಿಕೊಳ್ಳುತ್ತಿದ್ದೇನೆ ಎಂಬುದನ್ನು ಯೇಸು ಅರಿತಿದ್ದರು. ನೀತಿವಂತರೆಂದು ಹೇಳಿ ಕೊಳ್ಳುತ್ತಿರುವವರೇ ತನ್ನ ವಿರುದ್ಧ ತಿರುಗಿ ಬೀಳುತ್ತಾರೆಂಬುದೂ ಅವರಿಗೆ ಗೊತ್ತಿತ್ತು. ಆದರೆ ಸಮಾಜದಲ್ಲಿ ಕಷ್ಟದಲ್ಲಿರುವ ಜನರೊಂದಿಗಿನ ಅವರ ಸಂಬಂಧವು ಸಂಕಷ್ಟಗಳನ್ನು ತಂದೊಡ್ಡಿತು ಹಾಗೂ ಸಾವಿನಲ್ಲಿ ಕೊನೆಗೊಂಡಿತು.
ಯೇಸು ತಾನು ಮೇಲಕ್ಕೆ ಎತ್ತಲ್ಪಡುವೆನು ಎಂದು ಸಾಂಕೇತಿಕವಾಗಿ ಆಡಿದ ಮಾತು ಶಿಲುಬೆಯ ಮೇಲೆ ಅವರು ಸಾವನ್ನಪ್ಪುತ್ತಾರೆ ಎನ್ನುವುದನ್ನು ಸೂಚಿಸಿತ್ತು ಹಾಗೂ ಇದು ಅವರನ್ನು ಮಹಿಮೆ ಗೊಳಪಡಿಸುವ ಸಮಯವೂ ಆಗಿತ್ತು (ಯೊಹಾನ 12:33-34). ಪುನರುತ್ಥಾನ ಆಗಬೇಕಾದರೆ ಅಲ್ಲಿ ಕಷ್ಟ, ಸಂಕಷ್ಟ ಮತ್ತು ಸಾವು ಇರಲೇ ಬೇಕು. ಸ್ವರ್ಗದಲ್ಲಿರುವ ತನ್ನ ತಂದೆ ತನ್ನನ್ನು ಸಮಾಧಿಯಲ್ಲಿಯೂ ಕೈಬಿಡಲಾರನು ಹಾಗೂ ತನ್ನ ಶರೀರವು ಕೊಳೆತು ಹೋಗದಂತೆ ನೋಡಿಕೊಳ್ಳುತ್ತಾನೆ ಎಂಬ ಅಚಲವಾದ ನಂಬಿಕೆ ಯೇಸು ಅವರಲ್ಲಿತ್ತು. ಪರರ ಕಷ್ಟದಲ್ಲಿ ನೆರವಾಗಲು, ತಪ್ಪು ಮಾಡಿದವರನ್ನು ಕ್ಷಮಿಸಲು ಹಾಗೂ ಸಹಬಾಳ್ವೆಯನ್ನು ಮಾಡಲು ಯೇಸು ಕಲಿಸಿದ್ದರು. ಅಲ್ಲದೆ ತನ್ನ ವೈರಿಗಳನ್ನು ಶಿಲುಬೆಯಲ್ಲಿರುವಾಗಲೇ ಕ್ಷಮಿಸಿದ್ದರು. ಆದರೆ ಇಂದು ವಿಶ್ವದೆಲ್ಲೆಡೆ ಪ್ರತ್ಯೇಕತಾವಾದ ಮತ್ತು ಹಿಂಸೆಯನ್ನು ಪ್ರಚೋದಿಸಲಾಗುತ್ತದೆ. ಅಗೌರವ ಮತ್ತು ದ್ವೇಷದ ವಾತಾವರಣ ವ್ಯಾಪಕವಾಗಿದೆ. ಸಂಪೂರ್ಣ ಮಾನವ ಕುಲವನ್ನು ದೇವರೊಂದಿಗೆ ಮತ್ತು ಇತರರ ಜತೆ ಸಮನ್ವಯಗೊಳಿಸಲು ಯೇಸು ಕ್ರಿಸ್ತರು ಶಿಲುಬೆಯ ಮೇಲೆ ಮರಣವನ್ನಪ್ಪಿದರು.
ಈ ಶುಭ ಶುಕ್ರವಾರವು ದ್ವೇಷ ಮತ್ತು ಹಿಂಸೆಯನ್ನು ದೂರ ಮಾಡಿ ನಮ್ಮ ನಾಡಿನಲ್ಲಿ ಸಮನ್ವಯದ ಮತ್ತು ಶಾಂತಿಯುತ ಸಹಬಾಳ್ವೆಗೆ ಶುಭಾವಸರವನ್ನು ಒದಗಿಸಲಿ. ದೇವರು ಒಲ್ಲದ ದ್ವೇಷ ಮತ್ತು ಪ್ರತ್ಯೇಕತಾವಾದದ ಬದಲು ಎಲ್ಲರನ್ನು ಪ್ರೀತಿಸಿ, ಅನುಕಂಪ ತೋರಿ ಬದುಕುವ ಚಾಂಪಿಯನ್‌ಗಳಾಗೋಣ.
