Advertisement

ಚಂದನವನದಲ್ಲಿ ಹಿತವಾದ ಗಾಳಿ!

03:45 AM May 10, 2017 | |

ಸಂಭಾಷಣೆಯನ್ನು ಒಪ್ಪಿಸುತ್ತಿರುವಂತೆ ತೋರುತ್ತಿರುವ ಬೊಗಸೆ ಕಂಗಳ ಈ ಸ್ನಿಗ್ಧ ಸುಂದರಿ, ಹಿತಾ ಚಂದ್ರಶೇಖರ್‌. ಕನ್ನಡದಲ್ಲಿ ನಾಯಕಿಯರಿಲ್ಲ ಎಂಬ ಕೊರತೆಯನ್ನು ತುಂಬಬಲ್ಲೆನೆಂಬ ಆತ್ಮವಿಶ್ವಾಸದಲ್ಲಿ ಬಲಗಾಲಿಟ್ಟು ಬಂದವರು. ಅದಕ್ಕೂ ಮುಂಚೆ ನಾಟಕಗಳಲ್ಲಿ ಪಾರ್ಟು ಮಾಡಿದರು. ಆ್ಯಕ್ಟಿಂಗ್‌ ಸ್ಕೂಲ್‌ಗೆ ಹೋದರು. ಜಾಹಿರಾತುಗಳಲ್ಲಿ ನಟಿಸಿದರು. ಡ್ಯಾನ್ಸಿಂಗ್‌ ಸ್ಟಾರ್‌ ರಿಯಾಲಿಟಿ ಶೋ ವಿಜೇತೆ. ಇವೆಲ್ಲಕ್ಕೂ ಮುಂಚೆ ಪ್ರತಿಷ್ಟಿತ ಕಂಪನೀಲಿ ಬಿಝಿನೆಸ್‌ ಅನಾಲಿಸ್ಟ್‌! ಟಿಪ್‌ ಟಾಪ್‌ ದಿರಿಸಿನಲ್ಲಿ, ಕಾರ್ಪೊರೇಟ್‌ ಜಗತ್ತಿನಲ್ಲಿ ಅವರು ಕಳೆದುಹೋಗಬೇಕಿತ್ತು. ಆದರೆ ಹಿತಾ ಆ ನೈನ್‌ ಟು ಫೈವ್‌ ಜಾಬ್‌ ಬಿಟ್ಟು ಕಾಲ್‌ ಕೆ.ಜಿ ಪ್ರೀತಿ ಮತ್ತು ಬೆಟ್ಟದಷ್ಟು ಕನಸುಗಳನ್ನು ಕಂಗಳಲ್ಲಿ ತುಂಬಿಕೊಂಡು ಕನ್ನಡ ಚಿತ್ರರಂಗಕ್ಕೆ ಬಂದರು. ಅಂದ ಹಾಗೆ ಇವರ ತಂದೆ- ತಾಯಿ ಸಿಹಿಕಹಿ ಚಂದ್ರು ಮತ್ತು ಗೀತಾ ದಂಪತಿಗಳು.

