ಮಡಿಕೇರಿ: ಮೂವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಗೋಣಿ ಕೊಪ್ಪ ಪೊಲೀಸರು ಬಂಧಿಸಿ, ಎರಡು ಬೈಕ್ ಹಾಗೂ 3 ಲ.ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಇರಟಿ ತಾಲ್ಲೂಕಿನ ಮಂಡವ ಪರಂಬು ಗ್ರಾಮದ ಟಿ.ಎ.ಸಲೀಂ (39), ಕಣ್ಣೂರು ಜಿಲ್ಲೆ ಮಟ್ಟನೂರಿನ ನಡುವ ಕಾಡು ಗ್ರಾಮದ ಕೆ.ಅನ್ಸಾರ್ (24) ಹಾಗೂ ವಿರಾಜಪೇಟೆ ತಾಲೂಕಿನ ನೆಹರೂ ನಗರದ ಎನ್. ಪಿ. ಅಝೀಝ್ ಬಂಧಿತರು.
ಅವರಿಂದ ಎರಡು ಮೋಟಾರ್ ಸೈಕಲ್, 80 ಗ್ರಾಂ ಚಿನ್ನಾಭರಣ ಹಾಗೂ ನಗದು ಸಹಿತ ಸುಮಾರು 3 ಲ. ರೂ. ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಕೊಡಗು ಸಹಿತ ಹೊರ ಜಿಲ್ಲೆ, ರಾಜ್ಯ ಗಳಲ್ಲಿಯೂ ಕಳವು ಮಾಡಿದ್ದ ಇವರು ಬೈಕಿ ನಲ್ಲಿ ಬಂದು ತಿತಿಮತಿಯಲ್ಲಿ ಕಳ್ಳತನಕ್ಕೆ ಮುಂದಾಗಿದ್ದರು. ಆಗ ಗಸ್ತು ನಿರತ ಪೊಲೀಸರು ವಿಚಾರಿಸಿದಾಗ ಕಳ್ಳರ ಜಾತಕ ಬಯಲಾಯಿತು.
ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಪೊನ್ನಂಪೇಟೆ, ತಿತಿಮತಿ ನಗರ, ವಿರಾಜಪೇಟೆಯ ಪಂಜರಪೇಟೆ, ಸುಭಾಶ್ನಗರ, ಗೋಣಿಕೊಪ್ಪದ ವೆಂಕಟಪ್ಪ ಬಡಾವಣೆ, ಸುಂಟಿಕೊಪ್ಪ ಹಾಗೂ ಹುಣಸೂರು ಪಟ್ಟಣದಲ್ಲಿ ಮನೆ ಕಳವು ಮಾಡಿದ್ದೇವೆಂದು ಆರೋಪಿಗಳು ತಿಳಿಸಿದರು.
ಇತ್ತೀಚೆಗೆ ತಿತಿಮತಿಯ ಪ್ರವೀಣ್ ಕುಮಾರ್ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಕೂಡ ಇವರೇ ಕದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.