ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ತಲೆದೋರಿರುವ ಸಮಸ್ಯೆ ಎಂದರೆ, ಪೋಸ್ಟುಗಳಿಗೆ ಬಂದು ಬೀಳುವ “ಅವಹೇಳನಕಾರಿ’, “ಅಸಭ್ಯ’, “ಅನುಚಿತ’ ಮತ್ತು “ಪ್ರಚೋದನಕಾರಿ’ ಕಮೆಂಟ್‌ಗಳು. ಈ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆಗಳು ಎಂದಿನಿಂದಲೂ ನಡೆದೇ ಇವೆ. ಸಾಮಾಜಿಕ ಜಾಲತಾಣಗಳ ನಿರ್ಮಾತೃಗಳೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ನಿಟ್ಟಿನಲ್ಲಿ ಫೇಸ್‌ಬುಕ್ ಒಡೆತನದ ಫೋಟೋ ಶೇರಿಂಗ್ ಜಾಲತಾಣ “ಇನ್‌ಸ್ಟಾಗ್ರಾಂ’ ಮೊದಲ ಹೆಜ್ಜೆಯನ್ನಿಟ್ಟಿದೆ. ಅನುಚಿತ ಕಮೆಂಟ್‌ಗಳ ನಿಯಂತ್ರಣಕ್ಕಾಗಿ ತನ್ನ ಬಳಕೆದಾರರಿಗೆ ಇನ್‌ಸ್ಟಾಗ್ರಾಂ ಎರಡು ಹೊಸ ಸವಲತ್ತುಗಳನ್ನು ನೀಡಲು ನಿರ್ಧರಿಸಿದೆ.
ಮೊದಲನೆಯ ಸವಲತ್ತು ಎಚ್ಚರಿಸುವುದು, ಎರಡನೆಯ ಸವಲತ್ತು ಅನುಚಿತ ಕಮೆಂಟ್ ಹರಡದಂತೆ ತಡೆಯುವುದು.
ಮೊದಲನೆಯ ಸವಲತ್ತು ಬಳಕೆದಾರರು ಅವಹೇಳನಕಾರಿ ಕಮೆಂಟನ್ನು ಟೈಪ್ ಮಾಡುವಾಗಲೇ “ಇದು ಅವಹೇಳನಕಾರಿ ಕಮೆಂಟ್. ಇದರಿಂದ ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ಉಂಟಾಗಬಹುದು’ ಎಂದು ಎಚ್ಚರಿಸುತ್ತದೆ. ಹೀಗಾಗಿ ಟೈಪ್ ಮಾಡುವಾಗಲೇ ಬರುವ ಈ ಎಚ್ಚರಿಕೆಯ ಸಂದೇಶವನ್ನು ಓದಿ ಬಳಕೆದಾರ ಮರುವಿಮರ್ಶೆ ಮಾಡಿಕೊಳ್ಳಲು ಒಂದು ಅವಕಾಶ ಸಿಕ್ಕಂತಾಗುತ್ತದೆ. ಈ ಸವಲತ್ತನ್ನು ಅಳವಡಿಸಲು ಇನ್‌ಸ್ಟಾಗ್ರಾಂ “ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ತಂತ್ರಜ್ಞಾನದ ನೆರವನ್ನು ಪಡೆಯಲಿದೆ.
ರೇಡಿಯೋ, ಪತ್ರಿಕೆಗಳಲ್ಲಿ “ಗಾಳಿಸುದ್ದಿಯನ್ನು ಹರಡದಿರಿ, ಹರಡಲು ಬಿಡದಿರಿ’ ಎಂಬ ಸೂಚನೆಯನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಓದಿರುತ್ತೀರಿ. ಅದನ್ನೇ ಇನ್‌ಸ್ಟಾಗ್ರಾಂ “Restrict’ ಎಂಬ ಹೆಸರಿನಡಿ ಎರಡನೆಯ ಸವಲತ್ತನ್ನಾಗಿ ಬಳಕೆದಾರರಿಗೆ ಒದಗಿಸುತ್ತಿದೆ. ಎಚ್ಚರಿಕೆಯ ಸಂದೇಶವನ್ನು ನಿರ್ಲಕ್ಷಿಸಿ ಬಳಕೆದಾರ ಅನುಚಿತ ಕಮೆಂಟನ್ನು ಪೋಸ್ಟ್ ಮಾಡಿದರೆ ಪೋಸ್ಟ್ ಹಾಕಿದ ಬಳಕೆದಾರ ಆ ಕಮೆಂಟನ್ನು “Restrict’ ಮಾಡಬಹುದು. ಹೆಸರೇ ಸೂಚಿಸುವಂತೆ, ಆಗ ಆ ಕಮೆಂಟು ಯಾರಿಗೂ ಕಾಣಿಸುವುದಿಲ್ಲ, ಆದರೆ ಕಮೆಂಟ್ ಮಾಡಿದಾತನಿಗೆ ಮಾತ್ರವೇ ಕಾಣಿಸುತ್ತದೆ. ತನ್ನ ಕಮೆಂಟನ್ನು “Restrict’ ಮಾಡಲಾಗಿದೆ ಎಂಬುದೂ ಆತನಿಗೆ ತಿಳಿಯುವುದಿಲ್ಲ.
ಬಹಳಷ್ಟು ಸಲ ಅನುಚಿತ ಕಮೆಂಟ್ ಮಾಡಿದ ವ್ಯಕ್ತಿ, ಪೋಸ್ಟ್ ಮಾಡಿದ ವ್ಯಕ್ತಿ ಪರಿಚಿತನೇ ಆಗಿರುತ್ತಾನೆ. ಅಂಥ ಸಮಯದಲ್ಲಿ ಆ ವ್ಯಕ್ತಿಯನ್ನು ಬ್ಲಾಕ್ ಮಾಡುವುದು, ಇಲ್ಲವೇ ಕಮೆಂಟನ್ನು ಡಿಲೀಟ್ ಮಾಡುವುದರಿಂದ ಆ ವ್ಯಕ್ತಿಗೆ ಆ ವಿಷಯ ತಿಳಿದು ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು. ಆದ್ದರಿಂದಲೇ ಬಹಳ ಜಾಣತನದಿಂದ ಯಾರ ಮನಸ್ಸಿಗೂ ಘಾಸಿಯಾಗದಂತೆ ಈ ಎರಡು ಸವಲತ್ತುಗಳನ್ನು ಇನ್‌ಸ್ಟಾಗ್ರಾಂ ನೀಡುತ್ತಿದೆ.