Advertisement

ಮನೇಲಿ ಅಪ್ಪ ಅಮ್ಮ ಇಬ್ಬರೂ ಸಿನಿಮಾ ಹಿನ್ನೆಲೆಯವರಾಗಿದ್ದರೆ, ಮಕ್ಕಳಿಗೆ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡೋದು ತುಂಬಾ ಸುಲಭ ಅಂತಾರೆ. ನಿಜಾನಾ?
– ನಾನೂ ಹಂಗೇ ಅನ್ಕೊಂಡಿದ್ದೆ. ಆರಾಮಾಗಿ ಈ ಫೀಲ್ಡ್‌ನಲ್ಲಿ ಅವಕಾಶಗಳು ಹುಡುಕ್ಕೊಂಡು ಬರುತೆÌ ಅಂತ. ಆದ್ರೆ ಅದು ನಿಜ ಅಲ್ಲ ಅಂತ ನಿಧಾನವಾಗಿ ಅರ್ಥ ಆಯ್ತು. ಅಪ್ಪ ಅಮ್ಮಂದಿರ ಸಹಾಯದಿಂದ ಕಾಂಟ್ಯಾಕ್ಟ್ಗಳು ಸಿಕ್ಕಬಹುದು, ಪ್ರತಿಭಾನ್ವಿತರನ್ನು ಭೇಟಿ ಮಾಡಬಹುದು, ಮಾರ್ಗದರ್ಶನ ಪಡೆಯಬಹುದು. ಆದರೆ, ಆ್ಯಟ್‌ ದಿ ಎಂಡ್‌ ಆಫ್ ದಿ ಡೇ, ನಮ್ಮನ್ನು ಉಳಿಸೋದು ನಮ್ಮ ಪರಿಶ್ರಮ, ಪ್ರತಿಭೆಯೇ ಹೊರತು ಇನ್ಯಾವುದೂ ಅಲ್ಲ.

ಇದಕ್ಕೆ ಮುಂಚೆ ನಟನೆಯ ಅನುಭವ ಇತ್ತಾ? 
ನಟನೆಯ ಮೊದಲ ಪಾಠ ಸಿಕ್ಕಿದ್ದು ಬಿಂಬ ರಂಗಶಾಲೆಯ ಬೇಸಿಗೆ ಶಿಬಿರದಲ್ಲಿ. ಅಲ್ಲಿ ಪ್ರಕಾಶ್‌ ಸರ್‌ ನಮಗೆ ನಾಟಕ ಕಲಿಸೋರು. ಅವರು ಎ. ಎಸ್‌. ಮೂರ್ತಿಯವರ ಮಗ. ಸಂಜೆ ಶಿಬಿರ ಮುಗಿದ ಮೇಲೂ ನನ್ನನ್ನು ಕೂರಿಸಿಕೊಂಡು ತಿದ್ದಿ ಹೀಗಲ್ಲ, ಹಾಗೆ ಅಂತ ಹೇಳಿಕೊಡುತ್ತಿದ್ದರು. ಶಿಬಿರದ ಕೊನೇಲಿ “ಪಿಟ್ಟೆಕಾಟ’ ಅಂತ ನಾಟಕ ಮಾಡಿದ್ವಿ. ಅದರಲ್ಲಿ ನಾನು ಕುರಿ ಮತ್ತು ನಿರೂಪಕಿ ಎರಡೂ ಆಗಿದ್ದೆ. ನಿರೂಪಣೆ ಮಾಡಿ ಕುರಿಯಾಗಿ ಬಂದು ಕುಳಿತುಕೊಳ್ಳಬೇಕಿತ್ತು. ಅದರಲ್ಲಿ 8 ನಿಮಿಷಗಳಷ್ಟು ಉದ್ದದ ಡೈಲಾಗೆಲ್ಲಾ ಇತ್ತು. ಆ ದಿನಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೀನಿ.

ನೀವು ಚಿಕ್ಕವರಾಗಿದ್ದಾಗ ಅಪ್ಪ ಅಮ್ಮ ಇಬ್ಬರೂ ಸಿನಿಮಾ, ಧಾರಾವಾಹಿ ಅಂತ ಬಿಝಿ ಇರುತ್ತಿದ್ದರಾ?
ಹೌದು. ಆದರೆ ಅವರಿಬ್ಬರೂ ಕೆಲಸಗಳಲ್ಲಿ ಎಷ್ಟೇ ಬಿಝಿ ಇರುತ್ತಿದ್ದರೂ ನಮಗಾಗಿ ಸಮಯ ಮೀಸಲಿಡುತ್ತಿದ್ದರು. ಯಾವಾಗಲೂ ಅವರ ಮೊದಲ ಪ್ರಯಾರಿಟಿ ನಾನು ಮತ್ತು ತಂಗಿಯೇ ಆಗಿದ್ದೆವು. ಜೊತೆಗೆ ಅವರಿಲ್ಲದ ಸಂದರ್ಭದಲ್ಲೂ ಅವರ ಕೊರತೆ ಬಾರದಂತೆ ನಮ್ಮನ್ನು ತಯಾರು ಮಾಡಿದ್ದರು. 

