ಕಾಪು: ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆ ಪ್ರಮುಖ ಉದ್ಯಮವಾಗಿ ಬೆಳೆಯುತ್ತಿದೆ. ಹೈನುಗಾರಿಕೆ ಬೆಳೆಸಲು ಸರಕಾರ ಉತ್ತಮ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಪ್ರಾಕೃತಿಕ ಅವಘಡ ಗಳಿಂದಾಗಿ ದನ, ಹೋರಿ , ಕೋಣಗಳು ಆಕಸ್ಮಿಕವಾಗಿ ಮೃತಪಟ್ಟರೆ ಆ ಕುರಿತಾಗಿ ಪಶು ವೈದ್ಯರಿಗೆ ಶೀಘ್ರ ಮಾಹಿತಿ ನೀಡಿದಲ್ಲಿ ಸರಕಾರದಿಂದ ಗರಿಷ್ಠ 10 ಸಾವಿರ ರೂ. ಪರಿಹಾರ ಪಡೆಯಲು ಸಾಧ್ಯಎಂದು ಕಾಪು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ದಯಾನಂದ ಪೈ ತಿಳಿಸಿದರು.
ಮಜೂರು ಗ್ರಾ.ಪಂ. ಸಭಾಭವನ ದಲ್ಲಿ ಜರಗಿದ ದ್ವಿತೀಯ ಗ್ರಾಮಸಭೆಯಲ್ಲಿ ಮಾರ್ಗದರ್ಶಿ ಅಧಿಕಾರಿಯಾಗಿ ಅವರು ಮಾತನಾಡಿದರು.
ವಿಷ ಹಾವು ಕಡಿತ, ಹೊಟ್ಟೆಯುಬ್ಬರ, ನೀರಿನಲ್ಲಿ ಅಥವಾ ಎತ್ತರ ಸ್ಥಳದಿಂದ ಬಿದ್ದು ಮೃತಪಟ್ಟ ಸಂದರ್ಭದಲ್ಲಿ ಈ ಪರಿಹಾರ ನೀಡಲಾಗುತ್ತದೆ. ಮಿಶ್ರತಳಿ ವಿಶೇಷ ಘಟಕ ಯೋಜನೆಯಡಿ ಶೇ. 60ರಷ್ಟು ಸಹಾಯಧನ, ಮಹಿಳಾ ಅಮƒತ ಯೋಜನೆಯಡಿ ಶೇ. 25ರಷ್ಟು ಸಹಾಯಧನವನ್ನು ಮಜೂರು ಗ್ರಾಮದ ಪ. ಜಾತಿ , ಪಂಗಡದ ತಲಾ ಮೂರು ಮಂದಿ ಫಲಾನುಭವಿಗಳು ಪಡೆದಿದ್ದಾರೆ ಎಂದವರು ತಿಳಿಸಿದರು.ಅಂಗನವಾಡಿ ಮೇಲ್ವಿಚಾರಕಿ ಆಶಾಲತಾ, ಮಹಿಳೆಯರು ಮತ್ತು ಮಕ್ಕಳ ಹಿತರಕ್ಷಣೆಗಾಗಿ ಗ್ರಾ.ಪಂ.ಗಳ ಮೂಲಕ ಕಾವಲು ಸಮಿತಿ ರಚಿಸಲಾಗುತ್ತಿದ್ದು ಅದಕ್ಕೆ ನಾಗರಿಕರ ಸಹಕಾರ ಅತ್ಯಗತ್ಯ ಎಂದರು.
ಪಾದೂರು ಗ್ರಾಮಸ್ಥ ಉಮೇಶ್ ಪ್ರಭು, ಪಾದೂರು – ಹೇರೂರು ಗ್ರಾಮದ ಪಾಲಮೆ ಪ್ರದೇಶವು ಮೂಲ ಸೌಕರ್ಯಗಳಿಲ್ಲದೆ ಕುಗ್ರಾಮದಂತಾಗಿದೆ ಹಲವು ರಸ್ತೆಗಳು ಇನ್ನೂ ಡಾಮರು ಕಂಡಿಲ್ಲ. ಉಳಿದಂತೆ ವಳದೂರು ಗ್ರಾಮದಲ್ಲಿ ರಸ್ತೆ, ಸೇತುವೆ ನಿರ್ಮಾಣ, ಪಾದೂರು ನೀರಿನ, ಪಾಲಮೆಯಲ್ಲಿ ವಿದ್ಯುತ್ ಸಮಸ್ಯೆ, ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಉಡುಪಿ ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ.ಪಂ. ಸದಸ್ಯೆ ಶಶಿಪ್ರಭಾ ಶೆಟ್ಟಿ, ಗ್ರಾ. ಪಂ. ಅಧ್ಯಕ್ಷ ಸಂದೀಪ್ ರಾವ್ ಮಾತನಾಡಿದರು. ಕಾಪು ಸಹಾಯಕ ಕೃಷಿ ಅಧಿಕಾರಿ ಪಿ. ಶೇಖರ್, ಕಂದಾಯ ಇಲಾಖೆ, ಕಾಪು ಮೆಸ್ಕಾಂನ ಸತೀಶ್ ಕೆ. ಇಲಾಖಾ ಮಾಹಿತಿ ನೀಡಿದರು.
ಗ್ರಾ.ಪಂ. ಉಪಾಧ್ಯಕ್ಷೆ ಸಹನಾ ತಂತ್ರಿ, ಸದಸ್ಯರಾದ ಗಣೇಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಸುಜಾತಾ ಸುವರ್ಣ, ಅಬ್ದುಲ್ ಹಮೀದ್, ಲಕ್ಷ್ಮೀ, ಭಾಸ್ಕರ್, ಅರುಣಾ ಡಿ., ಮುತ್ತು ಕೊರಗ, ಜಯಂತಿ ನಾಯ್ಕ, ಸುರೇಖ ಎಸ್. ಶೆಟ್ಟಿ, ರೂಪಾ ಉಪಸ್ಥಿತರಿದ್ದರು.
ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್ ಸ್ವಾಗತಿಸಿದರು. ಕಾರ್ಯದರ್ಶಿ ಸೀತಾ ಟಿ. ವರದಿ ವಾಚಿಸಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರತಾಪ್ ಶೆಟ್ಟಿ ವಂದಿಸಿದರು.
ಪೊಲೀಸ್ ಮಿತ್ರ ಯೋಜನೆ
ಗ್ರಾಮೀಣ ಪ್ರದೇಶದಲ್ಲಿ ನಡೆಯು ತ್ತಿರುವ ಪ್ರಕರಣ ಕುಗ್ಗಿಸುವ ನಿಟ್ಟಿನಲ್ಲಿ ಗ್ರಾಮದ ಪ್ರತೀ ವಾರ್ಡ್‌ನಲ್ಲೂ ಪೊಲೀಸ್ ಮಿತ್ರ ಯೋಜನೆ ಅನುಷ್ಠಾನಿಸಲಾಗುತ್ತಿದೆ ಎಂದು ಕಾಪು ಪೊಲೀಸ್ ಠಾಣಾ ಸಿಬಂದಿ ಗಣೇಶ್ ತಿಳಿಸಿದರು.