-ಅತಿ ವಂ| ಪೀಟರ್ ಪಾವ್ಲ್ ಸಲ್ಡಾನ್ಹಾ
ಧರ್ಮಾಧ್ಯಕ್ಷರು, ಮಂಗಳೂರು ಧರ್ಮ ಪ್ರಾಂತ
***************************************************************************
*
*
ಮನುಕುಲಕ್ಕೆ ಸಂತೋಷ ನೀಡುವ ದಿನ :
ಇಂದು “ಗುಡ್ ಫ್ರೈಡೆ’ ಅಂದರೆ ಶುಭ ಶುಕ್ರವಾರ. ಕ್ರೈಸ್ತ ಬಾಂಧವರಿಗೆಲ್ಲರಿಗೂ ಈ ದಿನದ ಶುಭಾಶಯಗಳು.
ಶುಭ ಶುಕ್ರವಾರ ಜಗತ್ ರಕ್ಷಕರಾದ ಯೇಸು ಸ್ವಾಮಿ ಶಿಲುಬೆಯ ಮೇಲೆ ಮರಣವನ್ನಪ್ಪಿದ ದಿನ. ಸಹಜವಾಗಿ ದುಃಖದ ದಿನವೆಂದು ಪರಿಗಣಿಸಬೇಕಾದ ಈ ದಿನವನ್ನು ನಾವೇಕೆ ಶುಭ ಶುಕ್ರವಾರ ಎನ್ನುತ್ತೇವೆ? ಇದಕ್ಕೆ ಉತ್ತರ ಸಿಗಬೇಕಿದ್ದರೆ ಮಾನವ ಜೀವನದ ನೈಜ ಅರ್ಥವನ್ನು ತಿಳಿದುಕೊಳ್ಳಬೇಕು.
ದೇವರು ಮನುಷ್ಯನನ್ನು ವಿಶೇಷವಾದ ಸ್ಥಾನ, ಗೌರವಗಳೊಂದಿಗೆ ಸೃಷ್ಟಿಸಿದರು. ಮನುಷ್ಯನು ನಿಜವಾಗಿ ದೇವರ ಮಹಿಮೆಯನ್ನು ಈ ಜಗದಲ್ಲಿ ಸಾರುವ ಸೃಷ್ಟಿ. ಆದರೆ ಮಾನವನು ತನ್ನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ದೇವರಿಗೆ ವಿರುದ್ಧವಾಗಿ ಪಾಪಗೈದು ಎಲ್ಲ ರೀತಿಯ ಕೆಡುಕುಗಳಿಗೆ ಗುಲಾಮನಾದ. ನರಕಕ್ಕೆ ಬಾಧ್ಯಸ್ಥನಾದ. ಆದರೆ ಕರುಣಾಮಯಿ ದೇವರು ಮಾನವನನ್ನು ಕತ್ತಲೆಯಿಂದ ಬಿಡುಗಡೆಗೊಳಿಸಲು ಯೋಜನೆಯನ್ನು ಹಾಕಿದರು. ಪಾಪಕ್ಕೆ ಪರಿಹಾರವಾಗಲೇ ಬೇಕು. ಆದರೆ ಪಾಪದ ಕಾಠಿನ್ಯ ಅತೀ ಘೋರವಾಗಿದ್ದುದರಿಂದ ಮಾನವನು ಇದಕ್ಕೆ ಪರಿಹಾರ ಮಾಡಲು ನಿಸ್ಸಹಾಯಕನಾಗಿದ್ದಾನೆ.
ಮಾನವನ ಈ ನಿಸ್ಸಹಾಯಕ ಸ್ಥಿತಿಯನ್ನು ಮನಗಂಡು ದೇವರು ತನ್ನ ಏಕ ಮಾತ್ರ ಪುತ್ರನಾದ ಯೇಸು ಅವರನ್ನು ಈ ಲೋಕಕ್ಕೆ ಕಳುಹಿಸಿದರು. ಯೇಸು ಬಂದು ಮಾನವನ ಪಾಪಕ್ಕೆ ಪರಿಹಾರವಾಗಿ ತಮ್ಮ ಜೀವವನ್ನು ಬಲಿಯಾಗಿ ಅರ್ಪಿಸಿದರು.