ಅವರನ್ನು ಟಿ.ವಿಯಲ್ಲಿ, ಸಿನಿಮಾಗಳಲ್ಲಿ ನೋಡುತ್ತಿದ್ದಾಗ ಏನನ್ನಿಸುತ್ತಿತ್ತು? 
ಖುಷಿ ಪಡುತ್ತಿದ್ದೆ. ಅಮ್ಮ ಸಿನಿಮಾಗಳಲ್ಲಿ ಹೆಚ್ಚಾಗಿ ಅಳುಮುಂಜಿ ಪಾತ್ರಗಳನ್ನೇ ಮಾಡುತ್ತಿದ್ದರು. ಕರ್ಪೂರದ ಗೊಂಬೆ ಸಿನಿಮಾದಲ್ಲಿ ಅಮ್ಮನಿಗೆ ಶ್ರುತಿಯವರ ತಾಯಿಯ ಪಾರ್ಟು. ಸಿನಿಮಾದಲ್ಲಿ ಅವರು ನೋವುಂಡು ಸತ್ತುಹೋಗುತ್ತಾರೆ. ಆ ಸೀನ್‌ನಲ್ಲಿ ಅಮ್ಮನನ್ನು ನೋಡಿ ನಾನು ಗೊಳ್ಳೋ ಅಂತ ಅತ್ತುಬಿಟ್ಟಿದ್ದೆ. ಆಮೇಲಾಮೇಲೆ ಅದು ಸಿನಿಮಾ, ಅದರಲ್ಲಿ ಎಲ್ಲವೂ ನಟನೆ ಅಂತ ಗೊತ್ತಾಯ್ತು.

Advertisement

ಮರೆಯಲಾಗದ ಸಂತಸದ ಕ್ಷಣ ಅಂತ ಯಾವುದನ್ನು ಹೇಳುತ್ತೀರಾ?
ನನ್ನ ತಂಗಿ “ಖುಷಿ’ ಹುಟ್ಟಿದ ದಿನ. ನನಗೆ ತಂಗಿ ಬೇಕು ಅಂತ ಅಪ್ಪ ಅಮ್ಮನಲ್ಲಿ ಹೇಳಿ ಹೇಳಿ ಅವರ ತಲೆ ತಿನ್ನುತ್ತಿದ್ದೆ. ಕಡೆಗೂ ನನ್ನಾಸೆ ಫ‌ಲಿಸಿತು. ಆ ದಿನ ಆಸ್ಪತ್ರೇಲಿ ಡಾಕ್ಟರು ಅಪ್ಪನ ಹತ್ರ ಬಂದು “ಹೆಣ್ಮಗು ಬೇಕು ಅಂತ ಕೇಳುತ್ತಿದ್ದಿರಲ್ಲ, ಹೆಣ್ಮಗೂನೇ ಹುಟ್ಟಿದೆ’ ಅಂದಾಗ ನಾನು ಖುಷಿ ತಾಳಲಾರದೆ ಅಪ್ಪನ ಮೈಮೇಲೆ ಹಾರಿ, ಅವರನ್ನು ತಬ್ಬಿ, ಆಸ್ಪತ್ರೆಯಿಡೀ ಓಡಿ ದಾಂಧಲೆಯೆಬ್ಬಿಸಿದ್ದೆ. 

