ಚಿತ್ರದುರ್ಗ: ಸತ್‌ಚಿಂತನೆ, ಸದ್ವರ್ತನೆ ನಮ್ಮನ್ನು ಪರಿವರ್ತನೆಯ ಕಡೆಗೆ ಕರೆದುಕೊಂಡು ಹೋಗುತ್ತದೆ. ಪರಿವರ್ತನಾ ತತ್ವದ ಅಡಿಯಲ್ಲಿ ನಮ್ಮ ಬದುಕನ್ನು ಆರಂಭಿಸಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಮುರುಘಾ ಮಠದಲ್ಲಿ ನಡೆಯುತ್ತಿರುವ “ನೀವಿದ್ದಲ್ಲಿಯೇ ಶ್ರಾವಣ’ ಕಾರ್ಯಕ್ರಮದಲ್ಲಿ ಮಾತನಾಡಿದ ಶರಣರು, ಸತ್ ಚಿಂತನೆಗಳು ನಮ್ಮನ್ನು ಆರೋಗ್ಯದ ಕಡೆಗೆ ಕರೆದೊಯ್ಯಬೇಕು. ಸಮ್ಯಕ್ ಜ್ಞಾನವನ್ನು ಪಡೆಯುವ ಮಾರ್ಗಗಳ ಕುರಿತು ಚಿಂತನೆ ನಡೆಸಬೇಕು. ಸತ್ ಚಿಂತನೆಯೇ ಸಂತೃಪ್ತಿಯ ಸಾಧನೆ. ಸತ್
ಚಿಂತನೆ ಸು ರಿಸಿದವರ ಬದುಕು ಗೊಂದಲದ ಗೂಡಾಗುವುದಿಲ್ಲ. ಬಹಳ ಜನರ ಬದುಕಿನಲ್ಲಿ ಗೊಂದಲ ಇದೆ. ಸತ್‌ಚಿಂತನೆ ಇದ್ದಲ್ಲಿ ಘರ್ಷಣೆ ಇರುವುದಿಲ್ಲ. ಜಗಳಮುಕ್ತವಾಗಿರುತ್ತಾರೆ ಎಂದರು.
ವ್ಯಸನಮುಕ್ತ ಮತ್ತು ಸಾಲ ಮುಕ್ತ ಸಮಾಜ ಮೊದಲಾದ ಸತ್ ಚಿಂತನೆ ಬೇಕು. ಇವು ನಮಗೆ ವಿವೇಕಯುಕ್ತ ಜೀವನ ಪರಿಚಯ ಮಾಡಿಕೊಡುತ್ತವೆ. ಸಮುದ್ರದ ಆಳಕ್ಕೆ ಹೋದರೆ ಮುತ್ತು ರತ್ನಗಳು ಸಿಗುತ್ತವೆ. ನಮ್ಮ ಒಳಗೂ ಒಂದು ಅಂತರಂಗ ಇದೆ. ಅಲ್ಲಿಯೂ ಒಂದು ಸಮುದ್ರ ಇದೆ. ಬೌದ್ಧಿಕವಾಗಿರುವ ಸಮುದ್ರ. ಅದರ ಆಳಕ್ಕೆ ಹೋದಾಗ ಅಲ್ಲಿ ಸಂಪತ್ತು ಸಂಪಾದಿಸಬಹುದು. ಸತ್ ಚಿಂತನೆಯ ಜತೆಗೆ ಸದ್ವರ್ತನೆಯೂ ಇರಬೇಕು. ಸದ್ವರ್ತನೆ ಎಂದರೆ ಎಚ್ಚರಿಕೆಯ ವರ್ತನೆ ಎಂದರ್ಥ ಎಂದು ತಿಳಿಸಿದರು.
ನಾವು ಸದಾ ಸಮತೋಲನ ಕಾಪಾಡಿಕೊಳ್ಳಬೇಕು. ಇದರ ಜತೆಗೆ ಪ್ರಬುದ್ಧತೆಯನ್ನೂ ಬೆಳೆಸಿಕೊಳ್ಳಬೇಕು. ಪ್ರಬುದ್ಧತೆ ಸಾಧನೆಯಿಂದ ಸಿದ್ಧಿಸುತ್ತದೆ. ಜಾಣ ನಡೆ ಜಾಣ ನುಡಿ ಇರಬೇಕು. ನಮ್ಮನ್ನು ನೋಡಿ ಬೇರೆಯವರು ನಗಬಾರದು. ಅಗ್ನಿ ಸಣ್ಣದಾದರೂ ಸುಡುತ್ತದೆ. ಕಾರಣ ಅಗ್ನಿಯ ಕೆಲಸ ಸುಡುವುದು. ಜ್ಞಾನ ಎನ್ನುವ ಅಗ್ನಿಯು ಸುಡುತ್ತದೆ. ಇದು ಕೆಟ್ಟದ್ದನ್ನು ಸುಡುತ್ತದೆ ಎಂದು ಹೇಳಿದರು. ಮುರುಘಾ ಮಠದಲ್ಲಿ ಕಳೆದ 30 ವರ್ಷಗಳಿಂದ ತಂದಿರುವ ಪರಿವರ್ತನೆಗಳು ಹಲವು. ಸಂಸ್ಥೆಗಳಲ್ಲಿ ಪರಿವರ್ತನೆ ಆಗಬೇಕು. ಒಳನೋಟವು ಸಹ ಸಾಧನೆಯ ಮೂಲಕ ಸಿದ್ಧಿಸುತ್ತದೆ. ಈ ಸಂಸ್ಥೆಯ ಜೊತೆ ಸಂಪರ್ಕ ಇಟ್ಟುಕೊಂಡವರಿಗೆ ಪರಿವರ್ತನೆ ಸಾಧ್ಯವಾಗಿದೆ. ಸಾಮಾಜಿಕವಾದ ಪರಿವರ್ತನೆ. ಕಲ್ಲುನಾಗರಕ್ಕೆ ಹಾಲೆರೆಯುವುದನ್ನು ಬಿಡಿಸಿ ಹಸುಗೂಸುಗಳಿಗೆ, ಚಿಕ್ಕಮಕ್ಕಳಿಗೆ ಹಾಲನ್ನು ಕೊಡುವುದರ ಮೂಲಕ ಪರಿವರ್ತನೆಯನ್ನು ತರಲಾಯಿತು. ಧಾರ್ಮಿಕ ಪರಿವರ್ತನೆಯೂ ನಮ್ಮಲ್ಲಿ ಸಾಧ್ಯವಾಗಿದೆ ಎಂದು ತಿಳಿಸಿದರು.