ಈ ಪ್ರಾಣತರ್ಪಣದಿಂದ ಮಾನವನ ಪಾಪಕ್ಕೆ ಪರ್ಯಾಪ್ತವಾದ ಪರಿಹಾರವಾಯಿತು. ಮಾನವನು ಸ್ವರ್ಗಕ್ಕೆ ಅರ್ಹನಾದನು. ಆದುದರಿಂದ ಯೇಸು ಸ್ವಾಮಿಯವರ ಮರಣವು ಮಾನವ ಕುಲಕ್ಕೆ ಸಂತೋಷವನ್ನು ಕೊಡುವಂತಹ ದಿನವಾಗಿದೆ. ಯೇಸು ಮರಣವನ್ನಪ್ಪಿದ ದಿನ ಶುಕ್ರವಾರವಾಗಿತ್ತು. ಆದುದರಿಂದ ಈ ಶುಕ್ರವಾರವನ್ನು “ಶುಭ ಶುಕ್ರವಾರ’ ಎಂದು ನಾವು ಕರೆಯುತ್ತೇವೆ. ನಾವು ಮನುಜರೆಲ್ಲರೂ ತನ್ನ ಪ್ರಾಣವನ್ನು ನಮಗಾಗಿ ಧಾರೆಯೆರೆದ ಯೇಸುವನ್ನು ನಮಿಸಿ, ಆರಾಧಿಸಿ ಅವರಿಗೆ ಚಿರಋಣಿಗಳಾಗಿರಬೇಕು.
ಮಾನವನ ಪಾಪಕ್ಕೆ ಪರಿಹಾರವಾದರೂ ಇವತ್ತು ಕೂಡ ಮನುಷ್ಯನು ಅನೇಕ ರೀತಿಯ ಕೆಡುಕುಗಳಿಗೆ ಈಡಾಗಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ಮಾನವನಿಗೆ ದೇವರು ಉದಾರವಾಗಿ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಮಾನವನ ಈ ಸ್ವಾತಂತ್ರ್ಯವನ್ನು ದೇವರು ಗೌರವಿಸಿದ್ದಾರೆ. ಬಲವಂತವಾಗಿ ಮಾನವನಿಗೆ ದೇವರು ಏನನ್ನೂ ಸಾಮಾನ್ಯವಾಗಿ ಕೊಡಲು ಬಯಸುವುದಿಲ್ಲ. ತನಗಿರುವ ಸ್ವಾತಂತ್ರ್ಯ ಮತ್ತು ಶಕ್ತಿಯಿಂದ ದೇವರು ಕೊಡುವ ಪ್ರಸಾದ ವರವನ್ನು ನಮ್ರತೆಯಿಂದ ಸ್ವೀಕರಿಸಿ ತನ್ನ ಜೀವನದಲ್ಲಿ ದೇವರ ಆಜ್ಞೆಗಳನ್ನು ಪಾಲಿಸಿ ಜೀವಿಸಿದರೆ ಮಾತ್ರ ದೇವರ ಪುತ್ರರಾದ ಯೇಸು ನಮಗೆ ಗಳಿಸಿಕೊಟ್ಟ ರಕ್ಷಣೆ ಮತ್ತು ನೆಮ್ಮದಿ ಅನುಭವಿಸಲು ಸಾಧ್ಯವಾಗುತ್ತದೆ. ಈ ಪ್ರಸಾದ ವರವನ್ನು ದೇವರು ಇಚ್ಛಿಸುವವರಿಗೆ ಉದಾರವಾಗಿ ಕೊಡುತ್ತಾರೆ. ನಾವೆಲ್ಲರೂ ಈ ಸೌಜನ್ಯ ವರಕ್ಕೆ ಮನಸಾರೆ ಆಕಾಂಕ್ಷಿಗಳಾಗಿ ಅವುಗಳನ್ನು ತೆರೆದ ಹೃದಯದಿಂದ ಸ್ವೀಕರಿಸಬೇಕು. ಯಾವ ಒಳಿತನ್ನೂ ಮಾನವನಿಗೆ ನಿರಾಕರಿಸಲು ಇಚ್ಛಿಸದ ದೇವರು ಹೇರಳವಾಗಿ ಈ ವರ ಪ್ರಸಾದವನ್ನು ನಮಗೆ ನೀಡುವರು.
ಶುಭ ಶುಕ್ರವಾರದಂದು ದೇವರು ನೀಡುವ ಈ ಅಪ್ರತಿಮ ಪ್ರೀತಿಯ ಕೊಡುಗೆಯನ್ನು ನಮ್ಮ ಹೃದಯದಲ್ಲಿ ಸ್ವೀಕರಿಸಿ ಶಾಂತಿ ಮತ್ತು ಪ್ರೀತಿಯ ಜೀವನವನ್ನು ಸಾಗಿಸೋಣ. ಸರ್ವರಿಗೂ ಮಗದೊಮ್ಮೆ ಶುಭ ಶುಕ್ರವಾರದ ಆಶೀರ್ವಾದಗಳನ್ನು ಪ್ರಾರ್ಥಿಸುತ್ತೇನೆ.
ಅತಿ ವಂ| ಡಾ| ಲಾರೆನ್ಸ್ ಮುಕ್ಕುಯಿ
ಧರ್ಮಾಧ್ಯಕ್ಷರು, ಬೆಳ್ತಂಗಡಿ ಧರ್ಮ ಪ್ರಾಂತ