ಸಿನಿಮಾ ಪ್ರಪಂಚವನ್ನು ಗಮನಿಸುತ್ತಿದ್ದೀರಾ? ಅದು ಬಿಟ್ಟರೆ ಬೇರೆ ಹವ್ಯಾಸಗಳು?
ಹೌದು ಕನ್ನಡ ಚಿತ್ರಗಳನ್ನು ಥಿಯೇಟರ್‌ಗೆ ಹೋಗಿ ನೋಡ್ತೀನಿ. ಇತ್ತೀಜಿಗಷ್ಟೆ ರಾಗ ಸಿನಿಮಾ ನೋಡಿದೆ. ಇಷ್ಟ ಆಯ್ತು. ಬೇರೆ ಭಾಷೆಗಳ ಚಿತ್ರಗಳನ್ನು ಪರಿಚಿತರು ಯಾರಾದರೂ ಚೆನ್ನಾಗಿದೆ ಅಂತ ರೆಕಮೆಂಡ್‌ ಮಾಡಿದರೆ ಅದನ್ನೂ ನೋಡ್ತೀನಿ. ಅಪ್‌ಡೇಟ್‌ ಆಗುವುದು ತುಂಬಾ ಮುಖ್ಯ. ಹವ್ಯಾಸವೆಂದರೆ ಟ್ರಾವೆಲಿಂಗ್‌, ಪುಸ್ತಕ ಓದಿ¤àನಿ. ಪೌಲೊ ಕೊಯೆಲೊ ಪುಸ್ತಕಗಳು ಇಷ್ಟವಾಗುತ್ತವೆ.

ಕಾಲ್‌ ಕೆ.ಜಿ ಸಿನಿಮಾದಲ್ಲಿ ಪ್ರೀತಿ ಚಾನ್ಸ್‌ ಸಿಕ್ಕಿದ್ದು ಹೇಗೆ?
ನಾನು ಭಟ್ಟರ ರಾಡಾರ್‌ನಲ್ಲಿ ಯಾವತ್ತೂ ಇದ್ದೆ. ಅವರು ಆಡಿಷನ್‌ಗೆ ಕರೆದಾಗಲೆಲ್ಲಾ ಹೋಗಿ ಬರುತ್ತಿದ್ದೆ. ಆಯ್ಕೆಯಾಗಿರಲಿಲ್ಲ. ಕಾಲ್‌ ಕೆ.ಜಿ ಸಿನಿಮಾ ಅವರ ನಿರ್ಮಾಣದ್ದು ಅಂತ ಮೊದಲು ಗೊತ್ತಿರಲಿಲ್ಲ. ಆಡಿಷನ್‌ ಕೊಟ್ಟು ಎಷ್ಟೋ ತಿಂಗಳಾದ ಮೇಲೆ ಫೋನ್‌ ಮಾಡಿ ಸೆಲೆಕ್ಟ್ ಆಗಿರೋದನ್ನು ಹೇಳಿದರು. ನನ್ನ ಮಟ್ಟಿಗೆ ಈ ಸಿನಿಮಾ ಒಂದು ದೊಡ್ಡ ಬ್ರೇಕ್‌. ಡ್ಯಾನ್ಸಿಂಗ್‌ ಸ್ಟಾರ್‌ ರಿಯಾಲಿಟಿ ಶೋ ನಂತರ ನನ್ನನ್ನು ಜನರು ನೆನಪಿಟ್ಟುಕೊಳ್ಳುವಂತೆ ಮಾಡಿದೆ ಈ ಸಿನಿಮಾ.

