Advertisement

ಮತ್ತೆರಡು ದಿನ ಉತ್ತಮ ಮಳೆ ಸಾಧ್ಯತೆ

01:03 AM Jul 21, 2019 | Sriram |

ಮಂಗಳೂರು/ಉಡುಪಿ/ ಕಾಸರಗೋಡು: ಕರಾವಳಿಯಾದ್ಯಂತ ಶನಿವಾರವೂ ಉತ್ತಮ ಮಳೆಯಾಗಿದೆ.ಮಂಗಳೂರು ನಗರದಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಸಾಧಾರಣ ಮಳೆಯಾಗಿದೆ. ಉಡುಪಿಯಲ್ಲಿ ಬೆಳಗ್ಗೆ ಉತ್ತಮ ಮಳೆಯಾಗಿ ಸಂಜೆ ಸಾಧಾರಣ ಮಳೆಯಾಯಿತು. ಸುಳ್ಯ,ಪುತ್ತೂರು, ಉಪ್ಪಿನಂಗಡಿ, ಮೂಲ್ಕಿ, ಕಿನ್ನಿಗೋಳಿ, ಬೆಳ್ತಂಗಡಿ, ಧರ್ಮಸ್ಥಳ, ಸುರತ್ಕಲ್‌,ಗುರುವಾಯನಕೆರೆ, ಉಳ್ಳಾಲ, ಬಿ.ಸಿ. ರೋಡ್‌,ವಿಟ್ಲ, ಕನ್ಯಾನ, ಕಾಸರಗೋಡು ಮತ್ತು ಸುತ್ತಮುತ್ತ ಉತ್ತಮ ಮಳೆಯಾಗಿದೆ.

Advertisement

ದ.ಕ., ಉಡುಪಿ ಜಿಲ್ಲೆಯಲ್ಲಿ ಜು. 20ರಿಂದ 22ರ ವರೆಗೆ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿತ್ತು. ದ.ಕ. ಜಿಲ್ಲಾಡಳಿತ ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು.

ಕಾರ್ಮಿಕರು ಪಾರು
ಶುಕ್ರವಾರ ಉರ್ವಸ್ಟೋರ್‌ನಲ್ಲಿರುವ ಆಕಾಶವಾಣಿ ವಸತಿಗೃಹ ಬಳಿ ಆವರಣ ಗೋಡೆ ಕುಸಿದಿದ್ದು, ವಸತಿಗೃಹಗಳು ಅಪಾಯದಲ್ಲಿವೆ. ನಿರ್ಮಾಣ ಹಂತದ ಬಹುಮಹಡಿ ವಸತಿ ಸಮುಚ್ಚಯವೊಂದಕ್ಕೆ ಸೇರಿದ ಆವರಣ ಗೋಡೆ ಇದಾಗಿದೆ. ಸುಮಾರು 50 ಕಾರ್ಮಿಕರು ಅದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದು, ಗೋಡೆ ಕುಸಿಯುವ ಕೆಲವೇ ನಿಮಿಷಗಳ ಮೊದಲು ಅಲ್ಲಿಂದ ತೆರಳಿದ್ದರು.

ಶುಕ್ರವಾರ ರಾತ್ರಿ ಮಳೆಗೆ ಸಜಿಪನಡು ಗ್ರಾಮದ ಶಶಿಕಲಾ ಅವರ ಕಚ್ಚಾಮನೆಗೆ ಹಾನಿಯಾಗಿ 2,300 ರೂ. ನಷ್ಟವಾಗಿದೆ.

ಮನೆಗಳು ಜಲಾವೃತ
ಉಡುಪಿ, ಮಣಿಪಾಲ, ಕೋಟ, ಕಾಪು, ಬ್ರಹ್ಮಾವರ, ಕೊಲ್ಲೂರು, ಜಡ್ಕಲ್‌, ವಂಡ್ಸೆ, ಮುಂಡ್ಕೂರು, ಬೆಳ್ಮಣ್ಣು, ಕಾರ್ಕಳ, ತೆಕ್ಕಟ್ಟೆಮೊದಲಾದೆಡೆ ಉತ್ತಮ ಮಳೆಯಾಯಿತು. ವಾರಾಹಿ ನದಿ ತುಂಬಿ ಹರಿಯುತ್ತಿದೆ. ಕಟಪಾಡಿ ಕಲ್ಲಾಪು ಬಳಿ ಕೃತಕ ನೆರೆ ಸೃಷ್ಟಿಯಾಗಿದ್ದು, ಮನೆಯೊಂದರ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಬೆಳಪು – ಮೂಳೂರು ಬೈಲು ಜಲಾವೃತವಾಗಿದೆ. ಹಳೆಯಂಗಡಿ ಕೊಳುವೈಲಿನಲ್ಲಿಯೂ ಮನೆಯೊಂದು ಜಲಾವೃತವಾಗಿದ್ದು, ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮನೆಯ ವಸ್ತುಗಳಿಗೆ ಹಾನಿಯಾಗಿದೆ. ಬೆಳ್ಮಣ್‌ನ ಕಡಂದಲೆಯಲ್ಲಿ ನಲ್ಲೆಗುತ್ತು ಕಿಂಡಿ ಅಣೆಕಟ್ಟು ಮುಳುಗಿ ಸಂಚಾರ ಅಸ್ತವ್ಯಸ್ತವಾಗಿದೆ.