ನಿಮಗೆ ಹುಚ್ಚು ಅಭಿಮಾನಿ ಅಂತ ಯಾರೂ ಇಲ್ವಾ? ಸ್ಟಾಕರ್‌ ಥರ?
ಯಾ… ಒಬ್ಬ ಇದ್ದಾನೆ. ಫೇಸ್‌ಬುಕ್‌ನಲ್ಲಿ ದಿನಾ ಮೆಸೇಜ್‌ ಕಳಿಸುತ್ತಾನೆ. ಬೆಳಗ್ಗೆ ಗುಡ್‌ ಮಾರ್ನಿಂಗ್‌. ಮಧ್ಯಾಹ್ನ ಗುಡ್‌ ಆಫ್ಟರ್‌ನೂನ್‌. ಸಂಜೆ ಗುಡ್‌ ಈವ್‌ನಿಂಗ್‌. ರಾತ್ರಿ ಗುಡ್‌ನೈಟ್‌. ಇದು ಪ್ರತಿ ದಿನ! ಆಮೇಲೆ ವ್ಯಾಲೆಂಟೈನ್ಸ್‌ ಡೇ, ಬರ್ತ್‌ಡೇ ಸಂದರ್ಭದಲ್ಲಿ ಗ್ರೀಟಿಂಗ್‌ ಕಾರ್ಡ್‌ ಕಳಿಸುತ್ತಾನೆ.

ಪಾಠ ಕಲಿಸೋಕೆ ಪೊಲೀಸ್‌ ಸ್ಟೇಷನ್‌ಗೆ ಕರೊRಂಡು ಹೋದ್ರು
ಚಿಕ್ಕೋಳಿದ್ದಾಗ ಅಪ್ಪಂದು ಒಂದೇ ಕಂಡೀಷನ್ನು. 5 ವರ್ಷವಾಗುವವರೆಗೂ ಬಬಲ್‌ ಗಂ ತಿನ್ನಬಾರದು ಅಂತ. “6ನೇ ವರ್ಷಕ್ಕೆ ನಾನೇ ತಂದುಕೊಡುತ್ತೀನಿ’ ಅಂತ ಬೇರೆ ಹೇಳಿದ್ರು. ಆದ್ರೆ ನನಗೆ ಬಬಲ್‌ಗ‌ಂ ಮತ್ತು ಚಾಕೊಲೇಟ್‌ ಅಂದ್ರೆ ಇಷ್ಟ. ಅಪ್ಪನಿಗೆ ಗೊತ್ತಿಲ್ಲದಂತೆ ತಿನ್ನುತ್ತಿದ್ದೆ. ತಾತನ ಪಾಕೆಟ್‌ನಿಂದ ಅವರಿಗೆ ಹೇಳದೆ 1 ರೂ., 2 ರೂ. ತೆಗೆದುಕೊಂಡು ಅಂಗಡಿಗೆ ಹೋಗುತ್ತಿದ್ದೆ. ತಾತನಿಗೂ ನಾನೇ ತೆಗೆದುಕೊಂಡಿದ್ದು ಅಂತ ಗೊತ್ತಿರುತ್ತಿತ್ತು. ಅದಕ್ಕೇ ಸುಮ್ಮನಿರುತ್ತಿದ್ದರು. ಒಂದು ಸಲ ನಾನು 5 ರೂ. ತೆಗೆದುಕೊಂಡೆ. ಬಬಲ್‌ಗ‌ಂ ತಿನ್ನೋಕೆ. ಅದೊಂದು ದಿನ ಮಾತ್ರ ತಾತ ಅಪ್ಪನ ಹತ್ರ ಹೇಳಿಬಿಟ್ಟಿದ್ದಾರೆ, 5 ರೂ ತೆಗೆದುಕೊಂಡಿದ್ದಾಳೆ ಅಂತ. ಅಪ್ಪ ವಿಚಾರಣೆ ಶುರು ಮಾಡಿದರು. ಬಬಲ್‌ಗ‌ಂ ರಹಸ್ಯ ಹೊರಬಿತ್ತು. ನಾನೀಗ ಎರಡು ಅಪರಾಧ ಮಾಡಿ ಸಿಕ್ಕಿಬಿದ್ದಿದ್ದೆ. ಕಳ್ಳತನ ಮತ್ತು ನಿಯಮ ಉಲ್ಲಂಘನೆ. ಅಪ್ಪ “ಬಾ ನಿನ್ನ ಪೊಲೀಸ್‌ನೋರಿಗೆ ಹಿಡಿದುಕೊಡ್ತೀನಿ’ ಅಂತ ಸ್ಟೇಷನ್‌ಗೆ ಕರೆದುಕೊಂಡು ಹೋಗಿಯೇ ಬಿಟ್ಟರು. ನಾನು ದಾರಿಯುದ್ದಕ್ಕೂ ಅಳ್ತಾ ಇದ್ದೆ “ಬೇಡಪ್ಪಾ… ಇನ್ಮೆàಲೆ ತಿನ್ನಲ್ಲ’ ಅಂತ. ಸ್ಟೇಷನ್‌ನಲ್ಲಿ ಇನ್ಸ್‌ಪೆಕ್ಟರ್‌ ಬೇರೆ ಗಂಭೀರವಾಗಿ ನನ್ನನ್ನು ಮಾತಾಡಿಸೋಕೆ ಶುರು ಮಾಡಿದ್ರು. ಅವರು ಅಪ್ಪನ ಫ್ರೆಂಡ್‌ ಅಂತ ಆಮೇಲೇ ಗೊತ್ತಾಗಿದ್ದು. ಅವರೂ ಅಪ್ಪನ ನಾಟಕದಲ್ಲಿ ಶಾಮೀಲಾಗಿದ್ದರು. ಅದಾದ ಮೇಲೆ ಯಾವತ್ತೂ ಅಪ್ಪನಿಗೆ ಗೊತ್ತಿಲ್ಲದಂತೆ ಬಬಲ್‌ ಗಂ ತಿಂದಿಲ್ಲ!

ಚಾಕೊಲೇಟಿನ ಅಭಿಷೇಕ ಮಾಡಿದ್ರು
ಅಪ್ಪ ಅಮ್ಮಂದಿರು ಮಕ್ಕಳನ್ನ ದೇವರ ಥರ ನೋಡ್ತಾರೆ. ನಮ್ಮನೇಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನಗೆ ಅಭಿಷೇಕವನ್ನೇ ಮಾಡಿದ್ದರು. ಅಭಿಷೇಕ ಅಂದರೆ ಅಂತಿಂಥ ಅಭಿಷೇಕ ಅಲ್ಲ. ಫಾರಿನ್‌ ಚಾಕೊಲೇಟಿನ ಅಭಿಷೇಕ. ವಿಷಯ ಏನೂ ಅಂದ್ರೆ ನಂಗೆ ಚಾಕೊಲೇಟ್‌ ಅಂದ್ರೆ ಪಂಚಪ್ರಾಣ. ಅದ್ರಲ್ಲೂ ಫಾರಿನ್‌ ಚಾಕೊಲೇಟ್‌ ಸಿಕ್ಕರಂತೂ ಮುಗಿದೇ ಹೋಯ್ತು. ಊಟ, ನಿದ್ದೆ, ಏನೂ ಬೇಡ. ಅಂಥದ್ದರಲ್ಲಿ ಅಪ್ಪ ಒಂದು ಸಲ ಅಮೆರಿಕಕ್ಕೆ ಹೋಗಿದ್ದರು. ಬರೋವಾಗ ಚಾಕಲೇಟ್‌ ತನ್ನಿ ಅಂತ ಏನೋ ಹೇಳಿದ್ದೆ. ಆದರೆ ಎಷ್ಟು ಅಂತ ಹೇಳಿರಲಿಲ್ಲ. ಸಾಮಾನ್ಯವಾಗಿ ಫಾರಿನ್‌ನಿಂದ ಬರುವವರು ಎಷ್ಟು ಚಾಕಲೇಟ್ಸ್‌ನ ತರಬಹುದು, ಹತ್ತು? ಇಪ್ಪತ್ತು? ಮೂವತ್ತು? ಅಪ್ಪ ಬರೋವಾಗ ಮೂರು ಬಕೆಟ್‌ ತುಂಬಾ ಫಾರಿನ್‌ ಚಾಕಲೇಟ್ಸ್‌ ತಂದಿದ್ದರು. ಹರ್ಶಿ ಬಾರ್‌, ಕಿಸ್ಸಸ್‌, ಎಂ ಎನ್‌ ಎಂ, ಲಿಂಟ್‌, ಎಷ್ಟೊಂದು ವೆರೈಟಿ ಇತ್ತು ಗೊತ್ತಾ!? ಅಲ್ಲಿಂದ ಬಂದ ಮೇಲೆ ಮಾಡಿದ ಮೊದಲ ಕೆಲಸ ಚಾಕೊಲೇಟಾಭಿಷೇಕ.