Advertisement

ರಸ್ತೆಗೆ ಬಿದ್ದ ಮರ: ವಿದ್ಯುತ್‌ ತಂತಿಗೆ ಹಾನಿ
ಕುಂದಾಪುರ: ಬೈಂದೂರು-ವೀರಾಜಪೇಟೆ ರಾಜ್ಯ ಹೆ¨ªಾರಿಯ ಬೆಳ್ವೆ ಪೇಟೆಯಲ್ಲಿ ಶನಿವಾರ ರಾತ್ರಿ ಬೃಹತ್‌ ಮರ ಮುರಿದು ಬಿದ್ದು, ಸಂಚಾರಕ್ಕೆ ಅಡಚಣೆಯಾಯಿತು.ಈ ವೇಳೆ ವಿದ್ಯುತ್‌ ತಂತಿಗೂ ಹಾನಿಯಾಗಿದೆ.

ರಾ.ಹೆ.ಯಲ್ಲಿ ಕೃತಕ ನೆರೆ
ರಾ.ಹೆ. 66ರ ತೊಕ್ಕೊಟ್ಟು ಜಂಕ್ಷನ್‌, ಕಲ್ಲಾಪು, ಕುಂಪಲ ಬೈಪಾಸ್‌ ಬಳಿ ಕೃತಕ ನೆರೆಯಿಂದ ವಾಹನ ಚಾಲಕರು, ಪಾದಚಾರಿ ಗಳು ಕಷ್ಟಪಡುವಂತಾಗಿದೆ. ಕುಂಪಲ ಸಂಪರ್ಕ ರಸ್ತೆ ಕೆರೆಯಂತಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ  ರೆಡ್‌ ಅಲರ್ಟ್‌
ಕಾಸರಗೋಡು: ಬಿರುಸಿನ ಗಾಳಿಮಳೆ ಹಿನ್ನೆಲೆಯಲ್ಲಿ ಜು. 21ರಂದು ಕೂಡ ಕಾಸರಗೋಡು, ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. 24 ತಾಸುಗಳಲ್ಲಿ 204 ಮಿ.ಮೀ.ಗಿಂತಲೂ ಅ ಧಿಕ ಮಳೆ ಸಾಧ್ಯತೆಯಿದ್ದು, ಸಾರ್ವಜನಿಕರು ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ.

ಮಧೂರು: 33 ಕುಟುಂಬ ಸ್ಥಳಾಂತರ
ಮಧೂರು ಪಟ್ಲ ಪ್ರದೇಶ ಜಲಾವೃತವಾಗಿದ್ದು, 40 ದಿನದ ಶಿಶು-ತಾಯಿ ಸಹಿತ 33 ಕುಟುಂಬಗಳನ್ನು, ಪರಪ್ಪ ಗ್ರಾಮದ ಮುಂಡತ್ತಡ್ಕದ ಕುಟುಂಬವೊಂದನ್ನು, ಕಾಞಂಗಾಡ್‌ ಅರಯಿ ಸೇತುವೆ ಬಳಿಯ 13 ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.

ಮೀನುಗಾರರಿಗೆ ಎಚ್ಚರಿಕೆ
ಜು. 21ರಂದು ರಾತ್ರಿ 11.30ರ ವರೆಗೆ ಕಡಲತೀರದಲ್ಲಿ 3.5ರಿಂದ 4.3 ಮೀಟರ್‌ ಎತ್ತರದ ತೆರೆಗಳು ಏಳುವ ಸಾಧ್ಯತೆಗಳಿವೆ. ಕೇರಳ ಕಡಲ ತೀರಗಳಲ್ಲಿ ಪಶ್ಚಿಮ ದಿಕ್ಕಿನಿಂದ ತಾಸಿಗೆ 40ರಿಂದ 50 ಕಿ.ಮೀ. ವರೆಗೆ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ತೆರಳಕೂಡದು ಎಂದು ಕೇಂದ್ರ ಹವಾಮಾನ ವರದಿ ತಿಳಿಸಿದೆ.

ಕೊಡಗು: ತೀವ್ರತೆ ಕಳೆದುಕೊಂಡ ಮಳೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಟ್ಟ ಮಂಜಿನೊಂದಿಗೆ ಹದವಾಗಿ ಮಳೆಯಾಗುತ್ತಿದೆ. ಶುಕ್ರವಾರ ರೆಡ್‌ ಅಲರ್ಟ್‌ ಘೋಷಿಸಿದ್ದ ಹವಾಮಾನ ಇಲಾಖೆ ಇಂದು ಅದನ್ನು ಆರೆಂಜ್‌ ಅಲರ್ಟ್‌ಗೆ ಇಳಿಸಿದೆ. ಜಿಲ್ಲೆಯ ಜನತೆ ಮತ್ತು ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ ಮತ್ತು ಭಾಗಮಂಡಲ, ತಲಕಾವೇರಿ ವ್ಯಾಪ್ತಿ ಯಲ್ಲಿ ಉತ್ತಮ ಮಳೆಯಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next