ಪ್ರೀತಿ ಗೀತಿ ಇತ್ಯಾದಿ
ಇಲ್ಲಿ ತನಕ ಆಗಿಲ್ಲ. ಈವಾಗ ಇರೋ ಬಿಝಿ ಶೆಡ್ನೂಲ್‌ನಲ್ಲಿ ಲವ್‌ ಆಗೋದೂ ಡೌಟೇ. ಮುಂದೆಂದಾದರೂ ಆದರೂ ಆಗಬಹುದು. ಆದರೆ ಕಾಲೇಜಲ್ಲಿ ಓದೋವಾಗ ಒಬ್ಬ ಸೀನಿಯರ್‌ ಮೇಲೆ ಕ್ರಶ್‌ ಇತ್ತು. ಅವನ ಬಳಿ ಹೇಳಿಕೊಂಡಿರಲಿಲ್ಲ. ಆಗ ನಾನು ತುಂಬಾ ನಾಚಿಕೆ ಸ್ವಭಾವದವಳಾಗಿದ್ದೆ. ಅವನನ್ನ ಮಾತಾಡಿಸಬೇಕು ಅಂತ ಹೋಗುತ್ತಿದ್ದೆನಾದರೂ ಧೈರ್ಯ ಸಾಲದೆ ಅರ್ಧಕ್ಕೇ ವಾಪಸ್‌ ಬಂದುಬಿಡುತ್ತಿದ್ದೆ. ಕಾರಿಡಾರಲ್ಲಿ ಅವನು ಕಣ್ಣಿಗೆ ಬಿದ್ದಾಗಲೆಲ್ಲಾ ತಡವರಿಸುತ್ತಿದ್ದೆ, ಬೆವರುತ್ತಿದ್ದೆ, ನಾಚಿ ನೀರಾಗುತ್ತಿದ್ದೆ. ಅದನ್ನೆಲ್ಲಾ ಯೋಚಿಸಿದರೆ ನಗು ಬರುತ್ತೆ. ಆ ಸೀನಿಯರ್‌ಗೆ ಈಗ ಮದುವೆಯಾಗಿದೆ. 

ಸೆಲಬ್ರಿಟಿ ಆಗಿದ್ದೀನಿ ಅಂತ ಗೊತ್ತಾಗಿದ್ದು
ಅಪ್ಪ ಅಮ್ಮ ಇಬ್ರೂ “ಆದರ್ಶ ದಂಪತಿಗಳು’ ಟಿ.ವಿ ಪ್ರೋಗ್ರಾಂ ನಡೆಸಿಕೊಡೋಕೆ ಊರೂರಿಗೆ ಹೋಗ್ತಾರೆ. ಶೂಟಿಂಗ್‌ ನಡೆಯೋವಾಗ ಜನರು ಅವರನ್ನ ಮಾತಾಡಿಸಿಕೊಂಡು ಹೋಗೋಕೆ ಅಂತಲೇ ಬರುತ್ತಾರೆ. ದಾವಣಗೆರೆ ಅಂತ ಕಾಣಿಸುತ್ತೆ. ಅಲ್ಲಿ ಶೂಟಿಂಗ್‌ ಮಧ್ಯ ಒಬ್ಬರು ಅಪ್ಪನನ್ನು ಮಾತಾಡಿಸೋಕೆ ಅಂತ ಕಾಯ್ತಾ ಇದ್ದರಂತೆ. ತುಂಬಾ ಹೊತ್ತಾದ ಮೇಲೆ ಅಪ್ಪ ಬಿಡುವು ಮಾಡಿಕೊಂಡು, ತಮ್ಮನ್ನು ನೋಡೋಕೆಂದೇ ಬಂದಿದ್ದಾರಲ್ಲ, ಅಂತ ಹತ್ರ ಹೋದರೆ ಅವರು “ನೀವು ಹಿತಾ ಅವರ ತಂದೆ ಅಲ್ವಾ?’ ಅಂತ ಕೇಳಿದರಂತೆ! ಹೋದ ಕಡೆಯಲ್ಲೆಲ್ಲಾ ಜನರು ಹೀಗೆಯೇ ಕೇಳತೊಡಗಿದಾಗ ಅವರಿಗೂ ಗಾಬರಿಯಾಗಿದೆ. ಖುಷಿಯಿಂದ ಮನೆಗೆ ಬಂದು ನೀನು ಸೆಲಬ್ರಿಟಿಯಾಗಿದ್ದೀಯಾ ಅಂದ್ರು. “ಇಷ್ಟು ವರ್ಷದಿಂದ ಇಂಡಸ್ಟ್ರಿಯಲ್ಲಿರುವ ನಮ್ಮನ್ನ ಬಿಟ್ಟು ಜನ ನಿನ್ನನ್ನು ಕೇಳ್ತಿದ್ದಾರೆ ನೋಡು’ ಅಂತ ಕಾಲೆಳೆಯುತ್ತಾರೆ ಅಪ್ಪ.

ನನ್ನಿಷ್ಟ
ನಟ: ಸುದೀಪ್‌
ನಟಿ: ರಮ್ಯಾ
ಸ್ಥಳ: ಬಾಲಿ, ಇಂಡೋನೇಷ್ಯಾ
ಆಹಾರ: ಮೊಸರನ್ನ

ಹಿತಾ ಹಾಟ್‌ ಫೇವರಿಟ್‌ ಈತ
ಆಳೆತ್ತರದ ಆಜಾನುಬಾಹು. ಸಿಂಹ ಘರ್ಜನೆಯ ದನಿ. ಹೆಸರು ಜೇಸನ್‌ ಮಮೋ
ಹಾಲಿವುಡ್‌ನ‌ ಟಿ.ವಿ ಧಾರಾವಾಹಿ “ಗೇಮ್‌ ಆಫ್ ಥ್ರೋನ್ಸ್‌’ನ, “ಖಾಲ್‌ ದ್ರೋಗೊ’ ಪಾತ್ರದಿಂದ ಪ್ರಖ್ಯಾತ.

ಕನಸಿನ ಹುಡುಗನ ಕುರಿತು ಹಿತಾಳ ಕನವರಿಕೆಗಳು
ಆಳೆತ್ತರ
ಪ್ರಾಮಾಣಿಕತೆ
ಬುದ್ಧಿವಂತಿಕೆ
ಹಾಸ್ಯಪ್ರಜ್ಞೆ
ಗುರಿ ಇರಬೇಕು/ ಸಾಧನೆ ಮಾಡಿರಬೇಕು
ಅಪ್ಪ ಅಮ್ಮನಿಗೆ ಇಷ್ಟವಾಗಬೇಕು
ಚಾಕೊಲೇಟ್‌ ಕೊಡಿಸಬೇಕು
ತನ್ನ ಕೋಪ ನಿಯಂತ್ರಿಸಬೇಕು

ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next